Karnataka Politics: ಬಿಜೆಪಿಗೆ ಮತ್ತೆ ಅನಿವಾರ್ಯವಾದರೇ ಬಿಎಸ್ ಯಡಿಯೂರಪ್ಪ, ಇತ್ತೀಚಿನ ಬೆಳವಣಿಗೆಗಳು ಹೇಳುವುದೇನು?

ರಾಜ್ಯಾಧ್ಯಕ್ಷರ ಸ್ಥಾನದ ಅನಿಶ್ಚಿತತೆ, ಪ್ರತಿಪಕ್ಷ ನಾಯಕನ ಆಯ್ಕೆ ಆಗದೇ ಇರುವ ಸಂದರ್ಭದಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹತ್ವದ ಸಲಹೆ ಸೂಚನೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹೌದಾದರೂ ರಾಜ್ಯ ವಿದ್ಯಮಾನಗಳ ವಿಚಾರಕ್ಕೆ ಬಂದಾಗ ರಾಜ್ಯ ಘಟಕದ ಅಧ್ಯಕ್ಷರೋ, ಶಾಸಕಾಂಗ ಪಕ್ಷದ ನಾಯಕರೋ ಮಾಡಬೇಕಿದ್ದ ಕೆಲಸವನ್ನು ಅವರು ಮಾಡಿರುವುದು ಸ್ಪಷ್ಟ.

Karnataka Politics: ಬಿಜೆಪಿಗೆ ಮತ್ತೆ ಅನಿವಾರ್ಯವಾದರೇ ಬಿಎಸ್ ಯಡಿಯೂರಪ್ಪ, ಇತ್ತೀಚಿನ ಬೆಳವಣಿಗೆಗಳು ಹೇಳುವುದೇನು?
ಬಿಎಸ್ ಯಡಿಯೂರಪ್ಪ
Follow us
Ganapathi Sharma
|

Updated on:Aug 19, 2023 | 12:10 PM

ಬೆಂಗಳೂರು, ಆಗಸ್ಟ್ 19: ಕರ್ನಾಟಕದಲ್ಲಿ ಪ್ರಭಾವಿ ನಾಯಕ ಬಿಎಸ್​​​​ ಯಡಿಯೂರಪ್ಪ (BS Yediyurappa) ಅವರು ಬಿಜೆಪಿಗೆ (BJP) ಮತ್ತೆ ಅನಿವಾರ್ಯವಾದರೇ? ಕಳೆದ ಕೆಲವು ದಿನಗಳ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಹೀಗೊಂದು ಪ್ರಶ್ನೆ ಮೂಡಿದರೆ ಆಶ್ಚರ್ಯವಿಲ್ಲ. ಹಾಗೆ ನೋಡಿದರೆ, ವಿಧಾನಸಭೆ ಚುನಾವಣೆ ಕಾವೇರುವ ಹೊತ್ತಿಗೆಯೇ ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪ ಅವರನ್ನೇ ಮುಂದೆಬಿಟ್ಟು ಕೊನೇ ಕ್ಷಣದ ಕಸರತ್ತು ನಡೆಸಿತ್ತು. ಆದರೆ, ಅಷ್ಟರಲ್ಲಿ ಕಾಲ ಮಿಂಚಿತ್ತು. ಪ್ರತಿಪಕ್ಷ ನಾಯಕನ ಆಯ್ಕೆಯೂ ಆಗದ, ರಾಜ್ಯ ಘಟಕದ ಅಧ್ಯಕ್ಷರ ಸ್ಥಾನವೂ ಅನಿಶ್ಚಿತತೆಯಲ್ಲಿರುವ ಈ ಹೊತ್ತಿನಲ್ಲಿ ಯಡಿಯೂರಪ್ಪ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಪ್ರಮುಖ ವಲಸೆ ನಾಯಕರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳುವ ಹೊಣೆಯನ್ನು ಅವರೇ ಹೊತ್ತುಕೊಂಡಂತೆ ಕಾಣುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಈ ಹಿಂದೆ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ಪ್ರಭಾವಿ ನಾಯಕರನ್ನು ಸೆಳೆಯುವ ಸುಳಿವು ನೀಡಿದೆ. ಉಪ ಮುಖ್ಯಮಂತ್ರಿ, ಕಾಂಗ್ರೆಸ್​​ನ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧರಾದ ಡಿಕೆ ಶಿವಕುಮಾರ್ ಅದಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಿಟ್ಟಿದ್ದಾರೆ. ಎಸ್​​​ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಭೈರತಿ ಬಸವರಾಜ್, ಮನಿರತ್ನ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿದೆ. ಈ ಮಧ್ಯೆ, ಕೆಲವರ ಪುನರ್ ಸೇರ್ಪಡೆ ಬಗ್ಗೆ ಕಾಂಗ್ರೆಸ್​​​ನಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಈ ಬೆಳವಣಿಗೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ಕಾಂಗ್ರೆಸ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಬಿಜೆಪಿ ‘ಆಪರೇಷನ್​ ಹಸ್ತ’ದ ಬಿಸಿ ತಟ್ಟಿದೆ. ಇಂಥದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಮುತ್ಸದ್ದಿತನ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ ರಾತ್ರಿ ಪಕ್ಷದ ನಾಯಕರ ಸಭೆ ನಡೆಸಿದ ಯಡಿಯೂರಪ್ಪ, ಅತೃತಪ್ತ ನಾಯಕರ ಮುನಿಸು ಶಮನ ಮಾಡುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ ವಹಿಸಿದ್ದಾರೆ. ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಜತೆ ಮಾತನಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ನಾವು ಹೆಚ್ಚು ಸಂಘಟಿತರಾಗಿರಬೇಕಿದೆ. ಸ್ಥಳೀಯ ಮುಖಂಡರ ಜೊತೆ ಮಾತುಕತೆ ಮಾಡಿ ಸಮನ್ವಯ ಸಾಧಿಸಿ. ಎಲ್ಲರೂ ಒಟ್ಟಾಗಿ ಹೋಗುವಂತೆ ನೋಡಿಕೊಳ್ಳಿ ಎಂದು ಸಭೆಯಲ್ಲಿ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರಿಗೆ ಸಂದೇಶ ನೀಡಿದ್ದಾರೆ.

ದಿಢೀರ್ ಸಭೆ ನಡೆಸಿ ಯಡಿಯೂರಪ್ಪ ಕೊಟ್ಟ ಸಂದೇಶವೇನು?

ಯಡಿಯೂರಪ್ಪ ಅವರು ದಿಡೀರ್ ಆಗಿ ಪಕ್ಷದ ನಾಯಕರ ಸಭೆ ನಡೆಸಿ ಡ್ಯಾಮೇಜ್ ಕಂಟ್ರೋಲ್​ಗೆ ಇಳಿದಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬಗ್ಗೆ ಈಗಾಗಲೇ ಪಕ್ಷದ ಆಂತರಿಕ ವಲಯದಲ್ಲಿ ಹಲವೆಡೆ ಆಕ್ಷೇಪಗಳಿರುವುದು, ಬದಲಾವಣೆಯ ಕೂಗೂ ಕೇಳಿಬಂದಿದ್ದು ಗುಟ್ಟಾಗಿ ಉಳಿದಿಲ್ಲ. ಪ್ರತಿಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇಂಥ ಸಂದರ್ಭದಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹತ್ವದ ಸಲಹೆ ಸೂಚನೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹೌದಾದರೂ ರಾಜ್ಯ ವಿದ್ಯಮಾನಗಳ ವಿಚಾರಕ್ಕೆ ಬಂದಾಗ ರಾಜ್ಯ ಘಟಕದ ಅಧ್ಯಕ್ಷರೋ, ಶಾಸಕಾಂಗ ಪಕ್ಷದ ನಾಯಕರೋ ಮಾಡಬೇಕಿದ್ದ ಕೆಲಸವನ್ನು ಅವರು ಮಾಡಿರುವುದು ಸ್ಪಷ್ಟ. ಇದರೊಂದಿಗೆ, ರಾಜ್ಯ ಬಿಜೆಪಿಯಲ್ಲಿ ಅವರಿನ್ನೂ ನಿರ್ಣಾಯಕರೇ ಎಂಬುದನ್ನು ಬಿಜೆಪಿ ಪ್ರಮುಖರು ಮತ್ತೊಮ್ಮೆ ಒಪ್ಪಿಕೊಂಡಂತಾಗಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಅಷ್ಟೆ. ಪುತ್ರ ಬಿವೈ ವಿಜಯೇಂದ್ರ ಅವರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಬೇಕಾಗುತ್ತದೆ ಎಂಬ ವದಂತಿ ಹರಡಿದಾಗ ಅದನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದರು ಯಡಿಯೂರಪ್ಪ. ಹೈಕಮಾಂಡ್ ಜತೆ ಪಟ್ಟು ಹಿಡಿದು ವಿಜಯೇಂದ್ರಗೆ ತಮ್ಮ ಕ್ಷೇತ್ರವೇ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಆಪರೇಷನ್ ಹಸ್ತ; ಎಸ್‌ಟಿ ಸೋಮಶೇಖರ್, ಹೆಬ್ಬಾರ್ ಸಮಸ್ಯೆ ಬಗೆಹರಿಸುವ ಹೊಣೆ ಬೊಮ್ಮಾಯಿಗೆ ವಹಿಸಿದ ಯಡಿಯೂರಪ್ಪ

ಆಪರೇಷನ್ ಕಮಲದ ಮೂಲಕ ರಚನೆಯಾದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಯಬೇಕಾಗಿ ಬಂದರೂ, ಆ ನಂತರದ ಪ್ರತಿ ಹಂತದಲ್ಲಿಯೂ ರಾಜ್ಯ ಬಿಜೆಪಿಗೆ ತಾವು ಅನಿವಾರ್ಯ ಎಂಬ ಸಂದೇಶವನ್ನು ಹೈಕಮಾಂಡ್​ಗೆ ಯಡಿಯೂರಪ್ಪ ಕೊಡುತ್ತಾ ಬಂದಿದ್ದು ಸುಳ್ಳಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಂತೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನೇ ಹೆಚ್ಚು ನೆಚ್ಚಿಕೊಂಡಿದ್ದುದು ಹಲವಾರು ಕಾರ್ಯಕ್ರಮಗಳಿಂದ ಬಹಿರಂಗವಾಗಿತ್ತು. ಇದೀಗ, ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಕರ್ನಾಟಕದಲ್ಲಿ ಯಡಿಯೂರಪ್ಪ ಅವರೇ ಹೈಕಮಾಂಡ್​ಗೆ ಅನಿವಾರ್ಯವಾಗಿದ್ದಾರೆಯೇ ಎಂಬ ಪ್ರಶ್ನೆ ಇತ್ತೀಚಿನ ಬೆಳವಣಿಗೆಗಳಿಂದ ಮೂಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:51 am, Sat, 19 August 23