ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲ್ಯಾನ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ?
ಹೈಕಮಾಂಡ್ ಅಂಗಳದಲ್ಲಿ ಮಹತ್ವದ ಸಭೆ ಬಳಿಕ ರಾಜ್ಯ ಕಾಂಗ್ರೆಸ್‌ಗೆ ಬೂಸ್ಟ್ ಸಿಕ್ಕಂತಾಗಿದ್ದು, ಇದೀಗ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಬಿಗ್ ಪ್ಲ್ಯಾನ್ ಮಾಡಿದೆ.
ಬೆಂಗಳೂರು, (ಆಗಸ್ಟ್ 06): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಅಭೂತಪೂರ್ವ ಗೆಲ್ಲುವ ಮೂಲಕ ಬಹುಮತ ಪಡೆದು ಅಧಿಕಾರ ಹಿಡಿದಿರುವ ಕಾಂಗ್ರೆಸ್ (Congress) ಚಿತ್ತ ಇದೀಗ ಮುಂಬರುವ ಲೋಕಸಭೆ ಚುನಾವಣೆ ಮೆಲೆ ನೆಟ್ಟಿದೆ. ಕರ್ನಾಟಕದಲ್ಲಿ ಗೆದ್ದ ಜೋಶ್ನಲ್ಲೇ ಲೋಕಸಭಾ ಚುನಾವಣೆಗೆ(Loksabha Elections 2024) ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಹೈಕಮಾಂಡ್ ಸಹ ರಾಜ್ಯ ನಾಯಕರನ್ನು ದೆಹಲಿಗೆ ಕರೆಯಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲುವಿನ ಟಾಸ್ಕ್ ನೀಡುವುದರ ಜೊತೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಕಳುಹಿಸಿದೆ. ಹೀಗಾಗಿ ಮಿಷನ್ 20 ಹೆಗ್ಗುರಿಯನ್ನಿಟ್ಟುಕೊಂಡು ರಣ ತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ, ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಮತಧಾರೆ ಎರೆದ ಅಲ್ಪಸಂಖ್ಯಾತ ಹಾಗೂ ಲಿಂಗಾಯತರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಇದನ್ನೂ ಓದಿ: ಜೆಡಿಎಸ್ ಶಾಸಕರ ಮೇಲೆ ಕಾಂಗ್ರೆಸ್ ಕಣ್ಣು, ಕುಮಾರಸ್ವಾಮಿಗೆ ಆಪರೇಷನ್ ಹಸ್ತ ಆತಂಕ?
ಬಿಜೆಪಿಯಿಂದ ಬಂದ ನಾಯಕರ ಮೂಲಕವೇ ಸ್ಕೆಚ್!
ಕನಿಷ್ಠ 20 ಸ್ಥಾನ ಗೆಲ್ಲೋ ಗುರಿಯೊಂದಿಗೆ ಹೆಜ್ಜೆ ಇಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬಿಗ್ ಟಾಸ್ಕ್ ಕೊಟ್ಟಿದೆ. ಬಿಜೆಪಿಯಿಂದ ಕಾಂಗ್ರೆಸ್ ಬಂದ ನಾಯಕರಿಗೂ ಟಾಸ್ಕ್ ನೀಡಲಾಗಿದ್ದು, ಬಿಜೆಪಿಯ ಒಳ ಸುಳಿವಿನ ಅರಿವು ಇರುವವರಿಗೆ ಜವಾಬ್ದಾರಿ ನೀರುವ ಪ್ಲ್ಯಾನ್ ಮಾಡಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಲಕ್ಷ್ಮಣ್ ಸವದಿಗೆ ಪಕ್ಷದ ಸಂಘಟನಾತ್ಮಕ ಹುದ್ದೆ, ಜಗದೀಶ್ ಶೆಟ್ಟರ್ಗೆ ಸರ್ಕಾರದ ಮಟ್ಟದಲ್ಲಿ ಹುದ್ದೆ ನೀಡುವ ಸಾಧ್ಯತೆಗಳಿವೆ.
ಲೋಕಸಭೆ ಚುನಾವಣೆಯಲ್ಲೂ ಲಿಂಗಾಯತ ಅಸ್ತ್ರಕ್ಕೆ ಪ್ಲ್ಯಾನ್
ಲೋಕಸಭೆ ಚುನಾವಣೆ ಗೆಲ್ಲಲು ಲಿಂಗಾಯತ ಅಸ್ತ್ರಕ್ಕೆ ರಾಜ್ಯ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ವಿಧಾನಸಭೆ ಚುನಾವಣೆ ಸಂಧರ್ಬದಲ್ಲೂ ರಾಜ್ಯ ಕಾಂಗ್ರೆಸ್ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಿತ್ತು. ಬಿಜೆಪಿ ಲಿಂಗಾಯತರನ್ನ ಕಡೆಗಣನೆ ಮಾಡಿದೆ ಎಂದು ಸಂದೇಶ ರವಾನಿಸಿತ್ತು. ಇದಕ್ಕೆ ಪೂರಕವಾಗಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಚುನಾವಣೆಯಲ್ಲಿ ಶೆಟ್ಟರ್ ಸೋತರೂ ಸಹ ಕಾಂಗ್ರೆಸ್‌ಗೆ ಲಾಭವಾಗಿದೆ. ಚುನಾವಣೆಯಲ್ಲಿ ಲಿಂಗಾಯತ ಮತ ಸಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿಯಿಂದ ಬಂದ ನಾಯಕರಿಗೆ ಹುದ್ದೆ ನೀಡುವ ಮೂಲಕ ಮತಬೇಟೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ಅಲ್ಪಸಂಖ್ಯಾತ ಸಮುದಾಯದ ಸಭೆ
ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ, ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಸ್ಲಿಂ ನಾಯಕರ ಸಭೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದಲ್ಲಿ ಸಭೆ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಶಾಸಕರು, ಪರಿಷತ್ ಸದಸ್ಯರು, ಮಾಜಿ ಸಂಸದರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದರು. ಅಲ್ಲೇ ಡಿಸಿಎಂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಸಭೆಯಲ್ಲಿ ಭಾಗಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಇದೇ ಸಭೆಯಲ್ಲಿ ನಾಮನಿರ್ದೇಶನ ಪರಿಷತ್ ಸದಸ್ಯರ ಆಯ್ಕೆ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಮುಸ್ಲಿಂ ಕೋಟಾದಡಿ ಮನ್ಸೂರ್ ಅಲಿಖಾನ್ ಹೆಸರು ಶಿಫಾರಸ್ಸು ಮಾಡಲಾಗಿದ್ದು, ಕೆಲ ಗೊಂದಲಗಳೂ ಮೂಡಿವೆ. ವಿಧಾನಸಭೆ ಚುನಾವಣೆಯಲ್ಲಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಹೀಗಾಗಿ ಮುಸ್ಲಿಂ ಸಮುದಾಯದವರನ್ನೇ ನಾಮನಿರ್ದೇಶನ ಮಾಡಬೇಕು ಎಂಬ ವಾದವಿದೆ.
ಶಾಸಕರ ಅಸಮಾಧಾನ ತಣಿಸಲು ಸಿಎಂ-ಡಿಸಿಎಂ ಸರ್ಕಸ್
ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲಲು ಮತ್ತು ಶಾಸಕರ ಅಸಮಾಧಾನ ತಣಿಸಲು ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ನಾಳೆಯಿಂದ ಸರಣಿ ಸಭೆ ನಡೆಸಿ ಶಾಸಕರ ಮುನಿಸಿಗೆ ಮದ್ದರೆಯಲಿದ್ದಾರೆ. ಜೊತೆಗೆ ಲೋಕಸಭಾ ತಂತ್ರಗಳನ್ನ ರೂಪಿಸಲಿದ್ದಾರೆ. ಶಾಸಕರ ಅಸಮಾಧಾನ. ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲಬೇಕಿದೆ. ಎರಡು ವಿಚಾರವನ್ನ ಬ್ಯಾಲೆನ್ಸ್ ಮಾಡಲು ರಾಜ್ಯ ಕಾಂಗ್ರೆಸ್ ನಾಯರು ನಾಳೆಯಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದ್ದಾರೆ.
ಡಿ.ಕೆ ಶಿವಕುಮಾರ್ ಪ್ರಕಾರ ಲೋಕಸಭೆ ತಯಾರಿ ಮಾಡಿಕೊಳ್ಳಲು ಕಾಂಗ್ರೆಸ್ ಫೀಲ್ಡ್‌ಗಿಳಿದಿದೆ. ನಾಳೆಯಿಂದ ಆರು ಜಿಲ್ಲೆಯ 31 ಶಾಸಕರು ಮತ್ತು ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಶಾಸಕರ ದೂರು, ಅಹವಾಲುಗಳನ್ನ ಸಿಎಂ, ಡಿಸಿಎಂ ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸಭೆ ನಡೆಯಲಿದ್ದು, ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರು ಭಾಗಿಯಾಗಲಿದ್ದಾರೆ.
ಇತ್ತೀಚೆಗೆ ನಡೆದಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕಿದ್ರು. ಸಚಿವರು ಗೌರವ ಕೊಡ್ತಿಲ್ಲವೆಂದು ಕಿಡಿಕಾರಿದ್ರು. ಹೀಗಾಗಿ ಶಾಸಕರ ಅಸಮಾಧಾನವನ್ನೂ ತಣಿಸಿ, ಲೋಕಸಭೆ ತಯಾರಿ ಬಗ್ಗೆಯೂ ಚರ್ಚೆ ನಡೆಸಲು ಸಿದ್ದು-ಡಿಕೆ ಪ್ಲ್ಯಾನ್ ಮಾಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ