ಕರ್ನಾಟಕದ ಎರಡು ಕ್ಷೇತ್ರಗಳ ಗೆಲುವು ಮೋದಿಗೆ ಎಚ್ಚರಿಕೆಯ ಸಂದೇಶ: ಮಲ್ಲಿಕಾರ್ಜುನ ಖರ್ಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 18, 2021 | 7:42 PM

ಇಲ್ಲಿ ಕಾಂಗ್ರೆಸ್ ಸಾಧಿಸುವ ಗೆಲುವು ರೈತರು, ಬಡವರಿಗೆ ತೊಂದರೆ ನೀಡುತ್ತಿದ್ದಿರಿ ಎಂಬ ಎಚ್ಚರಿಕೆಯನ್ನು ಆಳುವವರಿಗೆ ನೀಡುತ್ತದೆ ಎಂದು ಖರ್ಗೆ ಹೇಳಿದರು.

ಕರ್ನಾಟಕದ ಎರಡು ಕ್ಷೇತ್ರಗಳ ಗೆಲುವು ಮೋದಿಗೆ ಎಚ್ಚರಿಕೆಯ ಸಂದೇಶ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ವಿಜಯಪುರ: ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅ.30ರಂದು ಮತದಾನ ನಡೆಯಲಿದೆ. ಇದೊಂದು ಉಪಚುನಾವಣೆ ಎಂದು ಉದಾಸೀನ ಮಾಡಬೇಡಿ. ಇಲ್ಲಿ ಕಾಂಗ್ರೆಸ್​ ಸಾಧಿಸುವ ಗೆಲುವಿನಿಂದ ನರೇಂದ್ರ ಮೋದಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತೆ ಆಗುತ್ತದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿ ಮಾತನಾಡಿದ ಅವರು, ಇಲ್ಲಿ ನಾವು ಸಾಧಿಸುವ ಗೆಲುವಿನಿಂದ ರೈತರು, ಬಡವರಿಗೆ ತೊಂದರೆ ನೀಡುತ್ತಿದ್ದಿರಿ ಎಂಬ ಎಚ್ಚರಿಕೆಯನ್ನು ಆಳುವವರಿಗೆ ನೀಡುತ್ತದೆ. ಬಿಜೆಪಿಯ ಮುಂಚೂಣಿ ನಾಯಕರು ನಿರುದ್ಯೋಗಿ ಯುವಕ, ಯುವತಿಯರನ್ನು ವಂಚಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಜಗಳ ತಂದಿಟ್ಟು ವಿಷಯಾಂತರ ಮಾಡುತ್ತಿದ್ದಾರೆ. ಕುತಂತ್ರದಿಂದ ಚುನಾವಣೆ ಗೆಲ್ಲಲು ಬಿಜೆಪಿ ಹಂಬಲಿಸುತ್ತಿದೆ ಎಂದು ವಿಶ್ಲೇಷಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ನಮ್ಮ ನಾಯಕರು ದೇಶಕ್ಕಾಗಿ ಜೈಲುವಾಸ ಅನುಭವಿಸಿದ್ದರು. ಸಂವಿಧಾನ ಬರೆವಂತೆ ಅಂಬೇಡ್ಕರ್​ಗೆ ಗಾಂಧಿ ಒಪ್ಪಿಸಿದ್ದರು. ಎಲ್ಲಾ ತಾರತಮ್ಯ ತೊಡೆದುಹಾಕಿ ಸಮಾನತೆ ನೀಡಿದ್ದರು. ಅಂಬೇಡ್ಕರ್​ ಬರೆದ ಸಂವಿಧಾನ ಎಲ್ಲರಿಗೂ ಅವಕಾಶ ನೀಡಿದೆ. ಕಾಲೇಜು, ರಸ್ತೆ, ಸೇತುವೆ, ಮತದಾನದ ಹಕ್ಕು ನೀಡಿದ್ದೇವೆ. ಆದರೆ ಆರ್​ಎಸ್​ಎಸ್ ಮಹಿಳಾ ಸಬಲೀಕರಣ ಮಾಡಲು ಮುಂದೆ ಬರುತ್ತಿಲ್ಲ ಎಂದು ಅವರು ನುಡಿದರು.

ಈ ಚುನಾವಣಾ ಮಹತ್ವದ್ದಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದೇನು‌ ಉಪ ಚುನಾವಣೆ ಎಂದು ಉದಾಸೀನ ಮಾಡಬೇಡಿ. ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ರೈತರ ಹತ್ಯೆ ಮಾಡಿದ್ದಾನೆ. ಇದು ಕೊಲೆಗಡುಕ ಸರ್ಕಾರ. ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪ್ರಕರಣವನ್ನೇ ದಾಖಲಿಸದೆ ಬಂಧಿಸಲಾಗಿದೆ. ಅವರನ್ನು ಉತ್ತರ ಪ್ರದೇಶ ಸರ್ಕಾರವು 72 ಗಂಟೆಗಳ ಬಂಧನದಲ್ಲಿ ಇರಿಸಿತ್ತು. ಪೆಟ್ರೋಲ್, ಡೀಸೆಲ್​​ ದರ ಏರಿಕೆ ಮಾಡಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಅವರಿಗೆ ರೈತರ ಬಗ್ಗೆ ಅನುಕಂಪ ಇಲ್ಲ. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳು ಕಪ್ಪು ಕಾನೂನುಗಳು. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಮತ್ತು ರೈತರನ್ನು ಮತ್ತಷ್ಟು ಬಡವರನ್ನಾಗಿ ಮಾಡುವ ಕಾಯ್ದೆಗಳು ಎಂದು ಖರ್ಗೆ ಹೇಳಿದರು. ಭಾಷಣದ ವೇಳೆಯಲ್ಲಿ ನಮಾಜ್​ ಆರಂಭವಾದಾಗ, ಭಾಷಣ ನಿಲ್ಲಿಸಿ ಕುಳಿತರು. ಆಲಮೇಲದ ಕಾಂಗ್ರೆಸ್ ಕಾರ್ಯಕರ್ತರು ಖರ್ಗೆ, ಸಿದ್ದರಾಮಯ್ಯ ಮತ್ತು ಇತರ ನಾಯಕರಿಗೆ ಬೃಹತ್ ಹೂಮಾಲೆ ಅರ್ಪಿಸಿ, ಗುಲಾಬಿ ಹೂವಿನ ಮಳೆಗರೆದರು.

ಕೇಂದ್ರ ಸರ್ಕಾರವು ಇಡಿ, ಸಿಬಿಐ, ಖಾಸಗಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿದರು. ಗೋವಾ, ಮಣಿಪುರ, ಉತ್ತರಾಖಂಡ್‌ನಲ್ಲಿ ಶಾಸಕರನ್ನು ಇಡಿ, ಐಟಿ ಮೂಲಕ ಬೆದರಿಸಿ ಸರ್ಕಾರ ರಚನೆ ಮಾಡಿದರು. ಜನ ಬೆಂಬಲ ನಮಗಿದ್ದರೂ ವಾಮಮಾರ್ಗದಿಂದ ಅವರು ಅಧಿಕಾರಕ್ಕೆ ಬಂದಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ‌ ವಿಕಾಸ್ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬದರಾದರೂ, ಮಾಡಿದ್ದು ಮಾತ್ರ ‘ಸಬ್ ಕಾ ಸತ್ಯನಾಶ್’ ಎಂದು ಕಟುವಾಗಿ ಟೀಕಿಸಿದರು.

ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್
ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ದೇವೇಗೌಡ ಪ್ರಚಾರ

Published On - 7:40 pm, Mon, 18 October 21