ಕ್ಷೇತ್ರಕ್ಕೆ ನೀರು ಬರದಿದ್ದರೆ ನಾಳೆಯೇ ರಾಜೀನಾಮೆ, ನಾಡಿದ್ದು ನಿವೃತ್ತಿ: ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ

| Updated By: ರಮೇಶ್ ಬಿ. ಜವಳಗೇರಾ

Updated on: Nov 07, 2023 | 1:06 PM

ಅಧಿಕಾರಿಗಳ ವರ್ಗಾವಣೆ, ಶಾಸಕ ಹಾಗೂ ಸಚಿವರ ನಡುವಿನ ಮುಸುಕಿನ ಗುದ್ದಾಟದಿಂದ ಕಾಂಗ್ರೆಸ್​ ಸೃಷ್ಟಿಯಾಗಿದ್ದ ಗೊಂದಲಗಳು ಬಗೆಹರಿದಿವೆ ಎನ್ನುವಷ್ಟರಲ್ಲೇ ಮತ್ತೆ ಒಂದೊಂದೇ ಸಮಸ್ಯೆಗಳು ಉದ್ಭವಿಸುತ್ತಿವೆ. ಜಾತಿ ಗಣತಿ ವರದಿ, ಸಿಎಂ ಅಧಿಕಾರ ಹಂಚಿಕೆ ಜಟಾಪಟಿ ಮಧ್ಯೆ ಕಾಂಗ್ರೆಸ್ ಶಾಸಕ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಗುಡುಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಕ್ಷೇತ್ರಕ್ಕೆ ನೀರು ಬರದಿದ್ದರೆ ನಾಳೆಯೇ ರಾಜೀನಾಮೆ, ನಾಡಿದ್ದು ನಿವೃತ್ತಿ: ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ
ಕಾಂಗ್ರೆಸ್ ಶಾಸಕ ಯಶವಂತರಾಯಗೌಡ
Follow us on

ವಿಜಯಪುರ, (ನವೆಂಬರ್ 07): ನನ್ನ ಕ್ಷೇತ್ರದ ಗ್ರಾಮಗಳಿಗೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವೆ ಎಂದು ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ(Yashavanth Rayagoud Patil) ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಜಯಪುರಲ್ಲಿಂದು ಮಾತನಾಡಿದ ಯಶವಂತರಾಯಗೌಡ, ಇಂಡಿ ತಾಲೂಕಿನ ಕಟ್ಟಕಡೆಯ ಹಳ್ಳಿಗಳಿಗೂ ಕಾಲುವೆ ನೀರು ಬಂದಿಲ್ಲ, ಗುತ್ತಿ ಬಸವಣ್ಣ ಏತ ನೀರಾವರಿ, ಇಂಡಿ ಶಾಖಾ ಕಾಲುವೆಯಿಂದ ನೀರು ಹರಿಸಬೇಕು. ಒಂದು ವೇಳೆ ನನ್ನ ಕ್ಷೇತ್ರಕ್ಕೆ ನೀರು ಬರದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕ್ಷೇತ್ರದ ಜನರಿಗೆ ಅನುಕೂಲ ಆಗದಿದ್ದರೆ ನಾಳೆಯೇ ರಾಜೀನಾಮೆ ನೀಡುವೆ. ನಾಡಿದ್ದು ರಾಜಕೀಯದಿಂದಲೇ ನಿವೃತ್ತಿಯಾಗುವೆ ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

ಬರ ಮಧ್ಯೆ ಇಂಡಿ ಕ್ಷೇತ್ರದ ಕಟ್ಟ ಕಡೆಯ ಹಳ್ಳಿಗಳಿಗೆ ಕಾಲುವೆ ನೀರು ಬಂದಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲ, ಜನರಿಗೆ ಉತ್ತರದಾಯಿ ಆಗಿರಬೇಕು. ಜನಾಶಯ ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿಯಾಗಬೇಕು ಅಥವಾ ರಾಜಿನಾಮೆ‌ ನೀಡಬೇಕು ಎಂದು ಹೇಳಿದರು. ಈ ಮೂಲಕ‌ ಪರೋಕ್ಷವಾಗಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಜತೆ ಗುಪ್ತ್​ ಗುಪ್ತ್​ ಮಾತುಕತೆ ನಡೆಸಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್

ತಮ್ಮ ಕ್ಷೇತ್ರ ಕಟ್ಟ ಕಡೆಯ ರೈತರಿಗೆ ನೀರು ಸಿಗುತ್ತಿಲ್ಲ. ನನ್ನ ಕ್ಷೇತ್ರದ ಜನರಿಗೆ ನೀರು ಸಿಗದೆ ಹೋದರೆ ಯಾವ ಹಂತಕ್ಕೆ ಹೋಗಲು ಸಿದ್ಧ . ನೀರು ಬರದೆ ಹೋದರೆ ನಾನು ಯಾರಿಗೂ ಕೇರ್ ಮಾಡುವುದಿಲ್ಲ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಇಂಡಿ ಕ್ಷೇತ್ರ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಯಬೇಕಿದೆ. ಆದ್ರೆ, 22 ವರ್ಷದಿಂದ ಇಂಡಿ ಕ್ಷೇತ್ರದ ಕಾಲುವೆಗಳಿಗೆ ನೀರು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಬದ್ಧತೆ ಇದೆ, ಕಾಂಗ್ರೆಸ್ ಪಕ್ಷದಿಂದಲೇ ರಾಜಕಾರಣ ಮಾಡಿದ್ದೇನೆ, ಇಲ್ಲೆ ನಿವೃತ್ತಿ ಆಗುವೆ. ಜನರಿಗೆ ಅನಕೂಲ ಆಗದಿದ್ದರೆ ನಾಳೆಯೇ ರಾಜೀನಾಮೆ ನೀಡುವೆ. ನಾಡಿದ್ದೆ ನಿವೃತ್ತಿಯಾಗುವೆ. ಜನರಿಗೆ ನೀರು ಬರದಿದ್ದರೆ ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡಬೇಕು. ಜನರ ಸಮಸ್ಯೆಯನ್ನು ನೇರವಾಗಿ ಎದೆಗಾರಿಕೆಯಿಂದ ಹೇಳುವೆ ಎಂದು ಕಡ್ಡಿ ಮುರಿದಂತೆ ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ