HD Kumaraswamy: ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಲ್ಲ, ಅಂಥ ತಪ್ಪು ನನ್ನಿಂದ ಆಗಿಲ್ಲ; ಎಚ್​ಡಿ ಕುಮಾರಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2023 | 10:53 AM

Karnataka Politics: ಪ್ರಲ್ದಾದ್ ಜೋಶಿಯನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅವರು, ‘ಇವರು ನಮ್ಮ ಸಂಸ್ಕೃತಿಯ ಬ್ರಾಹ್ಮಣರಲ್ಲ. ಇವರು ಸಮಾಜ ಒಡೆಯುವವರು. ಶೃಂಗೇರಿ ಮಠ ಒಡೆದವರು‘ ಎಂದು ಹೇಳಿದ್ದರು.

HD Kumaraswamy: ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಲ್ಲ, ಅಂಥ ತಪ್ಪು ನನ್ನಿಂದ ಆಗಿಲ್ಲ; ಎಚ್​ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ‘ಕ್ಷಮೆ ಕೇಳುವ ತಪ್ಪನ್ನು ನಾನು ಮಾಡಿಲ್ಲ. ನನ್ನಿಂದ ಬ್ರಾಹ್ಮಣರಿಗೆ ಅವಮಾನವಾಗಿಲ್ಲ. ನಾನು ಯಾವುದೇ ಸಮುದಾಯಕ್ಕೆ ಅಗೌರವ ತೋರಿಲ್ಲ. ಹೀಗಾಗಿ ಯಾರ ಕ್ಷಮೆಯನ್ನೂ ಕೇಳಬೇಕಿಲ್ಲ’ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಪ್ರಲ್ದಾದ್ ಜೋಶಿಯನ್ನು (Pralhad Joshi) ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅವರು, ‘ಇವರು ನಮ್ಮ ಸಂಸ್ಕೃತಿಯ ಬ್ರಾಹ್ಮಣರಲ್ಲ. ಇವರು ಸಮಾಜ ಒಡೆಯುವವರು. ಶೃಂಗೇರಿ ಮಠ ಒಡೆದವರು, ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದವರು’ ಎಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ನಂತರ ಚರ್ಚೆಯನ್ನು ಪೇಶ್ವೆಗಳ ಕಡೆಗೆ ತಿರುಗಿಸಿ, ಡಿಎನ್​ಎ ಕುರಿತು ಪ್ರಸ್ತಾಪಿಸಿದ್ದರು. ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯ ತೀವ್ರವಾಗಿ ಖಂಡಿಸಿ, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.

ತಮ್ಮ ಹೇಳಿಕೆಯ ಕುರಿತು ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ‘ಟಿವಿ9 ಕನ್ನಡ’ ವಾಹಿನಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೇಳಿಕೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು. ‘ನಮ್ಮ ರಾಜ್ಯದ ಸೌಹಾರ್ದ ಪರಂಪರೆಗೆ ಬಿಜೆಪಿಯಿಂದ ಧಕ್ಕೆಯಾಗಿದೆ. ಮತ ಚಲಾಯಿಸುವ ಮೊದಲು ಆರ್​ಎಸ್​ಎಸ್​ ಹುನ್ನಾರಕ್ಕೆ ಮರುಳಾಗಬೇಡಿ ಎಂದು ಹೇಳಿದ್ದೇನೆ. ಚುನಾವಣೆಯ ನಂತರ ಏನಾಗುತ್ತೆ ಎಂಬ ಬಗ್ಗೆ ನನಗೆ ಮೊದಲೇ ಅಧಿಕೃತ ಮಾಹಿತಿ ಬಂದಿದೆ’ ಎಂದು ವಿವರಿಸಿದರು. ‘ಶಿವಾಜಿಯನ್ನು ಕೊಂದವರು, ಶೃಂಗೇರಿಯನ್ನು ಒಡೆದವರ ಕೈಗೆ ಕರ್ನಾಟಕ ಸಿಗಬಾರದು’ ಎಂದರು.

‘ಡಿಎನ್​ಎ ಬಗ್ಗೆ ಮಾತನಾಡಿದ್ದೀರಿ ಇದು ಸರಿಯೇ’ ಎಂದು ಟಿವಿ9 ಆ್ಯಂಕರ್ ರಂಗನಾಥ್ ಭಾರದ್ವಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ನಡೆಯುತ್ತಿರುವುದು ಏನು ಹೇಳಿ? ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಬಗ್ಗೆ ಚರ್ಚೆಯೇ ಇಲ್ಲ. ನಳಿನ್ ಕುಮಾರ್ ಕಟೀಲ್ ಹೇಳುವುದು ಅದೇ ತಾನೆ? ಇವರಿಗೆ ಅಭಿವೃದ್ಧಿ ಬೇಕಿಲ್ಲ. ರಾಜ್ಯದ ಶಾಂತಿ ಬೇಕಿಲ್ಲ. ಇವರು ಸಾವರ್ಕರ್​ನ ಏಕೆದು ತಂದರು, ಫೋಟೊಗಳನ್ನು ಹಾಕಿದರು. ಗೋಡ್ಸೆ ದೇವಸ್ಥಾನ ಕಟ್ಟಬೇಕು ಅಂದಿದ್ದರು. ಸಾವರ್ಕರ್ ಅವರ ಡಿಎನ್​ಎ ಜನರು ಅಧಿಕಾರಕ್ಕೆ ಬಂದರೆ ಇತಿಹಾಸದ ಮುಂದುವರಿಕೆಯಾಗುತ್ತೆ. ನಾನು ಏನೂ ಗೊತ್ತಿಲ್ಲದೆ ಹೇಳಿಕೆ ನೀಡಿಲ್ಲ. ಇದರ ಬಗ್ಗೆ ವಿಸ್ತೃತ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ’ ಎಂದು ಅವರು ಘೋಷಿಸಿದರು.

‘ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗುತ್ತಿರುವ ಆತಂಕದಿಂದ ಇಂಥ ಹೇಳಿಕೆ ನೀಡಿದಿರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೇಶ್ವೆಗಳ ಡಿಎನ್​ಎ ಎಂಬ ನನ್ನ ಹೇಳಿಕೆಯನ್ನು ರಾಜಕೀಯ ಲೆಕ್ಕಾಚಾರದಲ್ಲಿ ನೀಡಿಲ್ಲ. ಹಳೇ ಮೈಸೂರು ಭಾಗಕ್ಕೆ ನೂರು ಸಲ ಮೋದಿ, ಅಮಿತ್ ಶಾ ಬಂದರೂ ಅಲ್ಲಿನ ಒಕ್ಕಲಿಗ ಸಮಾಜದ ಮತ ಒಡೆಯಲು ಆಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಮಾಡಿದ್ದು ಹಾಗೂ ದೆಹಲಿ ಹೈಕಮಾಂಡ್ ಅವರನ್ನು ನಡೆಸಿಕೊಂಡ ರೀತಿಯಿಂದ ಲಿಂಗಾಯತ ಸಮುದಾಯಕ್ಕೆ ಅಸಮಾಧಾನವಾಗಿದೆ. ಇವೆಲ್ಲವೂ ನನಗೆ ಗೊತ್ತಿದೆ. ಆದರೆ ನನ್ನ ಹೇಳಿಕೆಗೂ ರಾಜಕೀಯಕ್ಕೂ ಸಂಬಂಧ ಕಲ್ಪಿಸಬೇಡಿ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಉಳಿಯಬೇಕೆಂಬ ಉದ್ದೇಶದಿಂದ ನಾನು ಹೇಳಿಕೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಪೇಶ್ವೆಗಳ ಬಗ್ಗೆ, ಓಡಿ ಬಂದವರ ಬಗ್ಗೆ ನಾನು ಯಾವುದೇ ತಪ್ಪು ಮಾತಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಮತ್ತು ನನ್ನ ಕುಟುಂಬ ಬ್ರಾಹ್ಮಣರ ಪರವಾಗಿ ಹಲವು ಕೆಲಸ ಮಾಡಿದೆ. ವಿಶ್ವಭಾರತಿ ಹೌಸಿಂಗ್ ಸೊಸೈಟಿ ಮೂಲಕ ಮನೆಗಳನ್ನು ಕಟ್ಟಿಕೊಂಡಿದ್ದ ಬ್ರಾಹ್ಮಣರ ಆಸ್ತಿ ಉಳಿಸಲು ಪ್ರಯತ್ನಿಸಿದಾಗ ಇದೇ ಬಿಜೆಪಿಯವರು ಕೋರ್ಟ್​ಗೆ ಹತ್ತಿಸಿದ್ದರು. ಬ್ರಾಹ್ಮಣ ಸಮಾಜದ ಬಂಧುಗಳ ಬಗ್ಗೆ ನಾನು ಎಂದೂ ಅಗೌರವವಾಗಿ ನಡೆದುಕೊಂಡಿಲ್ಲ. ಕಷ್ಟಗಳನ್ನು ಹೇಳಿಕೊಳ್ಳಲು ನನ್ನ ಮನೆಗೆ ಬರುವ ಯಾರನ್ನೂ ನಾನು ಯಾವ ಜಾತಿ ಎಂದು ಕೇಳದೆ ಸಹಾಯ ಮಾಡಿದ್ದೇನೆ’ ಎಂದು ವಿವರಿಸಿದರು.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ? ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:37 am, Tue, 7 February 23