ಧಾರವಾಡ, ಸೆ.10: ಕಳೆದ ಎರಡು ವಾರಗಳಿಂದ ಧಾರವಾಡ (Dharwad) ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಗಾಢವಾಗಿದೆ. ಅದರಂತೆ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ, ಒಬ್ಬರಿಂದೊಬ್ಬರು ತಮ್ಮ ಮನಸ್ತಾಪಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ (Pradeep Shettar) ಸಹ ಹೊರತಾಗಿಲ್ಲ. ತಮ್ಮ ಸಹೋದರ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಪಕ್ಷ ಬಿಟ್ಟು, ಕಾಂಗ್ರೆಸ್ ಹೋಗಿ ಬಿಜೆಪಿ ವಿರುದ್ಧವೇ ಸಮರಸಾರಿದ್ದಾಗಾಲೂ, ಒಂದು ಮಾತನಾಡದ ಪ್ರದೀಪ್ ಶೆಟ್ಟರ್, ಈಗ ಏಕಾಏಕಿ ಗುಡುಗಿದ್ದಾರೆ. ಒಂದು ಕಡೆ ಮುನೇನಕೊಪ್ಪ ಧಾರವಾಡ ಜಿಲ್ಲೆಯ ಬಿಜೆಪಿಗೆ ನಾಯಕತ್ವದ ಕೊರತೆಯಿದೆ ಅಂದರೆ, ಪಕ್ಷದಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಆರೋಪ ಪ್ರದೀಪ್ ಶೆಟ್ಟರ್ ಅವರದು. ಈ ಬೆನ್ನಲ್ಲೇ ಪಕ್ಷದಲ್ಲಿ ಕೆಲವರ ಅತಿಯಾದ ಹಿಡಿತ ಸ್ಥಳೀಯ ಮಟ್ಟದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋದ ಮೇಲೆ ಬಿಜೆಪಿ ಪಕ್ಷದಲ್ಲಿ ಬಣಗಳು ಸೃಷ್ಟಿಯಾಗಿವೆ. ಸಂಘ-ಪರಿವಾರ, ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಬೆಂಬಲಿಗರ ಬಣಗಳು ಸೃಷ್ಟಿಯಾಗಿವೆ. ಶೆಟ್ಟರ್ ಪಕ್ಷಬಿಟ್ಟಾಗಲೇ ಅವರ ಹಿಂದೆ ಪಾಲಿಕೆ ಸದಸ್ಯ ಜೊತೆಗೆ ಪ್ರಮುಖ ಸ್ಥಳೀಯ ಮುಖಂಡರು ಪಕ್ಷ ಬಿಡಲು ಮುಂದಾಗಿದ್ದರು. ಆದರೆ, ಪ್ರಹ್ಲಾದ್ ಜೋಶಿ ಪಕ್ಷಕ್ಕೆ ಆಗುವ ಡ್ಯಾಮೆಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಬಲವಂತವಾಗಿ ಇದನ್ನು ತಡೆದಿದ್ದರು. ಇನ್ನೂ ಕೆಲವರನ್ನು ಪಕ್ಷದಿಂದ ಉಚ್ಚಾಟನೆ ಸಹ ಮಾಡಲಾಗಿತ್ತು. ಅಲ್ಲಿಂದ ಶುರವಾದ ಈ ಅಸಮಾಧಾನ, ಇಂದಿನವರೆಗೂ ಮುಂದುವರಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲ್ಯಾನ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ?
ಶೆಟ್ಟರ್ ಬೆಂಬಲಿಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ, ಪಕ್ಷ ಪ್ರಮುಖ ಸಭೆ ಸಮಾರಂಭಕ್ಕೆ ಕೈಬಿಡುವ ಪದ್ದತಿ ಧಾರವಾಡ ಬಿಜೆಪಿಯಲ್ಲಿ ಆರಂಭವಾಗಿತ್ತು. ಇದು ಪಕ್ಷ ನಿಷ್ಠೆ ಕಾರ್ಯಕರ್ತರನ್ನು ಸೇರಿದಂತೆ ಪ್ರಮುಖ ಹುದ್ದೆಯಲ್ಲಿರುವವರಿಗೂ ಇರಿಸು-ಮುರಿಸು ತಂದಿದೆ. ಹೀಗಾಗಿ ಮುನಿಸಿಕೊಂಡ ಶೆಟ್ಟರ್ ಆಪ್ತರು ಸಿಕ್ಕಿದ್ದೆ ಅವಕಾಶ ಎಂದು ರಾಜೀನಾಮೆಗೆ ಮುಂದಾಗುವ ಲಕ್ಷಣಗಳು ಕಾಣುತ್ತಿವೆ. ಇದು ಕೇವಲ ಜಿಲ್ಲಾ ಮಟ್ಟದಲ್ಲಿ ಅಲ್ಲ. ಶೆಟ್ಟರ್ ಉತ್ತರ ಕರ್ನಾಟಕ ಪ್ರವಾಸ ಮಾಡಿ ಬಹತೇಕ ಲಿಂಗಾಯತ ನಾಯಕರರಿಗೆ ಗಾಳ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಶೆಟ್ಟರ್ ಬಹಳ ಜನ ನನ್ನ ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದಾರೆ.
ಇದಕ್ಕೆ ಮುನ್ನುಡಿ ಎಂಬಂತೆ ಧಾರವಾಡ ಮಾಹಾನಗರ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ನೀಡಿದ್ದಾರೆ. ಸಂಚಾಲಕ ಸ್ಥಾನ ಸೇರಿದಂತೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ ಹನಮಂತಪ್ಪ ದೊಡ್ಡಮನಿ, ಪಕ್ಷದ ಕೆಲವರು ನಡೆದುಕೊಂಡ ರೀತಿಯಿಂದ ಬೇಸತ್ತು ರಾಜೀನಾಮೆ ಎಂದು ಕಾರಣ ನೀಡಿ, ಹುಬ್ಬಳ್ಳಿ-ಧಾರವಾಡ ಮಾಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಕಪಟಕರ್ಗೆ ವಾಟ್ಸಪ್ ಮೂಲಕ ರಾಜಿನಾಮೆ ಸಂದೇಶ ಕಳುಹಿಸಿದ್ದಾರೆ. ಇವರು ಕೂಡ ಶೆಟ್ಟರ್ ಆಪ್ತರಾಗಿದ್ದವರು.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ; ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು…
ಈಗಾಗಲೇ ರಾಜ್ಯ ಮಟ್ಟದಲ್ಲಿ ಮುನೇನಕೊಪ್ಪ ಮತ್ತು ಪ್ರದೀಪ್ ಶೆಟ್ಟರ್ ಪಕ್ಷದ ವಿರುದ್ಧ ಗುಡುಗಿದ್ದು ನೋಡಿದ್ರೆ, ಅವರ ಕೂಡ ಜಗದೀಶ್ ಶೆಟ್ಟರ್ ಹಾದಿ ಹಿಡಿಯುವ ಲಕ್ಷಣಗಳು ಹೆಚ್ಚಾಗಿವೆ. ಒಂದು ವೇಳೆ ಈ ರಾಜೀನಾಮೆ ಮುಂದುವರೆದ್ರೆ ಲೋಕಸಭಾ ಚುನಾವಣೆಗೆ, ಬಿಜೆಪಿಗೆ ಸಾಕಷ್ಟು ಪೆಟ್ಟು ಬಿಳಲಿದೆ. ಇನ್ನು ನಿನ್ನೆ ಕೂಡ ಹುಧಾ ಬಿಜೆಪಿಯಲ್ಲಿ ಮತ್ತೊಂದು ಯುಡವಟ್ಟಾಗಿತ್ತು. ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಶಾಸಕರ ಜನ ಸಂಪರ್ಕ ಕಾರ್ಯಾಲಾಯ ಉದ್ಘಾಟನೆಯಲ್ಲಿ ಮತ್ತೆ ಪ್ರದೀಪ್ ಶೆಟ್ಟರ್ ಕಡೆಗಣನೆ ಮಾಡಲಾಗಿತ್ತು. ರಾತ್ರಿ ಪ್ರದೀಪ್ ಶೆಟ್ಟರ್ ಫೋಟೋ ಮಿಸ್ ಮಾಡಿದ್ದ ಶಾಸಕರು ಬೆಳಗ್ಗೆ ಕಾರ್ಯಾಲಯ ಉದ್ಘಾಟನೆ ಪೋಸ್ಟರ್ ನಲ್ಲಿ ಶಾಸಕರ ಫೊಟೋ ಪ್ರಿಂಟ್ ಮಾಡಿಸಿದ್ದಾರೆ. ಇದು ಸಹಜವಾಗಿ ಪ್ರದೀಪ್ ಶೆಟ್ಟರ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಯಾವಾಗ ಪಕ್ಷದ ನಾಯಕರು ಕಾರ್ಯಕರ್ತರ ಅಸಮಾಧಾನ ಹೆಚ್ಚಾಯ್ತೋ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅಲರ್ಟ್ ಆಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಬಿಜೆಪಿ ಮುಖಂಡರ ಜೊತೆ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಈ ಹಿಂದೆ ಶೆಟ್ಟರ್ ಜೊತೆ ಇದ್ದ ಪಾಲಿಕೆ ಸದಸ್ಯರು ಪಕ್ಷ ಬಿಟ್ಟು ಹೋಗಬಾರದು ಎನ್ನುವ ಕಾರಣಕ್ಕೆ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಆದ್ರೆ, ಯಾರೂ ಪಕ್ಷ ಬಿಟ್ಟು ಹೋಗಲ್ಲ, ನಮ್ಮ ನಾಯಕರು ಎಲ್ಲ ಸರಿ ಮಾಡ್ತಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ: ವಿಧಾನಸಭೆ ಎಲೆಕ್ಷನ್ ಸೋಲಿನ ಬಳಿಕ 2 ಮಹತ್ವದ ಸಭೆ ಕರೆದ ಬಿಜೆಪಿ
ಸ್ಥಳೀಯ ಮಟ್ಟದ ಕಾರ್ಯಕರ್ತರ, ಮುಖಂಡರ ಅಸಮಾಧಾನ ಹಾಗೂ ಲಿಂಗಾಯತ ನಾಯಕರ ಮುನಿಸು, ಬಿಜೆಪಿಗೆ ಲೋಕಸಭೆಯಲ್ಲಿ ಕಂಟಕವಾಗಲಿದೆ. ಇದು ನಿಜವಾಗಿಯೂ ಕಾರ್ಯಕರ್ತರ ಅಸಮಾಧಾನವಾ?. ಜಗದೀಶ್ ಶೆಟ್ಟರ್ ಹೊರಗಡೆ ನಿಂತು ಸೃಷ್ಟಿ ಮಾಡುತ್ತಿರುವ ಆಂತರಿಕ ಅಭದ್ರತೆನಾ? ಎಂಬ ಅನುಮಾನ ಸಹ ಮೂಡುತ್ತಿದೆ. ಸದ್ಯ ಧಾರವಾಡ ಬಿಜೆಪಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇದನ್ನು ಪ್ರಹ್ಲಾದ್ ಜೋಶಿಯವರು ಹೇಗೆ ಸರಿ ಮಾಡತ್ತಾರೆ ಎಂಬುವುದು ಕಾದುನೋಡಬೇಕಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ