ಶೃಂಗೇರಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೊಡುಗೆ ಏನು ಎಂದು ಜೆಡಿಎಸ್ (JDS) ನಾಯಕ ಎಚ್ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ. ಶೃಂಗೇರಿಯಲ್ಲಿ (Sringeri) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ರಾಜ್ಯದ ಜನರು ಭೂಮಿ ನೀಡಿದ್ದಾರೆ. ಕೆಲವರಿಗೆ ಇನ್ನೂ ಹಣ ಬಂದಿಲ್ಲ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಮೋದಿ ಬರುತ್ತಾರೆ. ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಅವರು ಬರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಶುಕ್ರವಾರ ರಾತ್ರಿಯೇ ಶೃಂಗೇರಿಗೆ ತೆರಳಿದ್ದ ಎಚ್ಡಿಕೆ ಶನಿವಾರ ಬೆಳಿಗ್ಗೆ ಶೃಂಗೇರಿ ಮಠದ ಭಾರತೀತೀರ್ಥ ಶ್ರೀಗಳನ್ನು ಏಕಾಂತದಲ್ಲಿ ಭೇಟಿಯಾದರು. ನಂತರ ಪತ್ರಿಕಾಗೋಷ್ಠಿ ನಡೆಸಿದರು.
ಈ ಬಾರಿಯ ಚುನಾವಣೆಯಲ್ಲಿ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಪ್ರಾಣ ಇರುವವರೆಗೆ ಬಿಜೆಪಿಗೆ ಹೋಗಲ್ಲ ಎಂದು ಕೆಜೆಪಿ ಪಕ್ಷ ಕಟ್ಟಿದ್ದಾಗ ಹೇಳಿದ್ದರು. ಈಗ ಜೀವ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದಿದ್ದಾರೆ. ಹಿಂದಿನ ವಿಚಾರಗಳನ್ನು ಈಗ ಪ್ರಸ್ತಾಪ ಮಾಡಲು ಹೋಗಲ್ಲ ಎನ್ನುತ್ತಲೇ ಕುಮಾರಸ್ವಾಮಿ ಅವರು ಬಿಎಸ್ವೈ ರಾಜಕೀಯ ಇತಿಹಾಸ ಕೆದಕಿದರು. ಗೆದ್ದ ಎತ್ತಿನಬಾಲ ಹಿಡಿಯಲು ಹೋಗುತ್ತಾರೆ ಅಂತ ಸಿದ್ದರಾಮಯ್ಯ ನನ್ನನ್ನು ಕುರಿತು ಹೇಳುತ್ತಾರೆ. ಅವರು ಸೋತ ಎತ್ತಿನಬಾಲ ಹಿಡಿಯಲು ಹೋಗುತ್ತಾರೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.
ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ಟಿ-20 ಮ್ಯಾಚ್ ರೀತಿ ಕುತೂಹಲವಿದೆ. ಕೊನೆಯ ಓವರ್ವರೆಗೂ ಈ ಕುತೂಹಲವಿರಲಿದೆ. ಹಾಸನ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ಬಗ್ಗೆ ಚರ್ಚಿಸುವ ಸಲುವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆ ಸಭೆಗೆ ರೇವಣ್ಣ ಅವರನ್ನು ಕರೆದಿಲ್ಲ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ರಾಜ್ಯದ ಜನರಿಗೂ ಕುತೂಹಲವಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರೂ ನನ್ನ ಕುಟುಂಬ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿ ಸೋಲಿಸ್ತೇನೆ ಎಂದಿದ್ದೆ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್ ನೀಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹಾಸನ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ನವರು ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಹೇಳುತ್ತಾರೆ. ಬಿಜೆಪಿಯವರು ಕಾಂಗ್ರೆಸ್ನ ಬಿ ಟೀಂ ಎಂದು ಹೇಳುತ್ತಾರೆ. ಆದರೆ ನಾವು ಯಾರ ಬಿ ಟೀಂ ಕೂಡ ಅಲ್ಲ, ಈ ರಾಜ್ಯದ ಜನರ ಟೀಂ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಅವರು ಕೆಲವು ದಿನಗಳ ಹಿಂದೆ ಬ್ರಾಹ್ಮಣರ ವಿರುದ್ಧ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ನಂತರ ಸ್ಪಷ್ಟನೆ ನೀಡಿದ್ದ ಅವರು ಮಹಾರಾಷ್ಟ್ರ ಮೂಲದ ಬ್ರಾಹ್ಮಣರು, ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಬ್ರಾಹ್ಮಣರ ಬಗ್ಗೆ ನಾನು ಹಾಗೆ ಹೇಳಿದೆನೇ ವಿನಃ ನಮ್ಮ ರಾಜ್ಯದವರ ಬಗ್ಗೆ ಅಲ್ಲ ಎಂದಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ್ದರು. ಅದಾದ ಬೆನ್ನಲ್ಲೇ ಎಚ್ಡಿಕೆ ಶೃಂಗೇರಿಗೆ ಭೇಟಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Sat, 25 February 23