ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Paksha) ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದೆ. ಅದರಲ್ಲೂ ರೆಡ್ಡಿ ಅವರು ಸ್ಪರ್ಧಿಸಲಿರುವ ಗಂಗಾವತಿ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಗಂಗಾವತಿ ಹಾಲಿ ಬಿಜೆಪಿ ಶಾಸಕ ಪರಣ್ಣ ಮನವಳ್ಳಿ ಅವರ ಆಪ್ತರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೆಳೆದಿದ್ದ ರೆಡ್ಡಿ, ಇದೀಗ ಇಕ್ಬಾಲ್ ಅನ್ಸಾರಿ ಆಪ್ತರನ್ನ ಆಪರೇಷನ್ ಮಾಡಿದ್ದಾರೆ.
ಹೌದು..ಇಂದು(ಜನವರಿ 30) ಕೊಪ್ಪಳ ಜಿಲ್ಲೆ ಗಂಗಾವತಿ ಕ್ಷೇತ್ರದ ಇರಕಲ್ಗಡ ಗ್ರಾಮದಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕಾಂಗ್ರೆಸ್ ತೊರದು ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು. ಇಕ್ಬಾಲ್ ಅನ್ಸಾರಿ ಬೆಂಬಲಿಗರಾದ ಸಂಗಮೇಶ ಬಾದವಾಡಗಿ, ಮಲ್ಲೇಶಪ್ಪ ಚಿಲಕಮುಕಿ ಸೇರಿದಂತೆ ಗ್ರಾಮ ಪಂಚಾಯಿತಿಯ ಮೂವರು ಸದಸ್ಯರು ಸಹ KRPP ಸೇರಿದರು. ಹೀಗೆ ಪ್ರಭಾವಿ ಸಮುದಾಯದ ಮುಖಂಡರಿಗೆ ಜನಾರ್ದನ ರೆಡ್ಡಿ ಗಾಳ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕೆಆರ್ ಪಿಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದು, ರೆಡ್ಡಿ ರಾಜಕಿಯದಾಟಕ್ಕೆ ಗಂಗಾವತಿಯಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ಛಿದ್ರವಾಗುತ್ತಿದೆ.
ಗಂಗಾವತಿ ಕ್ಷೇತ್ರದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಭೇಟೆ ಭರ್ಜರಿಯಾಗಿಯೇ ಮುಂದುವರೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಹಾಗೂ ಮುಖಂಡರ ಪಕ್ಷಾಂತರ ಜೋರಾಗಿದೆ ಇದರಿಂದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿಗೆ ಟೆನ್ಶನ್ ಮೇಲೆ ಟೆನ್ಶನ್ ಶುರುವಾಗಿದೆ. ತಮ್ಮ ಕಾರ್ಯಕರ್ತರನ್ನ ಹಿಡಿದಿಟ್ಟುಕೊಳ್ಳುವುದೇ ತಲೆ ಬಿಸಿಯಾಗಿದೆ.
ಬಿಜೆಪಿ ಪಕ್ಷದಿಂದ ದೂರವಾಗಿ ಹೊಸದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿಕೊಂಡು 2023 ರ ಚುನಾವಣೆಯನ್ನ ಎದುರಿಸಲು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಯಾರಾಗಿದ್ದಾರೆ. ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇದರಿಂದ ಗಂಗಾವತಿ ಕ್ಷೇತ್ರದ ಮೇಲೆ ಕಣ್ಣಿಟ್ಟು ಕುಳಿತಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂದೆ ಗುರುತಿಸಿಕೊಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಗಾಲಿ ರೆಡ್ಡಿ ಹೊಡೆತದ ಮೇಲೆ ಹೊಡೆತ ನೀಡಲು ಮುಂದಾಗಿದ್ದಾರೆ. ರೆಡ್ಡಿಯವರ ಓಟಕ್ಕೆ ಬ್ರೇಕ್ ಹಾಕೋದು ಹೇಗೆ ಅನ್ನೊ ಟೆನ್ಶನ್ ನಲ್ಲೇ ಇಕ್ಬಾಲ್ ಅನ್ಸಾರಿ ಕಾಲ ಕಳೆಯುವಂತಾಗಿದೆ. ದಿನದಿಂದ ದಿನಕ್ಕೆ ಜನಾರ್ದನ ರೆಡ್ಡಿಯವರ ಕೆಆರ್ ಪಿಪಿ ಪಕ್ಷಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನ ಸೆಳೆಯಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಹಿನ್ನಡೆ ಉಂಟಾಗುತ್ತಿದೆ. ಇದರಿಂದ ಸದ್ಯ ವಾಯ್ಸ್ ರೆಕಾರ್ಡ್ ಮಾಡಿ ವೈರಲ್ ಮಾಡುವ ಮೂಲಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಪಕ್ಷಾಂತರ ಮಾಡುವ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗುವವರ ಜೊತೆ ಸಭೆ ಸೇರಬೇಡಿ. ಅವರ ಪೋನ್ ರಿಸಿವ್ ಮಾಡಬೇಡಿ ಎಂದು ವಾಯ್ಸ್ ರೆಕಾರ್ಡ್ ಮೂಲಕ ಮನವಿ ಮಾಡಿದ್ದಾರೆ..
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಗಂಗಾವತಿ ಭಾಗದ ಕುರುಬ ಸಮುದಾಯದ ಪ್ರಭಾವಿ ಮುಖಂಡರಾದ ಹನಮಂತ ಅರಸಿನಕೇರಿ ಕಾಂಗ್ರೆಸ್ ತೊರೆದು ರೆಡ್ಡಿ ಪಕ್ಷದ ಕಡೆಗೆ ಒಲವು ತೋರಿದ್ದರು. ಈ ಭಾಗದಲ್ಲಿ ಕುರುಬ ಸಮುದಾಯದ ಮತಗಳೇ ನಿರ್ಣಾಯ. ಇದರ ಬೆನ್ನಲ್ಲೆ ಸದ್ಯ ಮತ್ತೊಬ್ಬ ಕುರುಬ ಸಮುದಾಯದ ಮುಖಂಡ ಮಲ್ಲೆಶಪ್ಪ ಚಿಲಕಮುಕಿ, ಹಾಗೂ ಕಾಂಗ್ರೆಸ್ ಮಖಂಡ, ಪಂಚಮಸಾಲಿ ಸಮಯದಾಯದ ಪ್ರಬಲ ಮುಖಂಡರಾದ ಸಂಗಮೇಶ ಬಾದಡಗಿ ಕಾಂಗ್ರೆಸ್ ತೊರೆದು ಕೆಆರ್ ಪಿಪಿ ಪಕ್ಷ ಸೇರ್ಪಡೆ ಆಗಿದ್ದಾರೆ.
ಇದರಿಂದ ಸಹಜವಾಗಿ ಮಾಜಿ ಸಚಿವರಿಗೆ ಸೋಲಿನ ಬೀತಿ ಎದುರಾದಂತಿದೆ. ಹೀಗಾಗಿ ವಾಯ್ಸ್ ರೆಕಾರ್ಡ ಮೂಲಕ ಕಾರ್ಯಕರ್ತರನ್ನ ಹಿಡಿದಿಟ್ಟುಕೊಳ್ಳಲು ಸಚೀವರು ಪರದಾಡುತ್ತಿದ್ದಾರೆ, ಯಾರು ಅವರ ಹಿಂದೆ ಹೋಗದಂತೆ ಪಕ್ಷ ತೊರೆಯದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಾಳೆಯಿಂದ ರೆಡ್ಡಿ ಕಲ್ಯಾಣ ರಥಯಾತ್ರೆ ಶುರು ಮಾಡಲಿದ್ದಾರೆ. ಆ ಮೂಲಕ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಸರನ್ನೇ ಏನ್ ಕ್ಯಾಶ್ ಮಾಡಿಕೊಳ್ಳಲು ಹೊಸ ಫ್ಲ್ಯಾನ್ ಮಾಡಿದ್ದಾರೆ.
ರಾಜ್ಯ ವಿಧಾನ ಸಭೆ ಚುನಾವಣೆಗೆ ಕೇವಲ ಎರಡು ತಿಂಗಳು ಬಾಕಿ ಇದೆ. ಅಭ್ಯರ್ಥಿಗಳು, ಜನರ ಮನೆ ಬಾಗಿಲಿಗೆ ತೆರಳಿ ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನು ಜನಾರ್ದನ ರೆಡ್ಡಿ ಒಂದು ಹೆಜ್ಜೆ ಮುಂದೆ ಎನ್ನುವಂತೆ ಪ್ರತಿ ದಿನ ಹಳ್ಳಿ ಹಳ್ಳಿಗೆ, ಸಮುದಾಯದ ಮುಖಂಡರುಗಳ ಮನೆ, ಸೇರಿ ಮಸೀದಿ- ಮಂದಿರ ಚರ್ಚಗಳಿಗೆ ರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಟ ನಡೆಸಿದ್ದಾರೆ. ಇಷ್ಟೆಲ್ಲವನ್ನ ನೋಡಿ ಇಕ್ಬಾಲ್ ಅನ್ಸಾರಿಯವರು ವಾಯ್ಸ್ ರೆಕಾರ್ಡ್ ಕಳಿಸುವ ಮೂಲಕ ಕಾರ್ಯಕರ್ತರನ್ನ ಹಿಡಿದಿಟ್ಟುಕೊಳ್ಳುವ ಕಸರತ್ತು ನಡೆಸಿದ್ದಾರೆ.
Published On - 7:04 pm, Mon, 30 January 23