ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾಗದು: ಹೆಚ್​ಡಿ ಕುಮಾರಸ್ವಾಮಿ

ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹಾಸನದ ಚನ್ನಂಗಿಹಳ್ಳಿ ಗ್ರಾಮದಲ್ಲಿ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದು, ಹಾಸನ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಬಗ್ಗೆ ಪರೋಕ್ಷ ಹೇಳಿಕೆ ನೀಡಿದ್ದಾರೆ. ಜತೆಗೆ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾಗದು: ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Updated By: Ganapathi Sharma

Updated on: Feb 12, 2024 | 9:56 AM

ಹಾಸನ, ಫೆಬ್ರವರಿ 12: ನರೇಂದ್ರ ಮೋದಿ (Narendra Modi) ಅವರು 3ನೇ ಬಾರಿ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗದು ಎಂದು ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಹಾಸನ (Hassan) ತಾಲ್ಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ದೇವಾಲಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ – ಜೆಡಿಎಸ್​ ಮೈತ್ರಿ ಸೀಟು ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಅದೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯ ಜಿಲ್ಲೆಯ ಪ್ರತಿದಿನ ಒಂದು ಧಾರವಾಹಿ ಇರಲೇಬೇಕು. ನಿಖಿಲ್​ನನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದ್ದರು? ಒಂದು ತಿಂಗಳಿನಿಂದ ಧಾರವಾಹಿ ನಡೆಯುತ್ತಿದೆ ಎಂದು ಹೇಳಿದರು.

ರೇವಣ್ಣ ಸ್ವಲ್ಪ ದುಡುಕಿನ ಸ್ವಭಾವದವರು: ಹೆಚ್​ಡಿಕೆ

ಹೆಚ್​ಡಿ ರೇವಣ್ಣ ಅವರಿಗೆ ಸ್ವಲ್ಪ ದುಡುಕಿನ ಸ್ವಭಾವ. ಅವರು ದುಡುಕಿನ ಸ್ಚಭಾವದಿಂದ ಜನರ ವಿರೋದ ಕಟ್ಟಿಕೊಳ್ಳುತ್ತಾರೆ. ಹೆಚ್​ಡಿ ದೇವೇಗೌಡರ ಬೆನ್ನೆಲುಭಾಗಿ ನಿಂತು ರೇವಣ್ಣ ಬೆಳೆದರು. ಅವರದ್ದು ದುಡುಕಿನ ಸ್ವಭಾವ ಆದರೂ ಮಾಡಿರುವ ಕೆಲಸ ಏನೂ ಕಡಿಮೆಯಿಲ್ಲ. ಯಾರದ್ದಾದರೂ ಮನಸ್ಸಿಗೆ ನಮ್ಮಿಂದ ನೋವಾಗಿದ್ದರೆ, ತಪ್ಪಾಗಿದ್ದರೆ ಖಂಡಿತಾ ತಿದ್ದಿಕೊಳ್ಳುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಬೆಳೆಸುವವರು ನೀವೇ ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಕೆಲಘಟನಗಳು ಹಾಸನ ಜಿಲ್ಲೆಯಲ್ಲಿ ನಡೆದಿವೆ. ಯಾವುದೇ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ. ತಮ್ಮ ರಾಜಕೀಯ ಜೀವನದಲ್ಲಿ ದೇವೇಗೌಡರು ಅಧಿಕಾರ ನೋಡಿದ್ದು ಕೇವಲ ಮೂರ್ನಾಲ್ಕು ವರ್ಷ. ಬಹುಶಃ ಅವರಿಗೆ ಕನಿಷ್ಠ ಐದು ವರ್ಷ ಅವಕಾಶ ಸಿಕ್ಕಿದ್ದರೆ ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ: ಕುಮಾರಸ್ವಾಮಿ ಪರೋಕ್ಷ ಹೇಳಿಕೆ

ಹಾಸನದಲ್ಲಿ ಕೂಡ ಜನತಾದಳ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಮೂಲಕ ಅಲ್ಲಿಯೂ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಮೂಲಕ ಪದೇಪದೆ ಅಭ್ಯರ್ಥಿ ಅಂತಿಮ ಆಗಿಲ್ಲ ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಪ್ರೀತಂಗೌಡ ಯುವಕರಿದ್ದಾರೆ, ಉತ್ಸಾಹದಲ್ಲಿ ಏನೋ ಮಾತನಾಡುತ್ತಾರೆ. ಅವರನ್ನೇ ಕಣಕ್ಕಿಳಿಸುವುದಾದರೆ ಚರ್ಚೆಮಾಡೋಣ. ಅವರೂ ನಾವು ಅಣ್ಣತಮ್ಮರ ರೀತಿ ಹೋಗಬೇಕು ಅಲ್ಲವೇ? ಪಾಪ ಮಾತಿನ ಬಿರುಸಿನಲ್ಲಿ‌ ಮಾತನಾಡುತ್ತಾರೆ, ಸರಿಮಾಡೊಣ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಬಿವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಶಾಸಕ ಯತ್ನಾಳ್ ವಾಗ್ದಾಳಿ

ಕಾಂಗ್ರೆಸ್​ ಗ್ಯಾರಂಟಿಗಳ ವಿರುದ್ಧ ಕಿಡಿ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೆಲ ಕುಟುಂಬಗಳು ಬೀದಿಪಾಲಾಗಿವೆ ಎಂದು ಕುಮಾರಸ್ವಾಮಿ ಟೀಕಿಸಿದರು. ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಸರ್ಕಾರ ಹೇಳುತ್ತದೆ. ಆದರೆ ಜನ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಕೆಲ ಕುಟುಂಬಗಳು ಬೀದಿಪಾಲಾಗುತ್ತಿವೆ. ಉತ್ತರಕರ್ನಾಟಕದ ಯುವಕ ಬಡತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಉಲ್ಲೇಖಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ