ಪ್ರತಾಪ್ ಸಿಂಹ ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಎಲ್ಲವೂ ಸಿದ್ದರಾಮಣ್ಣಂದೇ: ಕುಮಾರಸ್ವಾಮಿ ವ್ಯಂಗ್ಯ

ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ... ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು? ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪ್ರತಾಪ್ ಸಿಂಹ ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಎಲ್ಲವೂ ಸಿದ್ದರಾಮಣ್ಣಂದೇ: ಕುಮಾರಸ್ವಾಮಿ ವ್ಯಂಗ್ಯ
ಹೆಚ್​ಡಿ ಕುಮಾರಸ್ವಾಮಿ
Follow us
| Updated By: ಗಣಪತಿ ಶರ್ಮ

Updated on:Jan 06, 2024 | 3:25 PM

ಬೆಂಗಳೂರು, ಜನವರಿ 6: ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ರಾಜಕೀಯವಾಗಿ ಮುಗಿಸಲು ಅವರ ಸಹೋದರ ಮರ ಕಡಿದ ವಿಚಾರ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ (Siddaramaiah) ತಂತ್ರ ಹೂಡಿದ್ದಾರೆ ಎಂದು ಆರೋಪಿಸಿರುವ  ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ. ಜತೆಗೆ, ಇದೆಲ್ಲ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಸಿದ್ದರಾಮಯ್ಯ ಹೂಡಿದ ಟರ್ಮಿನೇಟರ್ ಸಿನಿಮಾ ಎಂದು ವ್ಯಂಗ್ಯವಾಡಿದ್ದಾರೆ.

‘ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಇದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದೇ. ಅವರೇ ಶ್ರೀಮಾನ್ ಸಿದ್ದರಾಮಣ್ಣ!’ ಎಂದು ಕುಮಾರಸ್ವಾಮಿ ಸಾಮಾಜಿಕ ಮಾಧ್ಯಮ ಎಕ್ಸ್​​ನನಲ್ಲಿ ಉಲ್ಲೇಖಿಸಿದ್ದಾರೆ.

ಅಹಿಂದ ಅಹಿಂದ ಎಂದು ಬೆಳಗೆದ್ದರೆ ಭಜನೆ ಮಾಡುವ ನೀವು (ಸಿದ್ದರಾಮಯ್ಯ), ಆ ಅಧಿಕಾರಿಯಿಂದ 50 ಲಕ್ಷ ರೂಪಾಯಿ ಕಿತ್ತ ನಿಮ್ಮ ನೀತಿಗೆಟ್ಟ ಹೊಲಸು ಶಾಸಕನ ಬಗ್ಗೆ ನಿಮ್ಮ ಮೌನ ಅಸಹ್ಯ. ನಿಮ್ಮದೇ ಲಜ್ಜೆಗೆಟ್ಟ ಸರಕಾರ ಎಸಗಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆಯೇ? ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್​​ನಲ್ಲಿ ಅಡಗಿದೆ. ಯಾವ ತನಿಖೆ ಮಾಡುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ… ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು? ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಹಿರಂಗ ಚರ್ಚೆಗೂ ನಾನು ತಯಾರು. ನೀವು ಸಿದ್ಧವೇ? ಎಲ್ಲಿ? ಯಾವಾಗ? ಎಷ್ಟೊತ್ತಿಗೆ? ನೀವು ಫಿಕ್ಸ್ ಮಾಡುತ್ತೀರಾ? ನಾನು ಫಿಕ್ಸ್ ಮಾಡಲಾ? ಅಲ್ಲಿ ನಾನು ಹೇಳಿದ್ದೇನು ಎಂಬ ಬಗ್ಗೆ ಚರ್ಚಿಸೋಣ. ಸರಿ, ವಿಕ್ರಂಸಿಂಹ ಮರ ಕಡಿದಿದ್ದರೆ ಎಫ್​ಐಆರ್​​ನಲ್ಲಿ ಅವರ ಹೆಸರಿಲ್ಲ, ಯಾಕೆ!? ಆ ಎಫ್​ಐಆರ್ ಪ್ರತಿ ಲಗತ್ತಿಸಿದ್ದೇನೆ. ಅದನ್ನು ನೋಡಿ, ಆಮೇಲೆ ಮಾತನಾಡಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹ ಸಹೋದರ ವಿರುದ್ಧದ ಪ್ರಕರಣ: ಸಿದ್ದರಾಮಯ್ಯರಿಂದ ಅಧಿಕಾರ ದುರುಪಯೋಗವೆಂದ ಕುಮಾರಸ್ವಾಮಿ

ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ: ರಾಜಣ್ಣ, ಪರಮೇಶ್ವರ ವಿರುದ್ಧ ಹೆಚ್​ಡಿಕೆ ಕಿಡಿ

‘ಕರ್ನಾಟಕದ ‘ನೀರೋ’ಗೆ ರಾಜಕೀಯ ಊಳಿಗ ಮಾಡುತ್ತಿರುವ ಗೃಹಮಂತ್ರಿ ಡಾ. ಜಿ ಪರಮೇಶ್ವರ ಮತ್ತು ಸಿದ್ದಹಸ್ತರು ಹೇಳಿದ್ದಕ್ಕೆಲ್ಲ ‘ಪರಿಪೂರ್ಣ ಸಹಕಾರ’ ಕೊಡುವ ಹಾಸನ ಜಿಲ್ಲಾ ಉಸ್ತುವಾರಿ ಕೆಎನ್​ ರಾಜಣ್ಣ ಅವರು ಸಂಸದ ಪ್ರತಾಪ್ ಅವರ ಸಹೋದರನ ಪ್ರಕರಣಕ್ಕೆ ಸಂಬಂಧಿಸಿ ನಾನು ಕೊಟ್ಟಿರುವ ಹೇಳಿಕೆಗಳಿಗೆ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ. ಶುಕ್ರವಾರ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ನಾನು ಹೇಳಿದ್ದೆಲ್ಲವೂ ಸತ್ಯ, ಅಪ್ಪಟ ಸತ್ಯ. ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ಆ ದಾಖಲೆಗಳನ್ನು ತೆಗೆದುಕೊಂಡು ಎಲ್ಲಿಗೆ ಬರಲಿ, ಹೇಳಿ? ಆಗ ಕ್ರಮ ಜರುಗಿಸುವ ದಮ್ಮು ತಾಕತ್ತನ್ನು ತೋರುವಿರಾ? ಅಥವಾ ಪಲಾಯನ ಮಾಡುವಿರಾ? ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ ಈ ಸಚಿವರಿಬ್ಬರು. ‘ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ’ ಅನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ತಪ್ಪಿದರೆ, ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನಾದರೂ ತೋರಬೇಕು’ ಎಂದು ಕುಮಾರಸ್ವಾಮಿ ಪರಮೇಶ್ವರ ಹಾಗೂ ರಾಜಣ್ಣ ಅವರನ್ನುದ್ದೇಶಿಸಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sat, 6 January 24