ಕಾಂಗ್ರೆಸ್ನವರದ್ದು ಲೂಟಿ ಸರ್ಕಾರ: ಆರ್ ಅಶೋಕ್, ಬೊಮ್ಮಾಯಿ ವಾಗ್ದಾಳಿ
ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿರುವ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ಕಾರವು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 12: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಲೂಟಿ ಸರ್ಕಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ವಾಗ್ದಾಳಿ ನಡೆಸಿದರು. ವಿಧಾನಮಂಡಲದ ಜಂಟಿ ಅಧಿವೇಶನ (Assembly Joint Session) ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ ನಂತರ ವಿಧಾನಸೌಧದಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ ಎಂದರು.
ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಸುಳ್ಳು ಮಾಹಿತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ. ಜನರ ಹಣವನ್ನು ಕೊಳ್ಳೆ ಹೊಡೆಯುವುದೇ ಸರ್ಕಾರದ ಕೆಲಸ ಆಗಿದೆ ಎಂದು ಅಶೋಕ ಟೀಕಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು, ಕೇಂದ್ರದ ಯೋಜನೆಯನ್ನು ನಾವೇ ತಂದಿದ್ದೀವಿ, ನಾವೇ ಮಾಡಿದ್ದು ಎಂದು ರಾಜ್ಯ ಸರ್ಕಾರ ಬೆನ್ನು ತಟ್ಟಿಕೊಂಡಿದೆ. ಕೋಮುವಾದಕ್ಕೆ ಉತ್ತೇಜನ ನೀಡುವ ಕೆಲಸ ಆಗಿದೆ. ಐದನೇ ಗ್ಯಾರಂಟಿ ಪ್ರಾರಂಭವೇ ಆಗಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೆ ಒಂದು ರೂಪಾಯಿ ಸಿಕ್ಕಿಲ್ಲ. ಬರದ ವಿಚಾರದಲ್ಲಿ ಎರಡು ಸಾವಿರ ಹಣ ಕೊಟ್ಟಿಲ್ಲ. ಕಂತು ಕಂತು ಆಗಿ ಹೋಗಿದೆ ಅಂತೆ. ರೈತರಿಗೆ ಮೋಸ ಮಾಡುತ್ತಾ ಇದ್ದಾರೆ. ಬರ ಪರಿಸ್ಥಿತಿ 25 ಸಾವಿರ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡಿದ್ದೆವು. ಅದನ್ನು ಕೊಡುವುದು ಬಿಟ್ಟು ಕೇಂದ್ರದ ಮೇಲೆ ಗೂಬೆ ಕುರಿಸುವ ಕೆಲಸ ಆಗುತ್ತಿದೆ. ಅಭಿವೃದ್ಧಿ ಕುಂಠಿತ ಆಗಿದೆ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಕೊಡುತ್ತಾ ಇದ್ದೇವೆ ಎನ್ನುತ್ತಾರೆ. ಮೊಟ್ಟೆ, ಚಿಕ್ಕಿ ಕೊಟ್ಟು ಶೌಚಾಲಯ ಕ್ಲಿನ್ ಮಾಡಿಸುವ ಕೆಲಸ ಮಾಡುತ್ತಾ ಇದ್ದಾರೆ. ಇಂದು ಒಂದು ಬೋಗಸ್ ಮಾಡಿದ್ದಾರೆ. ಶಿವಮೊಗ್ಗ ಏರ್ಪೋರ್ಟ್ ಕಾಮಗಾರಿ ಮುಗಿದಿದ್ದು, ಅದು ನಮ್ಮದು ಅಂತ ಹೇಳಿದ್ದಾರೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣ ನಿಡುವುದು. ಅದನ್ನೂ ತಮ್ಮದೇ ಎಂದು ಪ್ರತಿಪಾದಿಸಿದ್ದಾರೆ ಎಂದು ಅಶೋಕ್ ಹೇಳಿದರು.
ಸರ್ವ ಜನಾಂಗ ಶಾಂತಿಯ ತೋಟ ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಇಡಿ ಕರ್ನಾಟಕ ಉರಿಯುತ್ತಿದೆ. ಹಿಂದುಗಳ ಮೇಲೆ ದೌರ್ಜನ್ಯ ಆಗುತ್ತಾ ಇದೆ. ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿ ಆಗಿವೆ. ಇಷ್ಟೆಲ್ಲ ಆದರೂ ಶಾಂತಿ ಸುವ್ಯವಸ್ಥೆ ಕಾಪಾಡ್ತೀನಿ ಅಂತ ಹೇಳ್ತಾ ಇದ್ದಾರೆ. ಕನ್ನಡ ರಕ್ಷಣೆ ಮಾಡ್ತೀವಿ ಅಂತ ಹೇಳಿ ಕನ್ನಡ ಹೋರಾಟಗಾರರನ್ನು ಜೈಲಿಗೆ ಅಟ್ಟಿದ ದುಷ್ಟ ಸರ್ಕಾರ ಇದು. ಎಸ್ಸಿ, ಎಸ್ಟಿ ಹಣ ಬೇರೆ ಯೋಜನೆಗಳಿಗೆ ಬಳಸಿ ಮೋಸ ಮಾಡಿದ್ದಾರೆ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಕಳೆದು ಎಂಟು ತಿಂಗಳಲ್ಲಿ ಒಂದು ರೂಪಾಯಿ ಅಭಿವೃದ್ಧಿಗೆ ಕೊಡದೆ ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ಈ ಸರ್ಕಾರದಿಂದ ಒಂದೇ ಒಂದೇ ಕಾಮಗಾರಿ ಆಗಿಲ್ಲ. ಕಾಂಗ್ರೆಸ್ ಶಾಸಕರು ಹೇಳ್ತಾ ಇದ್ದಾರೆ, ಕೆಂಪಣ್ಣ ಹೇಳಿದ್ದಾರೆ 40 ಪರ್ಸೆಂಟ್ ಲೂಟಿ ಸರ್ಕಾರ, ಕಮಿಷನ್ ಸರ್ಕಾರ ಎಂಬುದಾಗಿ. ರಾಜ್ಯಪಾಲರ ಕೈಯಲ್ಲಿ ಸುಳ್ಳುಗಳನ್ನ ಹೇಳಿಸಿದ್ದಾರೆ ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಜನವಿರೋಧಿ ಸರ್ಕಾರ: ಬೊಮ್ಮಾಯಿ
ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ. ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ನಮ್ಮ ಅವಧಿಯ ಕೆಲಸಗಳನ್ನು ತಾವು ಮಾಡಿದ್ದಾಗಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಂದ ಹೇಳಿಸಿದೆ ಈ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಭಾಷಣ ಮಾಡಿಸಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಎಂದು ಬಿಂಬಿಸಿಕೊಂಡಿದೆ. ಕರ್ನಾಟಕ ಮಾಡೆಲ್ ಅಂದರೆ ಏನು ಎಂಬುದನ್ನು ಕಾಂಗ್ರೆಸ್ ಹೇಳಲಿ. ಅಭಿವೃದ್ಧಿ ಕೆಲಸ ಮಾಡದೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ರಾಜ್ಯಪಾಲರ ಬಾಯಲ್ಲಿ ಸುಳ್ಳನ್ನು ಹೇಳಿಸಿದೆ ಈ ಸರ್ಕಾರ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕರ್ನಾಟಕ ಮಾದರಿ ಭ್ರಷ್ಟಾಚಾರ: ಅಶ್ವತ್ಥ್ ನಾರಾಯಣ
ಕರ್ನಾಟಕಕ್ಕೆ ಇದ್ದ ಒಳ್ಳೆಯ ಹೆಸರನ್ನು ಈ ಸರ್ಕಾರ ಕೆಡಿಸಿದೆ. ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಟ್ಟ ಮಾಡೆಲ್ ಆಗಿದೆ. ಭ್ರಷ್ಟಾಚಾರ ಮಾದರಿಯಾಗಿದೆ. ಕರ್ನಾಟಕ ಮಾದರಿ ಅಂದರೆ ಅಪಕೀರ್ತಿ ಮಾಡೆಲ್ ಆಗಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಡಾ. ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಇಡೀ ದೇಶಕ್ಕೆ ಕರ್ನಾಟಕದ ಗ್ಯಾರಂಟಿ ಮಾದರಿ; ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲ ಗೆಹ್ಲೋಟ್
ಇದು ಭ್ರಷ್ಟಾಚಾರ, ಅಕ್ರಮ, ಜನವಿರೋಧಿ ಸರ್ಕಾರ ಆಗಿದೆ. ಬರಗಾಲ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣ ಕಡೆಗಣಿಸಿದೆ. ರಾಜ್ಯಪಾಲರ ಭಾಷಣದಲ್ಲಿ ಸಂಪೂರ್ಣ ಸುಳ್ಳು ಹೇಳಿಸಿದ್ದಾರೆ ಎಂದು ಅವರು ಟೀಕಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Mon, 12 February 24