ಬೆಂಗಳೂರು, ಜ.27: ಐಎನ್ಡಿಐಎ (INDIA) ಮೈತ್ರಿಕೂಟದ ಪಕ್ಷಗಳ ನಡುವೆ ಬಿರುಕು ಮೂಡಿರುವ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಐಎನ್ಡಿಐಎ ಒಕ್ಕೂಟ ಒಂದು ಫೋಟೋ ಶೂಟ್ ಅಷ್ಟೇ ಆಗಿತ್ತು. ಆ ಒಕ್ಕೂಟದವರಿಗೆ ನೀತಿ, ನಿಯತ್ತು, ನೇತೃತ್ವ ಮೂರೂ ಇಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ಅದೊಂದು ಅಸಹಜ, ಅಸ್ವಾಭಾವಿಕ ಒಪ್ಪಂದ ಆಗಿತ್ತು. ಹಾಗಾಗಿ ಐಎನ್ಡಿಐಎ ಒಕ್ಕೂಟ ಸಾಯುತ್ತಿದೆ. ನಿತೀಶ್ ಕುಮಾರ್ ಬಿಜೆಪಿಗೆ ಸೇರುವ ಬಗ್ಗೆ ನಾನು ಏನೂ ಮಾತಾಡಲ್ಲ. ಅವರು ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತಾಡಲು ನಾನು ಸೂಕ್ತವೂ ಅಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ವೇಳೆ ಹುಬ್ಬಳ್ಳಿಯ ಬಿಜೆಪಿ ನಾಯಕರ ಪೈಕಿ ಒಬ್ಬರಾಗಿರುವ ಪ್ರಲ್ಹಾದ್ ಜೋಶಿ ಅನುಪಸ್ಥಿತರಾಗಿದ್ದರು. ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಉಪರಾಷ್ಟ್ರಪತಿ ಜೊತೆ ಸಭೆಯಲ್ಲಿದ್ದ ಕಾರಣ ಭಾಗಿಯಾಗಿಲ್ಲ ಎಂದರು.
ಶೆಟ್ಟರ್ ಪಕ್ಷ ಸೇರ್ಪಡೆ ವೇಳೆ ಇನ್ನೊಂದು ಅರ್ಧ ಗಂಟೆಯಲ್ಲಿ ಸೇರ್ಪಡೆ ಆಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿ ಹೇಳಿದ್ದರು. ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲೇ ಇದ್ದವರು. ಶೆಟ್ಟರ್ ವಾಪಸ್ ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಶೆಟ್ಟರ್ ಅವರು ಬಂದಿದ್ದು ಬಿಜೆಪಿಗೆ ಅನುಕೂಲ ಆಗುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇದನ್ನೂ ಓದಿ: TMC ಸ್ವತಂತ್ರ ಸ್ಪರ್ಧೆ: ಐಎನ್ಡಿಐಎ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದ ಆರ್ ಅಶೋಕ್
ಪಕ್ಷ ಬಿಟ್ಟವರನ್ನು ವಾಪಸ್ ಕರೆತರುವ ವಿಚಾರವಾಗಿ ಮಾತನಾಡಿದ ಜೋಶಿ, ಯಾರು ನಮ್ಮ ಪಕ್ಷದ ಸಿದ್ಧಾಂತ, ಮೋದಿ ನಾಯಕತ್ವ ಒಪ್ಪಿ ಬರುತ್ತಾರೋ ಸ್ವಾಗತ ಕೋರುತ್ತೇವೆ. ಅವರೆಲ್ಲರನ್ನೂ ಹಂತಹಂತವಾಗಿ ವಾಪಸ್ ಕರೆತರುವ ಬಗ್ಗೆ ರಾಷ್ಟ್ರೀಯ ಘಟಕ, ರಾಜ್ಯ ಘಟಕಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸಂಸದ ಬಿವೈ ರಾಘವೇಂದ್ರ ಅವರನ್ನು ಹೊಗಳಿದ್ದು ಬಿಜೆಪಿಗೆ ಆಶೀರ್ವಾದ ಎಂದು ಜೋಶಿ ಹೇಳಿದರು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿನ್ನೆ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸಂಸದ ಬಿವೈ ರಾಘವೇಂದ್ರರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಗಳನ್ನು ಮಾಡಿದ ರಾಘವೇಂದ್ರ ಅವರು ಮತ್ತೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಇದು ಜನರ ಕರ್ತವ್ಯ ಅಂತ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ