ಸಿದ್ದರಾಮಯ್ಯನವರೇ ಕ್ಷೇತ್ರದ ಕೆಲಸ ಮಾಡಬೇಕು, ನಿಮ್ಮ ಪುತ್ರನಿಗೆ ಕ್ಷೇತ್ರದ ‘ಹೊರಗುತ್ತಿಗೆ’ಯಾಕೆ? ಹೆಚ್ಡಿಕೆ ಪ್ರಶ್ನೆ
ಯತೀಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಲಿಸ್ಟ್ ಸಂಭಾಷಣೆ ವಿಚಾರ ಅದೆಷ್ಟು ವೇಗದಲ್ಲಿ ಸ್ಫೋಟವಾಯ್ತೋ ಅಷ್ಟೇ ವೇಗದಲ್ಲೇ ತಣ್ಣಗಾಗಿತ್ತು. ಆದ್ರೆ, ಇವತ್ತು ಇದೇ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿಪಕ್ಷಗಳು ಅದರಲ್ಲೂ ಹೆಚ್ಡಿ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಮತ್ತೆ ಜೀವ ಬರುವಂತೆ ಮಾಡಿದೆ. ಮತ್ತೊಂದು ಸುತ್ತಿನ ಕದನವೂ ನಡೆದಿದ್ದು, ಇದೀಗ ಮತ್ತೆ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ನವೆಂಬರ್ 19): ಟೈಂ ಕೆಟರೆ, ಹಗ್ಗವೂ ಹಾವಾಗುತ್ತೆ. ಸದ್ಯ ಯತೀಂದ್ರ ಸಿದ್ದರಾಮಯ್ಯ ಸುತ್ತ ನಡೆಯುತ್ತಿಉರವ ಬೆಳವಣಿಗೆ ನೋಡಿದರೆ ಹಾಗೆ ಅನ್ನಿಸುತ್ತಿದೆ. ಮೊನ್ನೆಯಷ್ಟೇ, ಯತೀಂದ್ರ ಮತ್ತು ಸಿದ್ದರಾಮಯ್ಯ ಫೋನ್ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇದನ್ನೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಜಕೀಯ ಅಸ್ತ್ರವನ್ನಾಗಿ ಬಳಿಸಿಕೊಂಡು ಅಪ್ಪ ಮಗನ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಮತ್ತೊಂದೆಜ್ಜೆ ಮುಂದೆ ಹೋಗಿರುವ ಕುಮಾರಸ್ವಾಮಿ ಯತೀಂದ್ರಗೆ ನೀಡುರ ಸಾಂವಿಧಾನಿಕ ಹುದ್ದೆಯನ್ನು ಪ್ರಶ್ನಿಸಿದ್ದಾರೆ. ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ ಉತ್ತರ ಕೊಡಿ ಸಿದ್ದರಾಮಯ್ಯನವರೇ ಎಂದು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಕೆಲಸ ಬಿಟ್ಟು ನಿಮಗೆ ಸುವ್ವಿಸುವ್ವಾಲೆ ಹಾಡುತ್ತಿದೆ. ಅವರು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ? ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾರೆಂದು ಭಾವಿಸಿದರೆ ಅದು ನಿಮ್ಮ ಪೆದ್ದುತನವಷ್ಟೇ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ ವಿವೇಕಾನಂದರೇ ಬೇರೆ, ವರ್ಗಾವಣೆಯಾದ ವಿವೇಕಾನಂದರೇ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ
ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ ‘ಹೊರಗುತ್ತಿಗೆ’ (Out source) ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ. ನಿಮ್ಮ ಪುತ್ರರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಿರಿ. ಅವರ ನೇತೃತ್ವದಲ್ಲಿ ಕೆ.ಡಿ.ಪಿ ಸಭೆ ನಡೆಸಲು ಹಾಗೂ ಸರಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.
ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆ.ಡಿ.ಪಿ ಪಟ್ಟ ಕಟ್ಟಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ. ನನಗೆ ತಿಳಿದಂತೆ CSR ಎಂದರೆ, Corporate social responsibility. ಈಗ ಅದು Corrupt Son Of Siddaramaiah ಆಗಿದೆ. ರಾಜ್ಯದಲ್ಲಿ CSR ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಾ, ಹೇಗೆ? 224 ಕ್ಷೇತ್ರಗಳ CSR ಉಸ್ತುವಾರಿ ಅವರದ್ದೇನಾ? 2% CSR ಮೇಲೂ ನಿಮ್ಮ ಕಾಕದೃಷ್ಟಿ ಬಿದ್ದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ವಿಶೇಷ ಕರ್ತವ್ಯಾಧಿಕಾರಿ ಆರ್.ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಕೆ.ಎನ್.ವಿಜಯ್ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ? ಯತೀಂದ್ರರು ಶಿಕ್ಷಣದ ಕುರಿತು ಎಂ.ರಾಮಯ್ಯ ಜತೆ, ವರುಣಾ ಬಗ್ಗೆ ಕೆ.ಎನ್.ವಿಜಯ್ ಜತೆ ಚರ್ಚಿಸಿಲ್ಲ. ಇವೆರಡಕ್ಕೂ ಸಂಬಂಧವಿಲ್ಲದವೇ ‘ಸಿಆಸು’ ಸಚಿವರ ಆಪ್ತಶಾಖೆ, ವರ್ಗಾವಣೆ -ಸೇವಾ ಹೊಣೆಯ ಮಹದೇವು ಜತೆ ಫೋನ್ ಚರ್ಚೆ ನಡೆಸಿದ್ದೇಕೆ? CSRಗೂ ಅವರಿಗೂ ಸಂಬಂಧವೇನು? ಎಂದು ಕಿಡಿಕಾರಿದ್ದಾರೆ.
CSR ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ. ಜನಹಿತಕ್ಕಾಗಿ ದನಿಯೆತ್ತಿದ ನನ್ನನ್ನು ತಂದೆ, ಅಣ್ಣ, ಮಗನನ್ನು ಎಳೆತಂದು ಕಟ್ಟಿ ಹಾಕಲು ಸಾಧ್ಯವಿಲ್ಲ. ಕಷ್ಟದಲ್ಲಿರುವ ಜನ ‘ಎಲ್ಲಿದ್ದೀಯಪ್ಪ ಕುಮಾರಣ್ಣ? ಎಂದರೆ ಓಡಿ ಹೋಗುತ್ತೇನೆ. ಸತ್ಯಕ್ಕೆ ಸಮಾಧಿ ಕಟ್ಟಲು ನೀವು ಸೃಷ್ಟಿಸುತ್ತಿರುವ ಸುಳ್ಳಿನಸೌಧದ ಅಡಿಪಾಯವೇ ಈಗ ಕುಸಿಯುತ್ತಿದೆ. ಮಾಡದ ತಪ್ಪಿಗೆ ವಿದ್ಯುತ್ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ. ರಾಜ್ಯದ ಮುಖ್ಯಮಂತ್ರಿಯನ್ನೇ ‘ಟೆಲಿಫೋನ್ ಆಪರೇಟರ್’ ಮಾಡಿದ ನಿಮ್ಮ ಮಗನನ್ನು ಇನ್ನೂ ಸಮರ್ಥನೆ ಮಾಡುತ್ತಿದ್ದೀರಲ್ಲಾ? ಛೀ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Sun, 19 November 23




