Sign In

By signing in or creating an account, you agree with Associated Broadcasting Company's Terms & Conditions and Privacy Policy.

TMC ಸ್ವತಂತ್ರ ಸ್ಪರ್ಧೆ: ಐಎನ್​ಡಿಐಎ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದ ಆರ್ ಅಶೋಕ್

ಐಎನ್​ಡಿಐಎ ಮೈತ್ರಿ ಕೂಟದಲ್ಲಿ ಸೀಟು ಹಂಚಿಕೆಯಿಂದ ತೃಪ್ತರಾಗದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದು, ಕಾಂಗ್ರೆಸ್ ಗೆಲ್ಲಲು ಅಯೋಗ್ಯರು ಅಂತಾ ಮಮತಾ ಬ್ಯಾನರ್ಜಿಗೆ ತಿಳಿದಿದೆ ಆ ರೀತಿ ಹೇಳಿದ್ದಾರೆ. ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದು ಕರ್ನಾಟಕದ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

TMC ಸ್ವತಂತ್ರ ಸ್ಪರ್ಧೆ: ಐಎನ್​ಡಿಐಎ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದ ಆರ್ ಅಶೋಕ್
TMC ಸ್ವತಂತ್ರ ಸ್ಪರ್ಧೆ: ಐಎನ್​ಡಿಐಎ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದ ಆರ್ ಅಶೋಕ್
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Jan 24, 2024 | 2:20 PM

ಬೆಂಗಳೂರು, ಜ.24: ಐಎನ್​ಡಿಐಎ (INDIA) ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು. ಲೋಕಸಭೆ ಚುನಾವಣೆಗೆ (Lok Sabha Elections) ಪಶ್ಚಿಮ ಬಂಗಾಳದಲ್ಲಿ ಟಿಎಂಸಿ (TMC) ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್, ಕಾಂಗ್ರೆಸ್ ಗೆಲ್ಲಲು ಅಯೋಗ್ಯರು ಅಂತಾ ಮಮತಾ ಬ್ಯಾನರ್ಜಿಗೆ ತಿಳಿದಿದೆ ಆ ರೀತಿ ಹೇಳಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆಯೋ ಅಷ್ಟು ಸ್ಥಾನ ನಾನು ಪಶ್ಚಿಮ ಬಂಗಾಳದಲ್ಲಿ ಗೆಲ್ಲುತ್ತೇನೆ ಎಂದು ಮಮತಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿಜ ಸ್ಥಿತಿಯೂ ಹಾಗೆ ಇದೆ. ಸಂಸತ್​ನಲ್ಲಿ ವಿಪಕ್ಷ ನಾಯಕನಾಗುವ ಯೋಗ್ಯತೆ ಕಾಂಗ್ರೆಸ್​ ಪಕ್ಷಕ್ಕಿಲ್ಲ ಎಂದರು.

ಇಂಡಿಯಾ ಮೈತ್ರಿಕೂಟದಿಂದ ಈಗ ಒಬ್ಬೊಬ್ಬರೇ ಹೊರ ಬರುತ್ತಿದ್ದಾರೆ. ಮೈತ್ರಿಕೂಟಕ್ಕೆ ತಾಜ್ ವೆಸ್ಟೆಂಡ್ ಹೋಟೆಲ್​ನ ಬಿರಿಯಾನಿಯೊಂದೇ ಗ್ಯಾರಂಟಿ. ಆದರೆ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಅಂತಾ ಅಶೋಕ್ ವ್ಯಂಗ್ಯವಾಡಿದರು. ಕಾಂಗ್ರೆಸ್ ನಾಲಾಯಕ್ ಎಂದು ಇಂಡಿಯಾ ಮೈತ್ರಿಕೂಟದ ಪಕ್ಷವೇ ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ನಾವು ಹೇಳಬೇಕಾಗಿಲ್ಲ ಎಂದರು.

ಇದನ್ನೂ ಓದಿ: ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರ: ಆರ್ ಅಶೋಕ್ ಕಿಡಿ

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸಾಗುವ ವಿಚಾರವಾಗಿ ಮಾತನಾಡಿದ ಅಶೋಕ್, ಶೆಟ್ಟರ್​ ಮತ್ತೆ ಬಿಜೆಪಿಗೆ ಬರುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಪಾಪ ಶೆಟ್ಟರ್ ಕಾಂಗ್ರೆಸ್​ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಸರ್ಕಾರ ಬಂದು 8 ತಿಂಗಳಾದ್ರೂ ಅಧಿಕಾರವನ್ನ ಕೊಟ್ಟಿಲ್ಲ. ಅಲ್ಲಿಗೆ ಹೋಗಿ ನಮ್ಮ ಕತೆ ಏನಾಯ್ತು ಎಂದು ಯೋಚಿಸಲಿ ಎಂದರು.

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ. ಯಾವುದೇ ಅಧಿಕಾರ ಅಥವಾ ಜವಾಬ್ದಾರಿ ಇಲ್ಲದಿರುವುದರಿಂದಾಗಿ ಅವರು ಕಾಂಗ್ರೆಸ್​ನ ವೇದಿಕೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ನಮ್ಮಲ್ಲಿ ಇದ್ದಾಗ ಇಬ್ಬರೂ ವೇದಿಕೆಯ ಮುಂಭಾಗದಲ್ಲಿ ಕಾಣಿಸುತ್ತಿದ್ದರು. ನಮ್ಮಲ್ಲಿ ಕೋರ್ ಕಮಿಟಿ ಸದಸ್ಯರೂ ಆಗಿದ್ದರು. ಈಗ ಅವರು ಕಾಂಗ್ರೆಸ್​ನಲ್ಲಿರುವ ಪರಿಸ್ಥಿತಿ ನೋಡಿ ನನಗೆ ಬೇಸರ ಅನ್ನಿಸುತ್ತಿದೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯ್ತು ಅಂತಾ ಯೋಚಿಸಲಿ. ಅವರು ಮತ್ತೆ ಬಿಜೆಪಿಗೆ‌ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಚುನಾವಣಾ ಒತ್ತಡದಿಂದ ಅಯೋಧ್ಯೆಗೆ ಸಿದ್ದರಾಮಯ್ಯ ಭೇಟಿ

ಜೈ ಟಿಪ್ಪು ಸುಲ್ತಾನ್ ಎನ್ನುತ್ತಿದ್ದ ಸಿದ್ದರಾಮಯ್ಯ ಬಾಯಲ್ಲಿ ಜೈ ಶ್ರೀರಾಮ್ ಬಂದಿರುವುದೇ ಆಶ್ಚರ್ಯ. ಅದು ವಿವಾದಿತ ಜಾಗ ಎಂದವರು ಸಿದ್ದರಾಮಯ್ಯ. ಈಗ ನಾನು ಅಯೋಧ್ಯೆಗೆ ಹೋಗುತ್ತೇನೆ ಎನ್ನುವುದಕ್ಕೆ ಚುನಾವಣೆಯ ಒತ್ತಡವೇ ಕಾರಣ. ರಾಮ ಕಾಲ್ಪನಿಕ ಎಂದವರು ಇವರು. ರಾಮನಿಗೆ ಹುಟ್ಟಿದ ದಿನದ ಸರ್ಟಿಫಿಕೇಟ್ ಇದ್ಯಾ ಅಂತಾ ಕೇಳಿದ್ದರು. ಈಗ ಲೋಕಸಭೆಯಲ್ಲಿ ಒಂದು ಸೀಟಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜೈ ಶ್ರೀರಾಮ್ ಎನ್ನುತ್ತಿದ್ದಾರೆ ಎಂದರು.

ಟಿಪ್ಪುವನ್ನು ಎಲ್ಲಿ ಬಿಟ್ಟಿರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಅಶೋಕ್, ಸಮುದ್ರದಲ್ಲಿ ಟಿಪ್ಪುವನ್ನು ಬಿಟ್ರಾ? ರಾಮ ಏನು ಅವರಪ್ಪನ ಮನೆ ಆಸ್ತೀನಾ ಅಂತಾ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಹಾಗಿದರೆ ಮುಸ್ಲೀಮರು ನಿಮಗೆ ಆಸ್ತೀನಾ? ನಿಮಗೆ ಮುಸ್ಲೀಮರು ಆಸ್ತಿ ಆದರೆ ನಮಗೆ ರಾಮನೇ ಆಸ್ತಿ ಎಂದು ತಿರುಗೇಟು ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ