ಕರ್ನಾಟಕದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ: ಹೊಸ ಅರ್ಥ ಪಡೆದುಕೊಂಡ ಬಿಎಲ್ ಸಂತೋಷ್ ಮಾತು

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಬಂದಿರಬಹುದು ಎಂಬ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದರು.

ಕರ್ನಾಟಕದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ: ಹೊಸ ಅರ್ಥ ಪಡೆದುಕೊಂಡ ಬಿಎಲ್ ಸಂತೋಷ್ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 19, 2021 | 11:02 PM

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ಮತ್ತೆ ಗರಿಗೆದರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ (ಡಿ 19) ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಆಡಿರುವ ಭಾವುಕ ಮಾತುಗಳಿಂದಾಗಿ ಸಾವರ್ಕರ್ ಪುಸ್ತಕ ಬಿಡುಗಡೆಯ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಮಾತುಗಳಿಗೆ ಹೊಸ ಅರ್ಥ ಬಂದಿದೆ. ನಗರದ ಪುರಭವನದಲ್ಲಿ ಶನಿವಾರ (ಡಿ 18) ನಡೆದ ವೀರ್ ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ. ಕೆಲವು ಪತ್ರಕರ್ತರು ಸಹ ಹಾಗೆಯೇ ಭಾವಿಸಿರಬಹುದು. ಆದರೆ ವೀರ ಸಾವರ್ಕರ್ ಬಗ್ಗೆ ಸಿಎಂ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದಿದ್ದರು.

ಏಕಾಏಕಿ ಈ ವಿಚಾರ ಚರ್ಚೆಗೆ ಬಂದಿದ್ದು ಎಲ್ಲರಿಗೂ ಅಚ್ಚರಿಯುಂಟು ಮಾಡಿತ್ತು. ಈ ವಿಚಾರ ಪ್ರಸ್ತಾಪ ಮಾಡುವ ಯಾವುದೇ ಹಿನ್ನೆಲೆಯಲ್ಲಿ ಸಭೆಯಲ್ಲಿ ಇರಲಿಲ್ಲ. ಆದರೂ ಸಂತೋಷ್ ಅವರೇಕೆ ಈ ವಿಷಯ ಪ್ರಸ್ತಾಪಿಸಿದರು ಎಂಬ ಚರ್ಚೆಗಳು ಗರಿಗೆದರಿದ್ದವು. ಮುಖ್ಯಮಂತ್ರಿ ವಿಚಾರವನ್ನು ಅಷ್ಟಕ್ಕೇ ಬಿಟ್ಟ ಸಂತೋಷ್ ಬಳಿಕ ವೀರ ಸಾವರ್ಕರ್ ಬಗ್ಗೆ ಮಾತು ಮುಂದುವರಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಬಂದಿರಬಹುದು ಎಂಬ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದರು.

ಈ ಬೆಳವಣಿಗೆಯ ಮುಂದುವರಿದ ಅಧ್ಯಾಯ ಎಂಬಂತೆ ಇದೀಗ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅಧಿಕಾರದ ಕುರಿತು ಭಾವುಕ ಮಾತುಗಳನ್ನು ಆಡಿದ್ದಾರೆ. ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಬೊಮ್ಮಾಯಿ, ಸಿಎಂ ಆದ ನಂತರ ಕ್ಷೇತ್ರದ ಕಡೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ. ಸಿಎಂ ಸ್ಥಾನದ ಜೊತೆ ಕ್ಷೇತ್ರದ ಜನರ ಒಲವು ಉಳಿಸಿಕೊಳ್ಳಬೇಕು. ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿರುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿರುವುದು ತನಗೂ ಗೊತ್ತಿದೆ ಎಂಬುದನ್ನು ಸಾರಿಹೇಳಲೆಂದೇ ಬೊಮ್ಮಾಯಿ ಹೀಗೆ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಷೇತ್ರದ ಜನತೆಯ ಎದುರು ಭಾವುಕರಾಗಿ ಮಾತನಾಡುವ ಮೂಲಕ ಅವರ ಮನ ಗೆಲ್ಲಲು, ತಾನು ಮುಖ್ಯಮಂತ್ರಿಯಾದ ನಂತರ ಬದಲಾಗಿಲ್ಲ ಎಂದು ಮನಗಾಣಿಸಲು ಬೊಮ್ಮಾಯಿ ಪ್ರಯತ್ನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ, ಸ್ಥಾನಮಾನ ಶಾಶ್ವತವಲ್ಲ: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಭಾವನಾತ್ಮಕ ಮಾತು ಇದನ್ನೂ ಓದಿ: ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ; ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್