ಮಂಡ್ಯ, ಫೆ.13: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಆಯ್ಕೆ ಕಗ್ಗಂಟ್ಟಾಗಿದೆ. ಸ್ಥಳೀಯ ಬಿಜೆಪಿ ನಾಯಕರು ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದರೆ, ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅದರಂತೆ ಇಂದು ಹೆಚ್ಡಿ ದೇವೇಗೌಡ (HD Deve Gowda) ಅವರು ಸಭೆ ನಡೆಸಿದರು.
ಮಂಡ್ಯ ಲೋಕಸಭಾ ಅಭ್ಯರ್ಥಿ ಆಯ್ಕೆ ಕುರಿತು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಯಲ್ಲಿ ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು ಭಾಗಿಯಾದರರು.
ಲೋಕಸಭಾ ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು. ಅವರ ಮನವೋಲಿಸಬೇಕು ಎಂದು ದೇವೇಗೌಡ ಅವರನ್ನು ಒತ್ತಾಯಿಸಿದರು.
ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವರು ಭಾಗಿಯಾದರು.
ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ, ಮುಖಂಡರ ಒತ್ತಡ ಇದೆ. ಆದರೆ ನನ್ನ ಮಾತು ಎಲ್ಲಾ ಸಮಯದಲ್ಲೂ ಒಂದೇ, ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಯಾವುದೇ ಒತ್ತಡ ಬಂದರೂ ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಚರ್ಚೆಗೆ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಅಕ್ಷರಶಃ ರಣರಂಗವಾಗಿತ್ತು. ಈ ರಣರಂಗದ ಚಕ್ರವ್ಯೂಹ ಬೇಧಿಸಲು ನಿಖಿಲ್ ವಿಫಲಾರಾಗಿದ್ದರು. ಇದೀಗ ಮತ್ತೆ ನಿಖಿಲ್ ಮಂಡ್ಯ ರಣರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿತ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಅಲ್ಲಿಯೂ ಕೂಡ ಸೋಲು ಕಂಡಿದ್ದರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು. ಆದರೆ, ತಾನು ಲೋಕಸಭೆಗೆ ಸ್ಪರ್ಧಿಸಲ್ಲ ಎಂದಿದ್ದಾರೆ.
ಚುನಾವಣಾ ಅಖಾಡಕ್ಕೆ ಧುಮುಕದೆ ಪಕ್ಷ ಸಂಘಟನೆಯತ್ತ ನಿಖಿಲ್ ಕುಮಾರಸ್ವಾಮಿ ಚಿತ್ತ ಹರಿಸಿದ್ದಾರೆ. ಈ ಹಿಂದೆ, ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ, ಬರುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಅಂದಿನಿಂದ ಚುನಾವಣೆ ಸ್ಪರ್ಧೆ ಮಾಡಲ್ಲ ಎನ್ನುತ್ತಿರುವ ಕುಮಾರಸ್ವಾಮಿ, ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ.
ಎನ್ಡಿಎ ಮೈತ್ರಿಕೂಟದಲ್ಲಿ ಯಾವ ರೀತಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಿದೆ. ನನ್ನ ಪ್ರವಾಸ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಲಾರ, ಹಾಸನ, ಮೈಸೂರು ಸೇರಿದಂತೆ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ನಾನು ಈ ಹಿಂದೆ ಮಂಡ್ಯ ಅಭ್ಯರ್ಥಿ ಆಗಿದ್ದ ಕಾರಣ ಮಂಡ್ಯದಲ್ಲಿ ಹೆಚ್ಚೆಚ್ಚು ಓಡಾಡಲು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸುತ್ತಿದ್ದಾರೆ. ಎನ್ಡಿಎ ಮಿತ್ರಕೂಟದಲ್ಲಿ ಜೆಡಿಎಸ್ ವಿಲೀನವಾದ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲದರ ನಡುವೆ, ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸಿಲ್ಲ. ರಾಜ್ಯ ಬಿಟ್ಟು ಏಕೆ ಕಳಿಸುತ್ತೀರಿ, ರಾಜ್ಯದಲ್ಲೇ ಇರೋಣ ಅಂದುಕ್ಕೊಂಡಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ಈ ಎಲ್ಲದರ ನಡುವೆ, ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಈಗಾಗಲೇ ಮಂಡ್ಯ ಜೆಡಿಎಸ್ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಸಮ್ಮತಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಂಡ್ಯ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮಂಡ್ಯ ಕ್ಷೇತ್ರ ಮತ್ತೊಮ್ಮೆ ಭಾರೀ ಸುದ್ದು ಮಾಡಲಾರಂಭಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ