ಜೆಡಿಎಸ್ ಶಾಸಕರ ಮೇಲೆ ಕಾಂಗ್ರೆಸ್ ಕಣ್ಣು, ಕುಮಾರಸ್ವಾಮಿಗೆ ಆಪರೇಷನ್ ಹಸ್ತ ಆತಂಕ?
ಲೋಕಸಭಾ ಚುನಾವಣೆ ವರ್ಷದಲ್ಲಿ ಜೆಡಿಎಸ್ಗೆ ಆಪರೇಷನ್ ಹಸ್ತ ಭೀತಿ ಶುರುವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಜೆಡಿಎಸ್ ವರಿಷ್ಠರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಹಾ ತಂತ್ರ ರೂಪಿಸಿದ್ದಾರೆ.
ಬೆಂಗಳೂರು, (ಆಗಸ್ಟ್. 06): ಕರ್ನಾಟಕದಲ್ಲಿ (karnataka) ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಯಾರನ್ನು ಮಾಡುತ್ತೆ ಎನ್ನುವುದರಲ್ಲಿ ರಾಜ್ಯ ಬಿಜೆಪಿ(BJP) ನಾಯಕರು ಇದ್ದಾರೆ. ಇದರ ನಡುವೆ ಅತ್ತ ಜೆಡಿಎಸ್ನ ಹೆಚ್‌ಡಿ ಕುಮಾರಸ್ವಾಮಿ(HD Kumaraswamy) ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ವರ್ಗಾವಣೆ ದಂಧೆ ವಿಚಾರವಾಗಿ ಪೆನ್‌ಡ್ರೈವ್ ಬಂಬ್ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಒಂದು ಸಾವಿರ ಕೋಟಿ ವಸೂಲಿ ಪಕ್ಷ.. ಪೆನ್‌ಡ್ರೈವ್ ಎಂದು ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿರುವ ಕುಮಾರಸ್ವಾಮಿಗೆ ಆಪರೇಷನ್ ಹಸ್ತ(Operation Hasta) ಆತಂಕ ಶುರುವಾಗಿದೆ. ಹೌದು… ಆಪರೇಷನ್ ಸುಳಿವು ಸಿಕ್ಕಿರುವುದರಿಂದ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬೆಂಕಿಯುಗುಳುತ್ತಿದ್ದಾರೋ ಗೊತ್ತಿಲ್ಲ. ಆದ್ರೆ, ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಯುತ್ತಿರುವ ಹೆಚ್‌ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪಡೆ ಹೂಡಿರುವ ದಾಳ ಟೆನ್ಷನ್ ತಂದಿಟ್ಟಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಕಾರ್ಯಕ್ರಮಕ್ಕೆ ಅಜಯ್ ಸಿಂಗ್ ಗೈರು, ರೆಬಲ್ ಪಟ್ಟಿಗೆ ಮತ್ತೊಬ್ಬ ಕೈ ಶಾಸಕ?
ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್, ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಈ ಆಪರೇಷನ್ ಮೇನ್ ಟಾರ್ಗೆಟ್ ಜೆಡಿಎಸ್. ಜೆಡಿಎಸ್ ಶಾಸಕರನ್ನ ಸೆಳೆಯಲು ಕಾಂಗ್ರೆಸ್ ನಿರಂತರ ಕಸರತ್ತು ಮಾಡುತ್ತಿದ್ದು, ಮೂಲಗಳ ಪ್ರಕಾರ ಈಗಾಗಲೇ 8ರಿಂದ 10 ಜೆಡಿಎಸ್ ಶಾಸಕರನ್ನ ಸಂಪರ್ಕಿಸಿರುವ ಮಾಹಿತಿ ಇದೆ. ಸರ್ಕಾರ ಇರುವುದರಿಂದ ಜೆಡಿಎಸ್ ಶಾಸಕರಿಗೆ ಅನುದಾನ ಸೇರಿದಂತೆ ಹಲವು ಆಮಿಷವೊಡ್ಡುವ ಸಾಧ್ಯತೆ ಇದೆ. ಯಾವ ಸಮಯದಲ್ಲಾದರೂ ಶಾಸಕರನ್ನ ಸೆಳೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಲೋಕಸಭೆಯಲ್ಲಿ ಕನಿಷ್ಠ 4ರಿಂದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ಪ್ಲ್ಯಾನ್ ಮಾಡಿದೆ. ಆಪರೇಷನ್ ಹಸ್ತ ಆದ್ರೆ ಜೆಡಿಎಸ್ಗೆ ಅಭ್ಯರ್ಥಿಗಳ ಕೊರತೆ ಕಾಡಲಿದ್ದು, ಇದೇ ಟೆನ್ಷನ್‌ನಲ್ಲಿ ಕುಮಾರಸ್ವಾಮಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಆರೋಪಗಳಿಗೆ ತಲೆಕೆಡಿಸಿಕೊಳ್ಳದ ಕೈ ಪಡೆ ಟಕ್ಕರ್ ಕೊಡುತ್ತಿದೆ.
ಶಾಸಕರನ್ನ ಉಳಿಸಿಕೊಳ್ಳಲು ದಳಪತಿ ಮಾಸ್ಟರ್ ಪ್ಲ್ಯಾನ್
ಇನ್ನು ಆಪರೇಷನ್ ಹಸ್ತ ಸುಳಿವು ಜೆಡಿಎಸ್ ವರಿಷ್ಠರಿಗೆ ಸಿಕ್ಕಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಜೆಡಿಎಸ್ ಆಪರೇಷನ್ ಹಸ್ತದಿಂದ ತಪ್ಪಿಸಿಕೊಳ್ಳಲು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಹಳೇ ಮೈಸೂರು ಭಾಗದ ಶಾಸಕರು ಸೇರಿ ಹಲವರ ಜೊತೆ ಸಿಎಂ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಿಗ್ ಪ್ಲ್ಯಾನ್‌ಗೆ ಜೆಡಿಎಸ್ ತನ್ನ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಜಿ.ಟಿ ದೇವೇಗೌಡ ಸೇರಿದಂತೆ ಹಲವು ಶಾಸಕರಿಗೆ ಉನ್ನತ ಸ್ಥಾನ ನೀಡುವುದು, ವಿವಿಧ ಸಮಿತಿಗಳನ್ನ ರಚಿಸಿ ಅಧ್ಯಕ್ಷ ಸ್ಥಾನ ನೀಡಲು ಹೆಚ್‌ಡಿ ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಜಿಲ್ಲಾ ಚುನಾವಣಾ ಉಸ್ತುವಾರಿ ಹುದ್ದೆ ನೀಡುವುದಕ್ಕೂ ತಯಾರಿ ನಡೆದಿದೆ. ಯಾಕಂದ್ರೆ, ಶಾಸಕರು ಬಿಟ್ಟು ಕಾಂಗ್ರೆಸ್‌ಗೆ ಹೋದ್ರೆ, ಲೋಕಸಭೆಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಹೆಚ್‌ಡಿಕೆ ಅಲರ್ಟ್ ಆಗಿದ್ದಾರೆ.
ಇನ್ನು ದಿನಾಂಕ ಘೋಷಣೆಗೂ ಮುನ್ನವೇ ಲೋಕಸಭೆ ಚುನಾವಣೆಗೆ ತಂತ್ರ ಪ್ರತಿತಂತ್ರಗಳೂ ನಡೆಯುತ್ತಿದ್ದು, ಈ ಆಪರೇಷನ್ ಹಸ್ತ ಮುಂದೆ ಎಲ್ಲಿಗೆ ಬಂದು ನಿಲ್ಲಲಿದೆ ಎಂದು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ