ಮಾತನಾಡಲು ರೇವಣ್ಣ ಉದಾಸೀನ, ವಿಧಾನಸಭೆಯಲ್ಲಿ ನಾಯಕತ್ವದ ಕೊರತೆ ಎದುರಿಸಿದ ಜೆಡಿಎಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2021 | 3:06 PM

ಹೀಗಾಗಿ ಸ್ಪೀಕರ್ ಗಮನಸೆಳೆಯಲು, ಸ್ಪೀಕರ್ ಮೇಲೆ ಒತ್ತಡ ಹಾಕಲು ಜೆಡಿಎಸ್ ಶಾಸಕರಿಗೆ ಸಾಧ್ಯವಾಗಲಿಲ್ಲ. ಜೆಡಿಎಸ್ ಹೋರಾಟ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಯಿತು.

ಮಾತನಾಡಲು ರೇವಣ್ಣ ಉದಾಸೀನ, ವಿಧಾನಸಭೆಯಲ್ಲಿ ನಾಯಕತ್ವದ ಕೊರತೆ ಎದುರಿಸಿದ ಜೆಡಿಎಸ್
ಮಾಜಿ ಸಚಿವ ರೇವಣ್ಣ
Follow us on

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಪುಂಡಾಟಿಕೆ ಕುರಿತು ಜಾತ್ಯತೀಯ ಜನತಾದಳ (ಜೆಡಿಎಸ್) ಕಾರ್ಯಕರ್ತರು ಸೋಮವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಆದರೆ ನಾಯಕತ್ವ ಕೊರತೆಯ ಕಾರಣ ಜೆಡಿಎಸ್ ಸದಸ್ಯರಿಗೆ ತಮ್ಮ ವಾದವನ್ನು ಸಂಪೂರ್ಣವಾಗಿ ಮಂಡಿಸಲು ಅವಕಾಶವೇ ಸಿಗಲಿಲ್ಲ. ಪ್ರಸ್ತಾವವನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸುವಲ್ಲಿ ಜೆಡಿಎಸ್ ನಾಯಕರು ವಿಫಲರಾದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಂಶಂಪುರ ಗೈರು ಹಾಜರಾಗಿದ್ದರು. ಮತ್ತೋರ್ವ ಹಿರಿಯ ನಾಯಕ ಎಚ್​.ಡಿ.ರೇವಣ್ಣ ಸದನದಲ್ಲಿ ಉಪಸ್ಥಿತರಿದ್ದರು, ಆದರೆ ಮೇಲೆದ್ದು ಮಾತನಾಡುವ ಉತ್ಸಾಹ ತೋರಲಿಲ್ಲ. ಹೀಗಾಗಿ ಸ್ಪೀಕರ್ ಗಮನಸೆಳೆಯಲು, ಸ್ಪೀಕರ್ ಮೇಲೆ ಒತ್ತಡ ಹಾಕಲು ಜೆಡಿಎಸ್ ಶಾಸಕರಿಗೆ ಸಾಧ್ಯವಾಗಲಿಲ್ಲ. ಜೆಡಿಎಸ್ ಹೋರಾಟ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಯಿತು.

ಕನ್ನಡ ಧ್ವಜದ ಶಾಲು ಧರಿಸಿದ್ದ ಜೆಡಿಎಸ್ ಶಾಸಕರು ಪ್ರತಿಭಟನೆಗೆ ಮುಂದಾದರು. ಶಾಸಕ ಅನ್ನದಾನಿ ಈ ಹೋರಾಟಕ್ಕೆ ನೇತೃತ್ವ ನೀಡಿದ್ದರು. ಜೆಡಿಎಸ್​ನಿಂದ ಹೊರ ಹೋಗಲು ಸಿದ್ಧರಾಗಿದ್ದಾರೆ ಎಂದು ಹೇಳುತ್ತಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಸಹ ಕನ್ನಡ ಧ್ವಜದ ಶಾಲು ಪ್ರದರ್ಶಿಸಿ ಅನ್ನದಾನಿ ಅವರ ಪ್ರಯತ್ನಕ್ಕೆ ಸಾಥ್ ನೀಡಿದರು. ಆದರೆ ಸದನದಲ್ಲಿ ಇದ್ದರೂ ಎಚ್​.ಡಿ.ರೇವಣ್ಣ ಮೇಲೆದ್ದು ನಿಲ್ಲಲು ಉತ್ಸಾಹ ತೋರಲಿಲ್ಲ. ಸದನ ಮುಂದೂಡುವ ಕೆಲವೇ ನಿಮಿಷಗಳ ಮೊದಲು ಎದ್ದು ನಿಂತರಾದರೂ ಏನೂ ಪ್ರಯೋಜನವಾಗಲಿಲ್ಲ.

ಭತ್ಯೆ ಪಡೆಯಲು ಸದನಕ್ಕೆ ಹೋಗಬೇಕೆ: ಎಚ್​ಡಿಕೆ ಪ್ರಶ್ನೆ
ಕೇವಲ ಟಿಎ, ಡಿಎ ಪಡೆಯುವುದಕ್ಕೆ ನಾನು ಸದನಕ್ಕೆ ಹೋಗಬೇಕೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್​.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಐದು ದಿನದ ಅಧಿವೇಶನದಲ್ಲಿ ಏನು ಚರ್ಚೆಯಾಗಿದೆ ಎಂದು ಪ್ರಶ್ನಿಸಿದ ಅವರು, ಒಂದು ದಿನ ಭೈರತಿ ಬಸವರಾಜ್ ವಿರುದ್ಧ ಪ್ರತಿಭಟನೆ ಮಾಡಿದರು. ಇನ್ನೊಂದು ದಿನ ತಹಶೀಲ್ದಾರರ ವಿರುದ್ಧ ಪ್ರತಿಭಟನೆ ಮಾಡಿದರು. ಅದನ್ನೆಲ್ಲಾ ನೋಡುವುದಕ್ಕೆ ನಾನು ಅಲ್ಲಿಗೆ ಹೋಗಬೇಕಿತ್ತಾ ಎಂದು ಕೇಳಿದರು.

ಅಧಿವೇಶನ ನಡೆಯದಂತೆ ಕಾಂಗ್ರೆಸ್ ಹುನ್ನಾರ: ಬಿಜೆಪಿ ನಾಯಕ ಆರೋಪ
ಬೆಳಗಾವಿ ಅಧಿವೇಶನ ಸಮರ್ಪಕ ರೀತಿಯಲ್ಲಿ ನಡೆಯದಂತೆ ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಹೇಳಿದರು. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯಲಾಗಿದೆ. ಆದರೆ ಅಧಿವೇಶನ ಸುಗಮವಾಗಿ ನಡೆಯಲು ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ. ಭೈರತಿ ಬಸವರಾಜ್ ಬಗ್ಗೆ ಭೂಕಬಳಿಕೆ ಆರೋಪ ಮಾಡುತ್ತಿದ್ದಾರೆ. ಭೈರತಿಯಿಂದ ಅನ್ಯಾಯವಾಗಿಲ್ಲವೆಂದು ಮಾಲೀಕರೇ ಹೇಳುತ್ತಿದ್ದಾರೆ/ ಕಾಂಗ್ರೆಸ್ ನಾಯಕರ ದ್ವಂದ್ವ ನೀತಿ ನಮಗೆ ಅರ್ಥವಾಗುತ್ತಿಲ್ಲ ಎಂದರು. ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರಶ್ನೆ ಕೇಳಿದರೆ ಸರ್ಕಾರ ಉತ್ತರ ಕೊಡತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಕೋನರೆಡ್ಡಿ: ಸ್ವಾಗತಿಸಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ
ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ, ಡಿಕೆ ಶಿವಕುಮಾರ್ ಈ ಪ್ರಕರಣದ ನಿರ್ಮಾಪಕ, ನಿರ್ದೇಶಕ; ಸಿಟಿ ರವಿ ಹೇಳಿಕೆ

Published On - 3:06 pm, Mon, 20 December 21