ಬಿಜೆಪಿಯ ಮತ್ತೆರಡು ವಿಕೆಟ್‌ ಪತನ, ಕೇಸರಿ ಪಡೆಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜಗದೀಶ್ ಶೆಟ್ಟರ್

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಹಾಗೂ ಜೆಡಿಎಸ್​ನ ನಾಯಕರು ಒಬ್ಬರ ಹಿಂದೆ ಒಬ್ಬರು ಕಾಂಗ್ರೆಸ್​ನತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಬಿಜೆಪಿಯ ಒಬ್ಬೊಬ್ಬರನ್ನೇ ಕರೆತಂದು ಕಾಂಗ್ರೆಸ್​ಗೆ ಸೇರಿಸುತ್ತಿದ್ದಾರೆ. ಇದರೊಂದಿಗೆ ಅವರು ಬಿಜೆಪಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.

ಬಿಜೆಪಿಯ ಮತ್ತೆರಡು ವಿಕೆಟ್‌ ಪತನ, ಕೇಸರಿ ಪಡೆಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜಗದೀಶ್ ಶೆಟ್ಟರ್
Follow us
|

Updated on: Oct 12, 2023 | 8:31 AM

ಬೆಂಗಳೂರು, (ಅಕ್ಟೋಬರ್ 12): ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024) ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ (bjp jds alliance ) ಮಾಡಿಕೊಂಡಿದ್ದು, ಕಾಂಗ್ರೆಸ್​​ ಸೋಲಿಸಲು ಪಣ ತೊಟ್ಟಿವೆ. ಆದ್ರೆ, ಎರಡೂ ಪಕ್ಷಗಳಲ್ಲಿ ಭಿನ್ನಮತ ಶುರುವಾಗಿದ್ದು, ಒಬ್ಬೊಬ್ಬ ನಾಯಕರು ಕಾಂಗ್ರೆಸ್​ನತ್ತ (Congress) ಮುಖ ಮಾಡುತ್ತಿದ್ದಾರೆ. ಹೌದು…ಇದೀಗ ಬಿಜೆಪಿಯ ಎರಡು ಹಾಗೂ ಜೆಡಿಎಸ್​ನ ಒಂದು ವಿಕೆಟ್ ಪತನವಾಗಿದೆ. ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಶಿರಹಟ್ಟಿಯ ರಾಮಪ್ಪ ಲಮಾಣಿ ಕೈ ಹಿಡಿಯಲು ಸಜ್ಜಾಗಿದ್ದಾರೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಸಹ ಕಾಂಗ್ರೆಸ್​ ಸೇರಲಿದ್ದಾರೆ. ಇದರೊಂದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಎಂ.ಪಿ. ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ನಿನ್ನೆ (ಅ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್‌ (Operation Hasta) ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದು, ಇಂದು ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಪೂರ್ಣಿಮಾ ಶ್ರೀನಿವಾಸ್‌ ಮತ್ತು ಎಂಪಿ ಕುಮಾರಸ್ವಾಮಿ ಅಕ್ಟೋಬರ್ 20ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಬಿಜೆಪಿ ಮಾಜಿ ಶಾಸಕಿ

ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್​ ಹಾಲಿ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಬದಲಿಗೆ ದೀಪಕ್‌ ದೊಡ್ಡಯ್ಯಗೆ ಟಿಕೆಟ್‌ ನೀಡಲಾಗಿತ್ತು. ಅದೇ ರೀತಿ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ಹಾಲಿ ಶಾಸಕರಾಗಿದ್ದ ರಾಮಪ್ಪ ಲಮಾಣಿ ಬದಲಿಗೆ ಚಂದ್ರು ಲಮಾಣಿಗೆ ಟಿಕೆಟ್‌ ನೀಡಲಾಗಿತ್ತು. ಇದರಿಂದ ಈ ಇಬ್ಬರು ಅಸಮಾಧಾನಗೊಂಡಿದ್ದರು.

ಅ.20 ಕೈ ಹಿಡಿಯಲಿರುವ ಪೂರ್ಣಿಮಾ

ಇನ್ನು ಕಳೆದ ತಿಂಗಳಷ್ಟೇ ಕೆ.ಆರ್. ಪುರದಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದರು. ಈ ವೇಳೆ ಪಕ್ಷ ಸೇರುವುದಾಗಿ ಡಿಕೆಶಿಗೆ ಪೂರ್ಣಿಮಾ ಭರವಸೆ ಕೊಟ್ಟಿದ್ದರು. ಅದರಂತೆ ಅ.20 ರಂದು ಪತಿ ಶ್ರೀನಿವಾಸ್ ಜೊತೆ ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್‌ ಸೇರಲಿದ್ದಾರೆ.

ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ಗೆ ಪುರ್ಣಿಮಾ ಅವರ ಪತಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿದೆ. ಇನ್ನು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡದಿದ್ದರಿಂದ ಅಸಮಧಾನಗೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಪೂರ್ಣಿಮಾ ಅವರು ಬಿಜೆಪಿಗೆ ಗುಡ್​ಬೈ ಹೇಳಿ ಕಾಂಗ್ರೆಸ್​ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಶೆಟ್ಟರ್

ಹೌದು…ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ನೀಡದೇ ಅಗೌರವ ರೀತಿಯಿಂದ ನಡೆಸಿಕೊಂಡಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್​, ಆಪರೇಷನ್ ಹಸ್ತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿರಿಯ ನಾಯಕ ಎನ್ನದೇ ಅಗೌರವದಿಂದ ಕಂಡಿದ್ದಾರೆ ಎಂದು ಬಿಜೆಪಿ ಹೈಕಮಾಂಡ್​ ವಿರುದ್ಧ ತೊಡೆ ತಟ್ಟಿರುವ ಶೆಟ್ಟರ್​, ಒಬ್ಬೊಬ್ಬರನ್ನೇ ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತಿದ್ದಾರೆ. ಈಗಾಗಲೇ ರಾಮಪ್ಪ ಲಮಾಣಿ, ಎಂಪಿ ಕುಮಾರಸ್ವಾಮಿ ಅವರನ್ನು ತಮ್ಮ ಮಧ್ಯಸ್ಥಿಕೆ ಮೇಲೆ ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತಿದ್ದಾರೆ. ಈಗಾಗಲೇ ಈ ಇಬ್ಬರು ನಾಯಕರನ್ನು ಸಿದ್ದರಾಮಯ್ಯ ಬಳಿ ಕಡೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ. ಹಾಗೇ ಮಾಜಿ ಸಿಎಂ ಯಡಿಯೂರಪ್ಪನವರ ಸಂಬಂಧಿ ಚಿಕ್ಕನಗೌಡರ್​ ಅವರ ಜೊತೆ ಸಹ ಶೆಟ್ಟರ್ ಮಾತುಕತೆ ಮಾಡಿದ್ದಾರೆ. ಹೀಗೆ ಇನ್ನಷ್ಟು ಬಿಜೆಪಿ ನಾಯಕರಿಗೆ ಅವರು ಗಾಳ ಹಾಕಿದ್ದು, ಮುಂದಿನ ದಿನಗಳಲ್ಲಿ ಅವರನ್ನೂ ಸಹ ಕಾಂಗ್ರೆಸ್​ಗೆ ಸೇರಿಸಲಿದ್ದಾರೆ. ಇದರೊಂದಿಗೆ ಬಿಜೆಪಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಶುರುವಾಗಿದೆ. ಅದರಲ್ಲೂ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್​ನತ್ತ ಮುಖ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ