‘ಅಗ್ನಿ ಸುರಕ್ಷತೆ ನಿಯಮ ಕೇವಲ ಖಾಸಗಿ ಶಾಲೆಗಳಿಗಲ್ಲ, ಕರ್ನಾಟಕದ ಎಲ್ಲಾ ಶಾಲೆಗಳಿಗೂ ಅನ್ವಯ ಆಗಬೇಕು’
ಸರ್ಕಾರಿ ಶಾಲೆಗಳಲ್ಲಿ ಈಗ ವಿಧಿಸಿರುವ ನಿಯಮ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಭೋಜೇಗೌಡ ಸವಾಲು ಹಾಕಿದ್ದಾರೆ. ಸಂಕನೂರು ಸಮಿತಿ ಶಿಫಾರಸು ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದಾರೆ.
ಬೆಳಗಾವಿ: ಅಗ್ನಿ ಸುರಕ್ಷತೆ ನಿಯಮ ಕೇವಲ ಖಾಸಗಿ ಶಾಲೆಗಳಿಗಲ್ಲ. ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಿಗೂ ಈ ನಿಯಮ ಅನ್ವಯವಾಗಬೇಕು ಎಂದು ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಈಗ ವಿಧಿಸಿರುವ ನಿಯಮ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಭೋಜೇಗೌಡ ಸವಾಲು ಹಾಕಿದ್ದಾರೆ. ಸಂಕನೂರು ಸಮಿತಿ ಶಿಫಾರಸು ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದಾರೆ.
ಖಾಸಾಗಿ ಶಾಲೆಗಳ ಕಟ್ಟಡ ಸುರಕ್ಷತೆ ಹೊಸ ನಿಯಮ ವಿಚಾರಕ್ಕೆ ಪರಿಷತ್ ಸದಸ್ಯ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ ನಿರ್ಮಾಣ ಸುರಕ್ಷತೆಗೆ ಸುಮಾರು 60 ಸರ್ಟಿಫಿಕೇಟ್ಗಳು ಬೇಕು. ಅಗ್ನಿಶಾಮಕ ದಳದಿಂದ ಎಸ್ಟೀಮೇಟ್ ಕೇಳಿ ಶಾಕ್ ಆದೆ. ಸುಮಾರು 50 ಲಕ್ಷ ಹೇಳಿದ್ರು. ನಾನು ಶಿಕ್ಷಣ ಸಂಸ್ಥೆ ಬಿಟ್ಟು ಆಸ್ಪತ್ರೆ ನಡೆಸಲಾ ದನ ಕಟ್ಟಲಾ? ಕೊನೆಗೆ ಎಲ್ಲರನ್ನು ಭೇಟಿ ಮಾಡಿ ಕೇಳಿಕೊಂಡಾಗ 14 ಲಕ್ಷ ಮಾಡಿದ್ರು. ನಾನೇನೋ ಮಾಡಿಸಿದೇ ಅದೆಷ್ಟು ಜನ ಮಾಡಿಸೋಕೆ ಆಗುತ್ತೆ ಹೇಳಿ. ಸುಮಾರು 60 ರೂಲ್ಸ್ ಒಳಗೊಂಡು ತಂದಿದ್ದಾರೆ. ಅದನ್ನೆಲ್ಲ ಓದೋಕೆ ಆಗಲ್ಲ. ಇದೆಲ್ಲ ಅಧಿಕಾರಿಗಳು ಬರೀ ದುಡ್ಡು ಮಾಡೋಕೆ ಮಾಡಿರೋ ಪ್ಲಾನ್. ಸಿಬಿಎಸ್ಸಿ ಹಾಗೂ ಐಸಿಎಸ್ಸಿ ಸಿಲಬಸ್ ನಿಯಮಗಳನ್ನ ತನ್ನಿ. ಇಲ್ಲವಾದಲ್ಲಿ ಖಾಸಾಗಿ ಶಾಲೆಗಳನ್ನ ಮುಚ್ಚಿಸಿ ನೀವೇ ನಿಮ್ಮ ಸರ್ಕಾರಿ ಶಾಲೆಗಳನ್ನ ರಾಷ್ಟ್ರೀಕೃತ ಮಾಡಿ. ಖಾಸಾಗಿ ಶಾಲೆಗಳಿಗೆ ಇಷ್ಟೆಲ್ಲ ನಿಯಮಗಳು ಬೇಕಲ್ವಾ ಹಾಗಾದ್ರೆ ಸರ್ಕಾರಿ ಶಾಲೆಗಳಲ್ಲೂ ಮಾಡಿ ಅಂತಾ ಕಲಾಪದಲ್ಲಿ ಪರಿಷತ್ ಸದಸ್ಯ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ವಿಚಾರವಾಗಿ ಸದನದಲ್ಲಿ ಗದ್ದಲ ಗಲಾಟೆ ಜೋರಾಗಿ ಕೇಳಿಬಂದಿದೆ. ಖಾಸಗಿ ಶಾಲೆಗಳ ಪರವಾಗಿ ಮಾತನಾಡುವಾಗ ಜೆಡಿಎಸ್ನ ಸದಸ್ಯ ಮರಿತಿಬ್ಬೇಗೌಡ ಬಾಯಿ ಹರಿಬಿಟ್ಟಿದ್ದಾರೆ. ಖಾಸಗಿ ಶಾಲೆಗಳ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ನಿಯಮ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದೆ ಹೋದ್ರೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸ್ತೀವಿ ಎಂದು ಮರಿತಿಬ್ಬೇಗೌಡ ಹೇಳಿದ್ದಾರೆ. ಮರಿತಿಬ್ಬೇಗೌಡ ಮಾತಿಗೆ ಕೆರಳಿದ ಸಚಿವ ಮಾಧುಸ್ವಾಮಿ ಯಾರಪ್ಪನದು ಅಂತ ಎಲ್ಲಾ ಬಂದ್ ಮಾಡಿಸ್ತೀರಾ? ಎಂದು ಮರುಪ್ರಶ್ನೆ ಮಾಡಿದ್ದಾರೆ.
ಮಾತಾಡೋಕು ಇತಿ ಮಿತಿ ಇದೆ. ಎಲ್ಲಾ ಬಂದ್ ಮಾಡಿಸ್ತೀನಿ ಅಂದ್ರೆ ನಾವೇನು ಕೈ ಕಟ್ಟಿ ಕುಳಿತಿರುತ್ತೇವಾ? ನಾವೇನು ಕಡ್ಲೆ ಪುರಿ ತಿನ್ನುತ್ತೇವಾ? ಎಂದು ಮರಿತಿಬ್ಬೇಗೌಡ ಮಾತಿಗೆ ಮಾಧುಸ್ವಾಮಿ ಕೆಂಡಾಮಂಡಲ ಆಗಿದ್ದಾರೆ. ಮರಿತಿಬ್ಬೇಗೌಡ ಮಾತಿಗೆ ಬಿಜೆಪಿ ಸದಸ್ಯರ ಆಕ್ರೋಶ ಕೇಳಿಬಂದಿದ್ದು ಸದನದಲ್ಲಿ ಜೋರು ಗದ್ದಲ ಗಲಾಟೆ ಆಗಿದೆ. ಪರಸ್ಪರ ಮಾತಿನ ಚಕಮಕಿ ಏರ್ಪಟ್ಟಿದೆ. ಬಳಿಕ ಮಧ್ಯೆ ಪ್ರವೇಶ ಮಾಡಿದ ಮಾಧುಸ್ವಾಮಿ, 2009 ರಲ್ಲಿ ಈ ನಿಯಮ ಬಂದಿದೆ. ನಿಮ್ಮ ಸರ್ಕಾರ ಇದ್ದಾಗ ಏನ್ ಮಾಡಿದ್ರಿ ಎಂದು ಮರಿತಿಬ್ಬೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಸಭಾಪತಿ ಮಧ್ಯಪ್ರವೇಶ ಮಾಡಿ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ.
ಬೆಳಗಾವಿ ಸುವರ್ಣ ಗಾರ್ಡನ್ನಲ್ಲಿ ವಿವಿಧ ಸಂಘಟನೆಗಳ ಧರಣಿ ಬೆಳಗಾವಿ ಸುವರ್ಣ ಗಾರ್ಡನ್ನಲ್ಲಿ ವಿವಿಧ ಸಂಘಟನೆಗಳ ಧರಣಿ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವರು ಶುಗರ್ ವರ್ಕರ್ಸ್ ಫೆಡರೇಷನ್, ಕರ್ನಾಟಕ ಯುವಜಾಗೃತ ವೇದಿಕೆ, ನೇಗಿಲುಯೋಗಿ ಸುರಕ್ಷಾ ರೈತ ಸಂಘ, ಮಲಪ್ರಭಾ ಸಹಕಾರಿ ಶುಗರ್ಸ್, ಪೊಲೀಸ್ ಇಲಾಖೆ ಜಾಡಮಾಲಿ ನೌಕರರಿಂದ ಮನವಿ ಸ್ವೀಕರಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವರಾದ ಆರಗ ಜ್ಞಾನೇಂದ್ರ, ಅರೆಬೈಲ್ ಶಿವರಾಂ ಹೆಬ್ಬಾರ್, ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಭಟನಾ ನಿರತ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದಾರೆ.
ರನ್ನ ಸಕ್ಕರೆ ಕಾರ್ಖಾನೆ ಸಾಧಕ ಬಾಧಕಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಪೊಲೀಸ್ ಇಲಾಖೆ ಜಾಡಮಾಲಿ ನೌಕರರ ಸೇವಾ ಭದ್ರತೆ, ಡಿ ದರ್ಜೆ ನೌಕರರಾಗಿ ಪರಿಗಣನೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುವೆ. ಸಿಎಂ, ಸಚಿವರು, ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ನಿಮ್ಮ ಬೇಡಿಕೆ ಈಡೇರಿಸುವುದಾಗಿ ಪ್ರತಿಭಟನಾಕಾರರಿಗೆ ಸಚಿವರು ಭರವಸೆ ಕೊಟ್ಟಿದ್ದಾರೆ. ರನ್ನ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಸಿಎಂ ಜತೆ ಚರ್ಚಿಸಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ; ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗರಂ
ಇದನ್ನೂ ಓದಿ: ಬಾಗಲಕೋಟೆ: ಶಾಲೆಯಿಂದ ವಾಪಸ್ ತೆರಳಲು ಬಸ್ ಇಲ್ಲದ ಹಿನ್ನೆಲೆ; ವಿದ್ಯಾರ್ಥಿಗಳ ಪ್ರತಿಭಟನೆ
Published On - 6:02 pm, Tue, 14 December 21