ಸರ್ಕಾರದ ಬಳಿ ಹಣವಿಲ್ಲ ದಿವಾಳಿಯಾಗಿದೆ, ಬದಕಿದ್ದೂ ಸತ್ತಂತೆ: ಬಿಎಸ್ ಯಡಿಯೂರಪ್ಪ

ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ಸಿಗರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ, ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದರು.

ಸರ್ಕಾರದ ಬಳಿ ಹಣವಿಲ್ಲ ದಿವಾಳಿಯಾಗಿದೆ, ಬದಕಿದ್ದೂ ಸತ್ತಂತೆ: ಬಿಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on: Nov 07, 2023 | 11:39 AM

ಬೆಂಗಳೂರು 07: ಏಳನೇ ವೇತನ ಆಯೋಗದ ಅವಧಿಯನ್ನು ಸರ್ಕಾರ (Karnataka Government) ಮುಂದೂಡಿರುವುದಕ್ಕೆ ಸಂಬಂಧಿಸಿದಂತೆ ವೇತನ ಪರಿಷ್ಕರಣೆಗೆ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಬೇಕು. ಆದರೆ ಸರ್ಕಾರ ಕುಂಟು ನೆಪ ಹೇಳಿ ಅವಧಿಯನ್ನು ವಿಸ್ತರಿಸಿದೆ. ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿ ಜಾರಿಗೆ ಹಣವಿಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ ಎದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurappa) ವಾಗ್ದಾಳಿ ಮಾಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ಸಿಗರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ, ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಕೆಇಎ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ಏನು ಅಂತಾ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆರ್.ಡಿ.ಪಾಟೀಲ್ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದರು.

ಇದನ್ನೂ ಓದಿ: 7ನೇ ರಾಜ್ಯ ವೇತನ ಆಯೋಗದ ಅವಧಿ 2024ರ ಮಾರ್ಚ್‌ 15ರವರೆಗೆ ವಿಸ್ತರಣೆ ಮಾಡಿದ ಸರ್ಕಾರ

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಇಡೀ ಜಗತ್ತೇ ಮೆಚ್ಚಿದ ಪ್ರಧಾನಿಯವರ ಬಗ್ಗೆ ಟೀಕೆ ಮಾಡುವಷ್ಟು ದುರಹಂಕಾರ ಇವರಿಗೆ ಬಂದಿದೆ. ಇದನ್ನು ಜನ ಮೆಚ್ಚುವುದಿಲ್ಲ, ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ. ಚಂದ್ರೇಗೌಡ ಅವರ ನಿಧನಕ್ಕೆ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದರು. ಚಂದ್ರೇಗೌಡರು ಬಹಳ ಹಿರಿಯರು, ನನ್ನ ಆತ್ಮೀಯ ಸ್ನೇಹಿತರು. ಅವರ ನಿಧನದ ಸುದ್ದಿ ಕೇಳಿ ಬಹಳ ದು:ಖ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ದೇವರು ಕೊಡಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ