ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಚರ್ಚೆಗೆ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಅವರು ಈ ಬಾರಿ ಮತ್ತೆ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಸೋಲು ಕಂಡ ನೆಲದಿಂದಲೇ ಪುಟಿದೇಳಲು ನಿಖಿಲ್ ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು. ಆದ್ರೆ, ಇದೀಗ ಸ್ವತಃ ನಿಖಿಲ್ ಕುಮಾರಸ್ವಾಮಿ ಚುನಾವಣೆ ಸ್ಪರ್ಧೆ ಕುರಿತ ಚರ್ಚೆಗೆ ಸ್ಪಷ್ಟನೆ ನೀಡಿದ್ದು, ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಮಂಡ್ಯ, (ಫೆಬ್ರವರಿ 12): ಯಾವುದೇ ಒತ್ತಡ ಬಂದರೂ ನಾನು ಮಂಡ್ಯ(Mandya) ಲೋಕಸಭಾ(LokaSaba Election 2024)) ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumarswamy) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಈ ಬಾರಿ ನಿಖಿಲ್, ಮಂಡ್ಯ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನವ ಅಂತೆ-ಕಂತೆಗಳಿಗೆ ಕ್ಲ್ಯಾರಿಟಿ ಸಿಕ್ಕಂತಾಗಿದೆ.
ಮಂಡ್ಯದ ಪಾಂಡವಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ, ಮುಖಂಡರ ಒತ್ತಡ ಇದೆ. ಆದರೆ ನನ್ನ ಮಾತು ಎಲ್ಲಾ ಸಮಯದಲ್ಲೂ ಒಂದೇ, ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಯಾವುದೇ ಒತ್ತಡ ಬಂದರೂ ನಾನು ಲೋಕಸಭಾ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೈಸೂರು: ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಗೆ
ಎನ್ಡಿಎ ಮೈತ್ರಿಕೂಟದಲ್ಲಿ ಯಾವ ರೀತಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಿದೆ. ನನ್ನ ಪ್ರವಾಸ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಲಾರ, ಹಾಸನ, ಮೈಸೂರು ಸೇರಿದಂತೆ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ನಾನು ಈ ಹಿಂದೆ ಮಂಡ್ಯ ಅಭ್ಯರ್ಥಿ ಆಗಿದ್ದ ಕಾರಣ ಮಂಡ್ಯದಲ್ಲಿ ಹೆಚ್ಚೆಚ್ಚು ಓಡಾಡಲು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಇನ್ನು ಇದೇ ವೇಳೆ ಮೈತ್ರಿಗೆ ಬಿಜೆಪಿ ನಾಯಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಅಮಿತ್ ಶಾ ಅವರ ಸಭೆಯಲ್ಲಿ ಬಿಜೆಪಿಯ ನಾಯಕರಿಗೆ ಸಂದೇಶ ಹೋಗಿದೆ. ನಮ್ಮ ಕಡೆಯಿಂದ ಯಾವುದೇ ಅಸಮಾಧಾನ ಇಲ್ಲ. ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಮೂರನೇ ಬಾರಿ ಮೋದಿ ಪ್ರಧಾನಿ ಆಗಬೇಕೆಂದು ನಮ್ಮ ಆಶಯ. ನಾವು ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಲ್ಲ ಎಂದು ತಿಳಿಸಿದರು.
ನಿಖಿಲ್ ಕಣಕ್ಕಿಳಿಯುವ ಬಗ್ಗೆ ಚರ್ಚೆಯಾಗಿತ್ತು
ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಅಕ್ಷರಶಃ ರಣರಂಗವಾಗಿತ್ತು. ಈ ರಣರಂಗದ ಚಕ್ರವ್ಯೂಹ ಬೇಧಿಸಲು ನಿಖಿಲ್ ವಿಫಲಾರಾಗಿದ್ದರು. ಇದೀಗ ಮತ್ತೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ರಣರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗುತ್ತಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಅಂದಹಾಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಅಲ್ಲಿಯೂ ಕೂಡ ಸೋಲು ಕಂಡಿದ್ದರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು.
ಗೊಂದಲಗಳಿಗೆ ನಿಖಿಲ್ ತೆರೆ, ಹಾಗಾದ್ರೆ ಅಭ್ಯರ್ಥಿ ಯಾರು?
ಇನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರೂ ಸಹ ನಿಖಿಲ್ ಕುಮಾರಸ್ವಾಮಿ ಅಥವಾ ಸ್ವತಃ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಆದ್ರೆ, ಇದೀಗ ನಿಖಿಲ್ ಕುಮಾರಸ್ವಾಮಿ ಕಣದಿಂದ ಹಿಂದೆ ಸರಿದಿದ್ದು, ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ. ಇನ್ನು ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಈ ಮೂಲಕಗಳ ಪ್ರಕಾರ ಎಚ್ಡಿ ಕುಮಾರಸ್ವಾಮಿ ಅವರೇ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಮಂಡ್ಯ ಜೆಡಿಎಸ್ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಸಮ್ಮತಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಂಡ್ಯ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ರಾಜಕೀಯ ಮತ್ತೊಮ್ಮೆ ಭಾರೀ ಸುದ್ದು ಮಾಡಲಾರಂಭಿಸಿದೆ.
ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Mon, 12 February 24