ರಾಮನಗರ, ಅಕ್ಟೋಬರ್ 06: ಜೆಡಿಎಸ್ (JDS) ಪಕ್ಷ ಯಾವತ್ತೂ ಸ್ವಂತ ಬಲದಿಂದ ಸರ್ಕಾರ ರಚಿಸಿಲ್ಲ. ನನಗೆ ಐದು ವರ್ಷ ನನ್ನ ಪಕ್ಷ ಸರ್ಕಾರ ರಚಿಸಬೇಕೆಂಬ ಛಲ ಇದೆ. ಪೂರ್ಣ ಬಹುಮತದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಹುಬ್ಬಳ್ಳಿ-ಧಾರವಾಡ ರೀತಿ ಚನ್ನಪಟ್ಟಣ, (Channapatna) ರಾಮನಗರವನ್ನು (Ramnagar) ಅವಳಿ ನಗರ ಮಾಡಬೇಕೆಂಬ ಗುರಿ ಇದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು (ಹೆಚ್ಡಿ ಕುಮಾರಸ್ವಾಮಿ) 14 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನಂತರ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ಆಮೇಲೆ ಹೆಚ್ಡಿ ಕುಮಾರಸ್ವಾಮಿಯನ್ನು ಮುಗಿಸಿಬಿಟ್ವಿ ಅಂದುಕೊಂಡರು. ಆದರೆ, ಈಗ ಪ್ರಧಾನಿ ಮೋದಿ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ. ನನ್ನ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ. ವಿಶಾಖಪಟ್ಟಣಂನಲ್ಲಿ ಮುಚ್ಚಿಹೋಗಿದ್ದ ಕಾರ್ಖಾನೆ ಪುನರಾರಂಭಿಸಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಚನ್ನಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರನ್ನು ನಂಬಬೇಡಿ. ಸಚಿವ ರಾಮಲಿಂಗಾರೆಡ್ಡಿ, ಮಾಗಡಿ ಶಾಸಕರು ಬರುತ್ತಿದ್ದಾರೆ. ಕಾಂಗ್ರೆಸ್ನವರನ್ನು ನಂಬಬೇಡಿ ಕೈಜೋಡಿಸಿ ಮನವಿ ಮಾಡುತ್ತೇನೆ. ಜನರನ್ನು ಆರ್ಥಿಕವಾಗಿ ಬೆಳೆಸುವ ಬದ್ಧತೆ ಕಾಂಗ್ರೆಸ್ಗೆ ಇಲ್ಲ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ. ದೇವರು, ಜನರಿಗೆ ಮಾತ್ರ ಹೆದರುವೆ. ಶಿವನ ಆಶೀರ್ವಾದ ನಮ್ಮ ಮೇಲೆ ಇರುವವರೆಗೂ ಯಾರೂ ನಮ್ಮನ್ನು ಮುಗಿಸಲು ಆಗಲ್ಲ. ಚನ್ನಪಟ್ಟಣಕ್ಕೆ ನಾನು ಯಾರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ನೀವು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಏನು ದೆವ್ವನಾ, ನಾನು ಹೆದರೋಕೆ: ಹೆಚ್ ಡಿ ಕುಮಾರಸ್ವಾಮಿ
ನನಗೆ ಮೂರು ಬಾರಿ ಆಪರೇಷನ್ ಆಗಿದೆ. ಬಡವರಿಗಾಗಿ ಒಳ್ಳೆಯ ಕೆಲಸ ಮಾಡಲು ದೇವರು ಮರುಜನ್ಮ ನೀಡಿದ್ದಾನೆ. ನಾನು ಯಾವನಿಗೂ ದಮ್ಮಯ್ಯ ಅಂತ ಅನ್ನುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ ಎಂದರು.
ಮೋದಿ ಸಂಪುಟದಲ್ಲಿ ಸೀನಿಯರ್ ಮಂತ್ರಿಯಾಗಿ ಒಂಬತ್ತನೇ ಸ್ಥಾನದಲ್ಲಿದ್ದೇನೆ. ದೇಶವನ್ನು ದರೋಡೆ ಮಾಡುವವರ ನಡುವೆ ಇದ್ದೀರಿ ಯೋಚಿಸಿ ತೀರ್ಮಾನಿಸಿ. ಈಗ ಏನೋ ಮನೆ ಕಟ್ಟುತ್ತೇವೆ, ಸೈಟ್ ಕೊಡುತ್ತೇವೆ ಅಂತ ಹೇಳ್ತಿದ್ದಾರೆ. ಆದರೆ, ಅವರು ಕೊಡುವಷ್ಟರಲ್ಲಿ ಚುನಾವಣೆ ಘೋಷಣೆ ಆಗುತ್ತೆ. ಇದೆಲ್ಲ ಕೊಡುವುದಿದ್ದರೆ ಈ ಹಿಂದೆಯೇ ಕೊಡಬೇಕಿತ್ತು ಎಂದು ಪರೋಕ್ಷವಾಗಿ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sun, 6 October 24