ಲೋಕಸಭೆ ಗೆಲ್ಲಲು ಭಿನ್ನಾಭಿಪ್ರಾಯ ಮರೆತು ಹುಬ್ಬಳ್ಳಿಯಲ್ಲಿ ಮತ್ತೆ ಒಂದಾದ ಬಿಜೆಪಿ ನಾಯಕರು
ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ತಡರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸಭೆ ಮಾಡಿದ್ದು, ವೈಮನಸ್ಸು ಮರೆತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಮುನೇನಕೊಪ್ಪ, ಶಾಸಕರಾದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಮ್. ಆರ್.ಪಾಟೀಲ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಈರಣ್ಣ ಭಾಗಿಯಾಗಿದ್ದರು.
ಹುಬ್ಬಳ್ಳಿ, ಫೆಬ್ರವರಿ 04: ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ನೀಡಲು ನಿರಾಕರಿಸಿದ್ದಕ್ಕೆ ಬಿಜೆಪಿಯ ಕಟ್ಟಾಳು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಕಮಲ ಮನೆ ತೊರೆದು ಕಾಂಗ್ರೆಸ್ (Congress) ಪಕ್ಷ ಸೇರಿದ್ದರು. ಈ ವೇಳೆ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯಲ್ಲೇ (BJP) ಉಳಿಸಿಕೊಳ್ಳಲು ಕೇಸರಿ ನಾಯಕರು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜೋಡೆತ್ತು ಎಂದೇ ಹೆಸರುವಾಸಿಯಾಗಿದ್ದಾರೆ. ಆದರೆ ಶೆಟ್ಟರ್ ಪಕ್ಷ ತೊರೆಯುತ್ತಿದ್ದಂತೆ ಇಬ್ಬರ ನಡುವೆ ಸಣ್ಣ ಬಿರುಕು ಮೂಡಿತ್ತು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ ಮೇಲೆ ರಾಜ್ಯ ಬಿಜೆಪಿ ನಾಯಕರ ಮೇಲೆ ನೇರಾ ನೇರ ವಾಗ್ದಾಳಿ ಮಾಡಲು ಶುರು ಮಾಡಿದ್ದರು. ಇದು ಸಚಿವ ಪ್ರಹ್ಲಾದ್ ಜೋಶಿ ಅಸಮಾಧನಕ್ಕೂ ಕಾರಣವಾಗಿತ್ತು. ಇನ್ನು ವಿಧಾನಸಭೆಯಲ್ಲಿ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿತು. ಸೋಲಿಲ್ಲದ ಸರದಾರನಂತೆ ಸತತ ಆರು ಬಾರಿ ಗೆದ್ದಿದ್ದ ಶೆಟ್ಟರ್ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಇದಾದ ನಂತರ ಶೆಟ್ಟರ್ ಅವರನ್ನು ಕಾಂಗ್ರೆಸ್ ಎಂಎಲ್ಸಿ ಮಾಡಿತು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿ ಭದ್ರಕೋಟೆ. ಜಾತಿವಾರು ಲೆಕ್ಕಚಾರ ನೋಡುವವುದಾದರೆ ಲಿಂಗಾಯತರ ಸಂಖ್ಯೆ ಹೆಚ್ಚಾಗಿದೆ. ಜಾತಿಗಿಂತ ಮಿಗಿಲಾಗಿ ಇಲ್ಲಿ ಹಿಂದುತ್ವ ಸಿದ್ಧಾಂತ ಹೆಚ್ಚು ವರ್ಕೌಟ್ ಆಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಬಿಜೆಪಿ ಸುಲಭ ಜಯ ಸಿಗುತ್ತದೆ. ಇನ್ನು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ ಬಳಿಕ ಸಾರ್ವಜನಿಕರ ನಡುವೆ ಕಾಣಿಸುವುದೇ ಅಪರೂಪವಾಯಿತು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್
ಶೆಟ್ಟರ್ಗೆ ಗಾಳ ಹಾಕಿದ ಬಿಜೆಪಿ
ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ ಮೇಲೆ ಲಿಂಗಯಾತ ಮತಗಳು ಚದುರಿದಂತಾಗಿದ್ದವು. ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿತು. ಬಳಿಕ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಾಕ್ಷರಾಗಿ ಘೋಷಿಸಿದ ನಂತರ ಲಿಂಗಾಯತರ ಗಮನ ಬಿಜೆಪಿಯಡೆಗೆ ಸರಿತು. ಬಳಿಕ ಬಿವೈ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ಅವರು ನಿರಂತರವಾಗಿ ಜಗದೀಶ ಶೆಟ್ಟರ್ ಅವರನ್ನು ಸಂಪರ್ಕಿಸಿ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಹುಬ್ಬಳ್ಳಿ-ಧಾರವಾಡ ಸ್ಥಳೀಯ ನಾಯಕರಿಗೆ ಇದು ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬಂದವು.
ಮತ್ತೆ ಒಂದಾದ ಶೆಟ್ಟರ್, ಜೋಶಿ
ಬಿಜೆಪಿ ಸೇರಿದ ಬಳಿಕವೂ ಪ್ರಹ್ಲಾದ್ ಜೋಶಿ ಮತ್ತು ಜಗದೀಶ ಶೆಟ್ಟರ್ ಬಣಗಳ ನಡುವೆ ಭಿನ್ನಾಭಿಪ್ರಾಯ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ (ಫೆ.03) ರಂದು ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಗೆ ಜಗದೀಶ್ ಶೆಟ್ಟರ್ ಮತ್ತು ಮುನೇನಕೊಪ್ಪ ಗೈರಾಗಿದ್ದರು. ಆದರೆ ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ತಡರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸಭೆ ಮಾಡಿದ್ದು, ವೈಮನಸ್ಸು ಮರೆತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಮುನೇನಕೊಪ್ಪ, ಶಾಸಕರಾದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಮ್. ಆರ್.ಪಾಟೀಲ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಈರಣ್ಣ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sun, 4 February 24