ಬೀದರ್: ಸ್ಯಾಂಟ್ರೋ ರವಿ(Santro Ravi) ಜೊತೆಗೆ ಸಚಿವರು, ಬಿಜೆಪಿ (BJP) ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆ-ಕಂತೆ ನೋಟುಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣದ ಲೆಕ್ಕ ಹಾಕುತ್ತಿರುವ ಫೋಟೋ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ(HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಇಂದು(ಜನವರಿ 08) ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೋ ವೈರಲ್ ಆಗಿದೆ. ಆರಗ ಮನೆಯಲ್ಲಿ ಲೆಕ್ಕ ಹಾಕಿದ ಹಣದ ಫೋಟೋ ತೆಗೆದವರು ಯಾರು? ಎಸಿಪಿ ವರ್ಗಾವಣೆ ಮಾಡಿಸಲು 15 ಲಕ್ಷ ಹಣ ಎಣಿಸುತ್ತಿರುವುದಂತೆ. ಇದು ಗೃಹಸಚಿವರ ನಿವಾಸದಲ್ಲೇ ನಡೆದಿದೆ, ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಸಚಿವ ಸೋಮಶೇಖರ್ ಜತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಆ ವಿಡಿಯೋ ರೆಕಾರ್ಡ್ ನಾನು ಮಾಡಿಸಿದ್ದಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗಿಲ್ಲ ಸಿಎಂ ದಲ್ಲಾಳಿಗಳೇ ಆಡಳಿತ ನಡೆಸುವ ಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಕೃಪಾ ಹೊಸ ಕಟ್ಟಡದಲ್ಲಿ ಏನೆಲ್ಲಾ ನಡೆಯಿತು. ಉಸ್ತುವಾರಿ ಇದ್ದ ದೇವರಾಜನನ್ನು ಯಾಕೆ ಎತ್ತಂಗಡಿ ಮಾಡಿದರು? ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಎತ್ತಂಗಡಿ ಯಾಕೆ ಆಯ್ತು? ಜಗದೀಶ್ಗೆ ಹೆಚ್ಚುವರಿ ಹೊಣೆ ಇತ್ತು, ಬೆಂಕಿ ಇಲ್ಲದೆ ಹೊಗೆ ಬರುತ್ತಾ? ನಿಮ್ಮ ತಂದೆಯವರು ಹೇಳಿಕೊಟ್ಟಿದ್ದು ಇದೇನಾ ಬೊಮ್ಮಾಯಿ ಅವರೇ? ರಾಯಿಸ್ಟ್ ಎಸ್.ಆರ್.ಬೊಮ್ಮಾಯಿರಿಂದ ಸಿಎಂ ಕಲಿತದ್ದು ಇದೇನಾ? ಮುಖ್ಯಮಂತ್ರಿ ಮನೆ ಕೂಗಳತೆ ದೂರದಲ್ಲಿ ಇದೆಲ್ಲಾ ಅಸಹ್ಯ ನಡೆದಿದೆ. ಇದೇನಾ ನಿಮ್ಮ ತಂದೆಯವರಿಂದ ಕಲಿತದ್ದು ಎಂದು ಸಿಎಂ ಬೊಮ್ಮಾಯಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:58 pm, Sun, 8 January 23