ಚಿಕ್ಕಬಳ್ಳಾಫುರ, ಫೆಬ್ರವರಿ 04: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ಡಾ.ಕೆ ಸುಧಾಕರ್ (K Sudhakar) ಪಕ್ಷದ ಚಟುವಟಿಕೆಗಳಲ್ಲಿ ಅಷ್ಟೊಂದು ಆಕ್ಟಿವ್ ಆಗಿ ಇರಲ್ಲಿಲ್ಲ. ಆದರೆ ಕೆ. ಸುಧಾಕರ್ ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿದ್ದರು. ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ 2-3 ತಿಂಗಳು ಬಾಕಿ ಇದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಹೌದು ದೇವಮೂಲೆಯಾದ ಚೇಳೂರು ತಾಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಶ್ಚರವು, ಚಾಕವೇಲು, ಸಜ್ಜಲವಾರಪಲ್ಲಿ ನಲ್ಲಗುಟ್ಲಪಲ್ಲಿ ಗಂಗಮ್ಮ ಬೆಟ್ಟ, ಪಾಳ್ಯಾಕೆರೆ ಗ್ರಾಮಗಳಿಂದ ಇಂದು (ಫೆ.04) ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಸಮ್ಮತಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನನ್ನ ಸ್ಪರ್ಧೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಒಬ್ಬ ಸಂಸದ ಏನು ಮಾಡಬಹುದೆಂದು ತೋರಿಸುತ್ತೇನೆ. ಕೆ. ಸುಧಾಕರ್ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಸುಧಾಕರ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ತಮ್ಮ ಪಾತ್ರವೂ ಇದೆ. ಎಂಟಿಬಿ ನಾಗರಾಜ್, ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿ ಸೇರಿದ್ದೆವು. ಆದರೆ, ನಮ್ಮ ತ್ಯಾಗಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿದೆ. ದೇಶ ಅಭಿವೃದ್ಧಿಯಾಗಬೇಕು ಅಂದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ; ಎಸ್ಎ ರಾಮದಾಸ್
ಇನ್ನು ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರವನ್ನು ನಮ್ಮ ವರಿಷ್ಠರು ಬಿಜೆಪಿಗೆ ಬಿಟ್ಟುಕೊಟ್ಟರಾ ಎಂಬ ಗೊಂದಲ ಚಿಕ್ಕಬಳ್ಳಾಪುರ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಮೂಡಿದ್ದು, ಗೊಂದಲಕ್ಕೆ ಕಾರಣವಾಗಿದೆ.
ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರದೀಪ್ ಈಶ್ವರ್ ವಿರುದ್ಧ ಸೋಲುಕಂಡಿದ್ದಾರೆ. ಹೀಗಾಗಿ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಅಖಾಡಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಹಾಲಿ ಬಿಜೆಪಿ ಸಂಸದ ಬಚ್ಚೇಗೌಡ ಇದ್ದಾರೆ. ಆದ್ರೆ, ಅವರು ಹೆಚ್ಚು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಪುತ್ರ ಶರತ್ಗೆ ಬೆಂಬಲಿಸಿದ್ದರು ಎನ್ನುವ ಆರೋಪಗಳು ಕೇಳಿಬಂದಿದೆ. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕಟ್ ಆಗುವುದು ಪಕ್ಕಾ ಆಗಿದೆ. ಹೀಗಾಗಿ ತಯಾರಾಗುವಂತೆ ಸುಧಾಕರ್ಗೆ ಸೂಚನೆಗ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ