ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ: ಮೊದಲ ದಿನದ ನಡಿಗೆಯಲ್ಲಿ ನಡೆದ ವಿಶಿಷ್ಟ ಪ್ರಸಂಗಗಳು

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. ಇನ್ನು ಯಾತ್ರೆಯ ಮೊದಲ ದಿನ ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಹೈಲೈಟ್ಸ್ ಈ ಕೆಳಗಿನಂತಿದೆ.

ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ: ಮೊದಲ ದಿನದ ನಡಿಗೆಯಲ್ಲಿ ನಡೆದ ವಿಶಿಷ್ಟ ಪ್ರಸಂಗಗಳು
Karnataka Congress
TV9kannada Web Team

| Edited By: Ramesh B Jawalagera

Sep 30, 2022 | 9:10 PM

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆಗೆ ಅದ್ಧೂರಿ ಚಾಲನೆ ದೊರೆಯಿತು. ಬಳಿಕ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರು ಭಾಷಣ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ನಡಿಗೆ ಪ್ರಾರಂಭಿಸಿದರು. ನಡಿಗೆ ಏನೆಲ್ಲ ಕಂಡು ಬಂದವು ಎನ್ನುವ ಹೈಲೈಟ್ಸ್ ಇಲ್ಲಿದೆ.

ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ

ಸ್ವಾಗತ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಪ್ರದರ್ಶನ ನೀಡಿದವು. ಪಾದಯಾತ್ರೆ ಉದ್ದಗಲಕ್ಕೂ ಕಲಾ ತಂಡಗಳು ಸಾಗಿದವು. ಸ್ವಾಗತ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಂಸದ ಜೈರಾಂ ರಮೇಶ್,ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್, ದೇವನೂರು ಮಹಾದೇವ ಸೇರಿದಂತೆ ಕಾಂಗ್ರೆಸ್ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಕರ್ನಾಟಕದಲ್ಲಿ ರಾಹುಲ್​ ಗಾಂಧಿ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಗ್ಗಟ್ಟಿನ ಜಪ..

ರಾಹುಲ್ ಗಾಂಧಿ ಭಾಷಣ

ಗುಂಡ್ಲುಪೇಟೆ: ಬಿಜೆಪಿ, ಆರ್​ಎಸ್​ಎಸ್​​ (RSS) ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಐಕ್ಯತಾ ಯಾತ್ರೆ ಮಾಡಲಾಗುತ್ತಿದೆ. ಸಂವಿಧಾನ ರಕ್ಷಣೆ ಮಾಡಲು ಭಾರತ್ ಜೋಡೋ ಮಾಡುತ್ತಿದ್ದೇವೆ ಎಂದು ಗುಂಡ್ಲುಪೇಟೆಯ ಕಾಂಗ್ರೆಸ್​ ಭಾರತ್ ಜೋಡೋ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನರು ಈಗ ಆತಂಕದ ಪರಿಸ್ಥಿತಿಯಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಅಂಬೇಡ್ಕರ್ ರೂಪಿಸಿರುವ​​ ಸಂವಿಧಾನ ಬೇಡ ಎಂದು ಇವರು ಹಲವು ಬಾರಿ ಹೇಳಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಇವರಿಗೆ ನಂಬಿಕೆ ಇಲ್ಲ. ಬಿಜೆಪಿಯವರಿಗೆ ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು. ಜನರನ್ನ ಇಬ್ಭಾಗ ಮಾಡುವುದೇ ಇವರ ಉದ್ದೇಶ. ಸಂವಿಧಾನ ಉಳಿಸುವ ಕೆಲಸಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಹೇಳಿದರು. ದೇಶದಲ್ಲಿ ಈಗ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದರು.

ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕುಟುಂಬದೊಂದಿಗೆ ಸಂವಾದ

ನಡಿಗೆ ವೇಳೆ ರಾಹುಲ್ ಗಾಂಧಿ ಅವರು ಪಕೋಡ, ಚಾ ಸೇವಿಸಿದರು. ಅಲ್ಲದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಅವಧಿಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಜನರ ಕುಟುಂಬಗಳೊಂದಿಗೆ ರಾಹುಲ್‌ ಗಾಂಧಿ ಸಂವಾದ ನಡೆಸಿದರು. ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಗಮನ ಕೊಡುತ್ತಿಲ್ಲ. ಅನಿವಾರ್ಯವಾಗಿ ಸರ್ಕಾರದ ಆಸ್ಪತ್ರೆಗೆ ಹೋಗಿದ್ದೀರ. ಆಸ್ಪತ್ರೆಯ ನಿರ್ಲಕ್ಷದಿಂದ ರೋಗಿಗಳು ಪ್ರಾಣ ಕಳೆದುಕೊಂಡ್ರು. ಕೇಂದ್ರ ಸರ್ಕಾರ ಇತ್ತ ಗಮನ ಕೂಡ ಹರಿಸಲಿಲ್ಲ. ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ಸಂತ್ರಸ್ತ ಕುಟುಂಬಗಳಿಗೆ ಮಾತು ಕೊಟ್ಟರು.

ಪಕೋಡ ತಿಂದು ಟೀ ಸೇವಿಸಿದ ರಾಹುಲ್

​​ಭಾರತ್​ ಜೋಡೋ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣದ ಗೇಟ್​ ಬಳಿ ಪಕೋಡ ತಿಂದು ಟೀ ಕುಡಿದರು.

ವಿದ್ಯಾರ್ಥಿನಿ ಭೇಟಿ

9 ನೇ ತರಗತಿ ವಿದ್ಯಾರ್ಥಿನಿಯನ್ನು ಮಾತನಾಡಿಸಿದ ರಾಹುಲ್ ಗಾಂಧಿ, ಬೆನ್ನುತಟ್ಟಿ ಎಷ್ಟೇ ತರಗತಿ ಓದುತ್ತಿದ್ದಿಯಾ ಎಂದು ಪ್ರಶ್ನಿಸಿದರು. ಅಲ್ಲದೇ ನಿನ್ನ ಡ್ರೀಮ್ ಏನು ಅಂತ ವಿದ್ಯಾರ್ಥಿನಿಯನ್ನು ಕೇಳಿದರು.

ರೆಸ್ಟ್ ವೇಳೆ ಸಿದ್ದರಾಮಯ್ಯ ಕಾಲು ಒತ್ತಿದ ಬೆಂಬಲಿಗ

ನಾಲ್ಕು ಕಿಮೀ ನಡೆದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಸ್ತಾದರು. ಈ ಹಿನ್ನೆಲೆಯಲ್ಲಿ ಕೊಂಚ ಹೊತ್ತು ವಿಶ್ರಾಂತಿ  ಪಡೆದುಕೊಂಡರು. ಈ ವೇಳೆ ಅವರ ಬೆಂಬಲಿಗನೋರ್ವ ಸಿದ್ದರಾಮಯ್ಯನವರ ಕಾಲು ಒತ್ತಿರುವುದು ಕಂಡುಬಂತು.

ಭಾರತ್​ ಜೋಡೋ ಯಾತ್ರೆ ವೇಳೆ ರಾರಾಜಿಸಿದ ಅಪ್ಪು ಫೋಟೋ

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪುನೀತ್ ರಾಜ್​ಕುಮಾರ್ ಫೋಟೋ ಹಿಡಿದು ಹೆಜ್ಜೆಹಾಕಿರುವುದು ಎಲ್ಲರ ಗಮನಸೆಳೆಯಿತು.

ಭಾರತ್​ ಜೋಡೋ ಯಾತ್ರೆ ವೇಳೆ ‘ಪೇ ಸಿಎಂ’ ಅಭಿಯಾನ

ಇನ್ನು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಪೇ ಸಿಎಂ ಅಭಿಯಾನ ಕಾಂಗ್ರೆಸ್ ಜೋಡೋ ಯಾತ್ರೆಯಲ್ಲೂ ಮುಂದುವರಿಯಿತು. ಇಂದಿನ ನಡಿಗೆಯಲ್ಲಿ ಟೀ ಶರ್ಟ್, ಪೇ ಸಿಎಂ ಪೋಸ್ಟರ್ ಇರುವ ಫ್ಲಾಗ್​ ಹಾಗೂ ‘ಪೇ ಸಿಎಂ’ ಟೀ ಶರ್ಟ್ ಧರಿಸಿ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಯಾತ್ರೆಯಲ್ಲಿ ಗೊಂದಲ ಸೃಷ್ಟಿಸಿದ ಡ್ರೋನ್

ಎಲ್ಲರೂ ತಮ್ಮ ಪಾಡಿಗೆ ತಾವು ರಾಹುಲ್ ಗಾಂಧಿ ಜೊತೆ ನಡಿಗೆಯಲ್ಲಿ ಬ್ಯುಸಿಯಾಗಿದ್ರೆ, ಅವರ ಮೇಲೆ ಒಂದು ಡ್ರೋನ್ ಕ್ಯಾಮರಾ ಹಾರಾಡಿದ್ದು, ಕೆಲ ಕಾಲ ಗೊಂದಲ ಉಂಟಾಯಿತು.

ಸೆಕ್ಯುರಿಟಿ ಪ್ರಕಾರ ಎಐಸಿಸಿಯಿಂದ ಅನುಮತಿ ಪಡೆದ ಡ್ರೋನ್ ಮಾತ್ರ ಹಾರಾಡಬೇಕು. ಅದರಂತೆಯೇ ನಿರಂತರವಾಗಿ ಒಂದೇ ಡ್ರೋನ್ ಬೆಳಗ್ಗೆಯಿಂದ ಹಾರಾಟ ಮಾಡಿತ್ತು. ಸಂಜೆ ವೇಳೆ ಹೊಸ ಡ್ರೋನ್ ಹಾರಾಟದಿಂದ ಸೆಕ್ಯುರಿಟಿ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿರುವ ಪ್ರಸಂಗವೂ ಸಹ ನಡೆಯಿತು. ಡ್ರೋನ್ ಸ್ಟಾಪ್ ಮಾಡಿ ಎಂದು ಎರಡು ಮೂರು ಬಾರಿ ವರ್ನಿಂಗ್ ನೀಡಿದರೂ ಡ್ರೋನ್ ಹಾರಾಟ ಮುಂದುವರಿದಿತ್ತು. ಇದರಿಂದ ಕೂಡಲೇ ಹೈ ಅಲರ್ಟ್ ಆದ ಸೆಕ್ಯುರಿಟಿ ಸಿಬ್ಬಂದಿಗಳು ಡ್ರೋನ್ ಸೋರ್ಸ್ ಗಾಗಿ ಕೆಲಕಾಲ ಹುಡುಕಾಡಿದರು.

ಕೊನೆಗೆ ಡ್ರೋನ್ ಹಾರಿಸುತ್ತಿದ್ದವನನ್ನು ಭದ್ರತಾ ಸಿಬ್ಬಂದಿ ಹಿಡಿದು ವಿಚಾರಿಸಿದರು. ಬಳಿಕ ಆ ಡ್ರೋನ್ ಡಿಕೆಶಿವಕುಮಾರ್ ಆಪ್ತರದ್ದೇ ಎಂದು ತಿಳಿಯಿತು.ಇದರಿಂದ ಭದ್ರತಾ ಸಿಬ್ಬಂದಿ, ಮತ್ತೆ ಹಾರಿಸದಂತೆ ಎಚ್ಚರಿಕೆ ನೀಡಿ ಬಿಟ್ಟರು.

2ನೇ ದಿನ ಭಾರತ್ ಜೋಡೋ ಪಾದಯಾತ್ರೆ ರೂಟ್

01.10.2022ರ ಬೆಳಗ್ಗೆ 6.30 ಕ್ಕೆ ತೊಂಡವಾಡಿ ಗೇಟ್ ಗುಂಡ್ಲುಪೇಟೆಯಿಂದ ಆರಂಭವಾಗಲಿದ್ದುಯ, ಬೆಳಗ್ಗೆ 11.00ಕ್ಕೆ ಕಳಲೆ ಗೇಟ್ ಬಳಿ ವಿಶ್ರಾಂತಿ ಪಡೆಯಲಿದೆ. ಮಧ್ಯಾಹ್ನ 4.00 ಗಂಟೆ ಕಳಲೆ ಗೇಟ್ ನಿಂದ ಪಾದಯಾತ್ರೆ ಪ್ರಾರಂಭವಾಗಿ ಸಂಜೆ 7.00ಕ್ಕೆ ಚಿಕ್ಕಯ್ಯನ ಛತ್ರ ಗೇಟ್ ಬಳಿ ಪಾದಯಾತ್ರೆ ಮುಕ್ತಾಯವಾಗಲಿದೆ. ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ನಾಳೆ ರಾತ್ರಿ ವಾಸ್ತವ್ಯ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada