ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಕೋನರೆಡ್ಡಿ: ಸ್ವಾಗತಿಸಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ
ಕೋನರೆಡ್ಡಿ ಅವರು ನಮ್ಮ ಪಕ್ಷದ ಸಿದ್ಧಾಂತ ನಂಬಿ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿ: ಜೆಡಿಎಸ್ ನಾಯಕ ಎನ್.ಎಚ್.ಕೋನರೆಡ್ಡಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೋನರೆಡ್ಡಿಯವರು ಈ ಶುಭ ಮುಹೂರ್ತದಲ್ಲಿ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರುತ್ತಿದ್ದಾರೆ. ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ ಎಂದರು. ಕೋನರೆಡ್ಡಿ ಅವರು ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದಿದ್ದಾರೆ. ಬೆಳಗಾವಿಯಲ್ಲಿ ನಮ್ಮ ಪಕ್ಷಕ್ಕೆ ಅತಿಹೆಚ್ಚು ಮತ ಸಿಕ್ಕಿದೆ. ನಮ್ಮ ಪರ್ಫಾರಮೆನ್ಸ್ ಚೆನ್ನಾಗಿದೆ. ಜನ ಬದಲವಾಣೆ ತರಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ 11 ಸ್ಥಾನ ಗೆದ್ದಿವೆ. ವಿರೋಧ ಪಕ್ಷದಲ್ಲಿ ಇದ್ದು ಇಷ್ಟು ಸ್ಥಾನ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇವತ್ತಿನಿಂದ ನೀವು ನಮ್ಮವರು, ನಾವು ನಿಮ್ಮವರು. ನಮ್ಮ ಸ್ಥಳೀಯ ನಾಯಕರ ಕೈ ಹಿಡಿದು ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೋನರೆಡ್ಡಿ ಶಾಸಕರಾಗಿದ್ದು ಸ್ವಂತಶಕ್ತಿಯಿಂದಲೇ ಹೊರತು ಜೆಡಿಎಸ್ನಿಂದಲ್ಲ ಎಂದರು. ಅವರು ಕಾಂಗ್ರೆಸ್ ಸೇರಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಹಿಮ್ಮೆಟ್ಟಿಸಬೇಕಾಗಿದೆ. ಜಾತಿ, ಧರ್ಮದ ವಿಚಾರಗಳನ್ನೇ ದೊಡ್ಡದು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೋನರೆಡ್ಡಿ ನನಗೆ ಬಹುಕಾಲದ ಸ್ನೇಹಿತರು. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಕೋನರೆಡ್ಡಿ ಅವರನ್ನು ಯುವ ಜನತಾದಳದ ಅಧ್ಯಕ್ಷರನ್ನಾಗಿ ಮಾಡಿದ್ದೆ ಎಂದು ನೆನಪಿಸಿಕೊಂಡರು.
ನನ್ನನ್ನು ಜೆಡಿಎಸ್ನಿಂದ ಉಚ್ಚಾಟಿಸಿದಾಗಲೇ ಅವರು ನನ್ನ ಜೊತೆಗೆ ಬರಬೇಕಿತ್ತು. ಕೋನರೆಡ್ಡಿ ಹೋರಾಟದಿಂದ ಬೆಳೆದವರು. ಕೋನರೆಡ್ಡಿ ಅವರು ಕೊನೆಗೂ ಒಳ್ಳೇ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಆರ್ಥಿಕವಾಗಿ ಬಹುದೊಡ್ಡ ಹಿನ್ನಡೆಯಾಗಿದೆ. ಬಿಜೆಪಿಯವರನ್ನು ಕಿತ್ತೊಗೆಯುವ ಕೆಲಸವನ್ನು ಕೋನರೆಡ್ಡಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಎಚ್.ಕೋನರೆಡ್ಡಿ, ನನಗೆ ಜೆಡಿಎಸ್ ಪಕ್ಷ ಬಿಡಬೇಕೆಂಬ ಮನಸ್ಸು ಇರಲಿಲ್ಲ. ದೇವೇಗೌಡರು, ಕುಮಾರಸ್ವಾಮಿ ಪಕ್ಷ ಬಿಡಬೇಡ ಅಂದರು. ಆದರೂ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಕಾಂಗ್ರೆಸ್ ಸೇರಿದೆ. ಜೆಡಿಎಸ್ಗೆ ರಾಜೀನಾಮೆ ಕಳುಹಿಸಿದ್ದೇನೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಸಿದ್ದರಾಮಣ್ಣ ಎಂದೇ ಮಾತನಾಡಿಸುತ್ತಿದ್ದೆ. ನೀನಲ್ಲದೆ ಇನ್ಯಾರು ಹಾಗೆ ಕರೆಯಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್ ಅವರು ಒಂದು ರೀತಿ ಕುದುರೆ ಇದ್ದಂತೆ. ನಾನು ಎಲ್ಲಿಯೇ ಇದ್ದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ನಾನು ನಾಲ್ಕು ಭಾರಿ ಸ್ಪರ್ದೆ ಮಾಡಿ ಗೆಲುವು ಕಂಡವನು. ಮೋದಿ ಅಲೆಯಿಂದಾಗಿ ಕಳೆದ ಬಾರಿ ಸೋಲು ಕಂಡೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದ್ದೇ ಸ್ಪೂರ್ತಿ ಆಯಿತು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ರೈತಪರ ನಿಲುವು ಗೌರವಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಪಕ್ಷವು ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುವೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್, ಡಾ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಇತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಕೋನರೆಡ್ಡಿ ಅವರನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸ್ವಾಗತಿಸಿದರು. ಕೋನರಡ್ಡಿ ಕಾಂಗ್ರೆಸ್ ಸೇರುತ್ತಿದ್ದಂತೆ ನವಲಗುಂದ ತಾಲ್ಲೂಕಿನ ಜನರು ಶಿಳ್ಳೆ ಹಾಕಿ, ಚಪ್ಪಾಳೆ ಹೊಡೆದರು.
ಇದನ್ನೂ ಓದಿ: ಪ್ರಕರಣ ಹಿಂಪಡೆದಿದ್ದರೂ ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್, ಸಿಎಂ ಬೊಮ್ಮಾಯಿಗೆ ಕಂಟಕ, ಕೋನರೆಡ್ಡಿ ಹೇಳೋದೇನು? ಇದನ್ನೂ ಓದಿ: ಕೋಲಾರ ರಾಜಕಾರಣ: ಬಿಜೆಪಿ ಜೆಡಿಎಸ್ ಅಬ್ಬರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ, ಮುಂದಿನ ಬೆಳವಣಿಗೆಗೆ ಇದು ದಿಕ್ಸೂಚಿಯೇ?
Published On - 9:31 pm, Tue, 14 December 21