ದೆಹಲಿ: ಮುಂಬರುವ ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡುವಂತೆ ಕರ್ನಾಟಕ ಮೂರು ಪ್ರಭಾವಿ ಮಠಗಳು ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿವೆ. ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ದಾವಣಗೆರೆ ಮೂಲದ ಡಾ.ಸಿ.ಆರ್.ನಸೀರ್ ಅಹ್ಮದ್ ಅವರಿಗೆ ಟಿಕೆಟ್ ನೀಡಬೇಕು ಎಂದು ಕರಾವಳಿ, ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಭಾವಿ ಮಠಾಧೀಶರು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಪತ್ರ ಬರೆದಿದ್ದಾರೆ. ಡಾ.ಸಿ.ಆರ್.ನಸೀರ್ ಅಹ್ಮದ್ ಅವರು ಪ್ರಸ್ತುತ ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಹಿರಿಯರಲ್ಲಿ ತಳಮಳ ಮೂಡಿಸಿದ ಯಡಿಯೂರಪ್ಪ ನಿರ್ಧಾರ
ಶಿಕಾರಿಪುರ ಕ್ಷೇತ್ರದಲ್ಲಿ (Shikaripura Constituency) ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ (BY Vijayendra) ಸ್ಪರ್ಧಿಸುತ್ತಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಹೇಳಿಕೆಯು ಹಲವು ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪುವ ಭೀತಿ ಉಂಟು ಮಾಡಿದೆ. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವಯಸ್ಸಿನ ಕಾರಣದಿಂದ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದ್ದ ಹಲವು ನಾಯಕರು ಇದೀಗ ನಿರಾಶೆಗೆ ಜಾರಿದ್ದಾರೆ.
ಯಡಿಯೂರಪ್ಪ ಅವರಿಗೆ ವಯಸ್ಸು ಪರಿಗಣಿಸದೆ 2023ರಲ್ಲಿ ಟಿಕೆಟ್ ನೀಡಿದ್ದರೆ ಅದನ್ನೇ ಪ್ರಸ್ತಾಪಿಸಿ ತಾವೂ ಟಿಕೆಟ್ ಗಿಟ್ಟಿಸಿಕೊಳ್ಳಬಹುದು ಎಂದು ಹಲವರು ಆಸೆ ಇರಿಸಿಕೊಂಡಿದ್ದರು. ಒಂದು ವೇಳೆ ಬಿ.ಎಸ್.ಯಡಿಯೂರಪ್ಪ ಸ್ಪರ್ಧಿಸದಿದ್ದರೆ ತಮಗೂ ಟಿಕೆಟ್ ಸಿಗುವುದು ಅನುಮಾನ ಎಂದು ಹಲವರು ಸ್ವತಃ ವಿಶ್ಲೇಷಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ನಿರ್ಧಾರದಿಂದ 2023ಕ್ಕೆ 75 ವರ್ಷ ದಾಟುವ ಹಿರಿಯ ನಾಯಕರಿಗೆ ಟಿಕೆಟ್ ಸಿಗುವ ಸಾಧ್ಯತೆಯ ಬಗ್ಗೆ ಆತಂಕ ಉಂಟಾಗಿದೆ.
Published On - 11:46 am, Tue, 26 July 22