
ಬೆಂಗಳೂರು, ಜನವರಿ 22: ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲ ಅಧಿವೇಶನ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸರ್ಕಾರ ನೀಡಿದ ಭಾಷಣ ಓದದೆ, ಕೇವಲ ಎರಡು ಸಾಲು ಓದಿ ಅಧಿವೇಶನದಿಂದ ಹೊರನಡೆದಿದ್ದಾರೆ. ಗವರ್ನರ್ ನಡೆಗೆ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಿರ್ಗಮನ ವೇಳೆ ಘೋಷಣೆ ಕೂಗುವ ಮೂಲಕ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಜಂಟಿ ಅಧಿವೇಶನ ಹೈಡ್ರಾಮಾಗೆ ಸಾಕ್ಷಿಯಾಗಿದೆ.
ಕೇವಲ ಎರಡು ಸಾಲು ಭಾಷಣ ಮಾಡಿ ಸದನದಿಂದ ಹೊರ ನಡೆಯುತ್ತಿದ್ದ ಗವರ್ನರ್ ಬಳಿಗೆ ತೆರಳಲು ಅನೇಕ ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ. ಈ ವೇಳೆ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟಿದ್ದು, ಭಾಷಣ ಓದುವಂತೆ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಮಾರ್ಷಲ್ಗಳು ತಡೆದಿದ್ದು, ರಾಜ್ಯಪಾಲರು ಹೊರ ಹೋಗಲು ಅನುವು ಮಾಡಿಕೊಟ್ಟರು.
ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ; ವಿಧಾನಸಭೆಯಲ್ಲಿ ಹೈಡ್ರಾಮಾ
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸಿದ್ದು, ಈ ನಡೆ ಸಂವಿಧಾನ ಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಪಾಲ ಗೆಹ್ಲೋಟ್ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯಪಾಲರು ತಾವೇ ತಯಾರು ಮಾಡಿದ ಭಾಷಣ ಮಾಡಿದ್ದಾರೆ. ಈ ಮೂಲಕ ಸಂವಿಧಾನದ ವಿಧಿಗಳನ್ನು ವಿರೋಧಿಸಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ನಮ್ಮ ಶಾಸಕರು ಪ್ರತಿಭಟನೆ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಪ್ರಕಾರ ಭಾಷಣ ಮಾಡೋದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಅವರು ರೆಡಿ ಮಾಡಿ ಭಾಷಣವನ್ನು ಓದುವಂತಿಲ್ಲ. ಸರ್ಕಾರ ರೆಡಿ ಮಾಡಿದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು ಎಂದು ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನ್‌ರೇಗಾ ಮರುಸ್ಥಾಪನೆ ಮಾಡಿ, ವಿಬಿ ಜಿ ರಾಮ್‌ಜೀ ರದ್ದು ಮಾಡುವವರೆಗೂ ನಿರಂತರ ಹೋರಾಟ ಮಾಡೋದಾಗಿ ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.