ಹಾಸನ, (ಡಿಸೆಂಬರ್ 10): ನಾನು ಐವತ್ತು ಜನ ಕರೆದುಕೊಂಡು ನಿಮ್ಮ ಜತೆ ಬರುತ್ತೇನೆ ಎಂದು ಕೇಂದ್ರದ ನಾಯಕರ ಬಳಿ ಮಾತನಾಡಿರುವ ಬಗ್ಗೆ ಮಾಹಿತಿ ಇದೆ. ಇಲ್ಲಿ ಯಾರು ಯಾರಿಗೂ ನಿಷ್ಟೆ ಪ್ರಾಮಾಣಿಕತೆ ಇಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ. ಈ ಸರ್ಕಾರ ಮುಂದೆ ಏನಾಗುತ್ತೆ ಲೋಕಸಭಾ ಚುನಾವಣಾ ಮುಗಿದ ಬಳಿಕ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಇದರೊಂದಿಗೆ ಪರೋಕ್ಷವಾಗಿ ಕಾಂಗ್ರೆಸ್ನ ಪ್ರಮುಖ ನಾಯಕರೇ ಐವತ್ತು ಶಾಸಕರನ್ನ ಕರೆತರುವ ಬಗ್ಗೆ ಬಿಜೆಪಿ ನಾಯಕರ ಜೊತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾದ್ರೆ, ಆ ರೀತಿ ಹೇಳಿರುವ ನಾಯಕರು ಯಾರು ಎನ್ನುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಆದಮೇಲೆ ಅರ್ಜಿ ಹಾಕಂಡು ಹೋಗಿದ್ದಾರೆ. ಇಲ್ಲ ನಾನು ಐವತ್ತು, ಅರವತ್ತು ಜನ ಕರೆದುಕೊಂಡು ಬಂದುಬಿಡುತ್ತೇನೆ ಏನು ತೊಂದರೆ ಆಗುವುದು ಬೇಡ ಅಂತ ಹೋಗಿದ್ದಾರೆ. ಐವತ್ತು, ಅರವತ್ತು ಜನ ಕರೆದುಕೊಂಡು ಸಣ್ಣಪುಟ್ಟವರಿಂದ ಹೋಗಲು ಆಗುತ್ತಾ? ಮೊನ್ನೆ ಯಾರೋ ಮಾಹಿತಿ ಹೇಳುತ್ತಿದ್ದರು. ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದು ಬಿಡುತ್ತೇನೆ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆಸ್ಪೋಟಕ ಮಾಹಿತಿ ಬಚ್ಚಿಟ್ಟಿದ್ದಾರೆ.
ಲೋಕಸಭಾ ಚುನಾವಣೆ ಕಳೆದ ಮೇಲೆ ಮಹಾರಾಷ್ಟ್ರದಲ್ಲಿ ಆಯ್ತು ಅಲ್ವಾ ಅದೇ ರೀತಿ ಇಲ್ಲಿ ಯಾರು ಹುಟ್ಕತರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಎನ್ನುವುದೇ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗುತ್ತಾರೆ ಅಷ್ಟೇ. ಇವತ್ತು ಇಲ್ಲಿ ಇರುತ್ತಾರೆ. ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ ಎಂದರು.
ಕೆಂಪಣ್ಣ ಏನು ಹೇಳಿದಾರೆ ಈ ಸರ್ಕಾರದಲ್ಲೂ ಕಮಿಷನ್ ಇದೆ ಎಂದಿದ್ದಾರೆ. ಅದನ್ನು ಯಾಕೆ ನಿಲ್ಲಿಸುವುದಕ್ಕೆ ಆಗಿಲ್ಲ. 135 ಗೆದ್ದಿದ್ದೇವೆ ಎಂದು ಹೇಳುತ್ತಿದ್ದೀರಿ, ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪರಿಸ್ಥಿತಿ ಏನೆಂದು ಗೊತ್ತಾಗುತ್ತೆ. ಎರಡನೇ ಬಾರಿ ಸಾಹಸ ಮಾಡಿ ಸಿಎಂ ಆಗಿದ್ದೀರಿ. ಸಮಾಜವನ್ನು ಎತ್ತಿ ಕಟ್ಟಿ ಏನು ಮಾಡುತ್ತೀರಾ? ಜಾತಿ ಗಣತಿ ಯಾಕೆ ಬೇಕು. ಆರ್ಥಿಕ ಸಾಮಾಜಿಕ ಗಣತಿ ಮಾಡಿಜಾತಿ ಗಣತಿ ಮಾಡಿ ವೈಶಮ್ಯ ಬಿತ್ತಲು ಹೋಗುತ್ತೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ರೂ. ಕೊಡಲು ನನ್ನ ವಿರೋಧ ಇಲ್ಲ. ಆದರೆ ಹಿಂದುಗಳು ಎಂದರೆ ಕೇವಲ ಮೇಲ್ವರ್ಗದ ಜನ ಅಲ್ಲ. ದಲಿತರು ಬಡವರು ಇದಾರೆ. ಅವರ ಪರಿಸ್ಥಿತಿ ಏನು? ಮತಕ್ಕಾಗಿ ಓಲೈಸಿಕೊಳ್ಳಿ, ನೀವು ಹತ್ತು ಸಾವಿರ ಕೋಟಿ ಕೊಟ್ಟರೆ ಅವರಿಗೇನು ತಲೆ ಮೇಲೆ ಹೊರಿಸ್ತೀರಾ. ಅದರಲ್ಲೂ ಲೂಟಿ ಹೊಡೆಯೋ ಯತ್ನ ಅಷ್ಟೇ ಎಂದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು ಸಿಎಂ ವಿರುದ್ದ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬರೀ ಹರಿಪ್ರಸಾದ್ ಅಲ್ಲ. ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರ ಬರುತ್ತದೆ ಎಂದು ಹೇಳಿದ ಅವರು, ಈ ಸಲವಾದರೂ ಬೆಳಗಾವಿ ಅಧಿವೇಶನದಲ್ಲಿ ಒಳ್ಲೆ ಚರ್ಚೆ ಆಗಲಿ ಎಂದು ಸುಮ್ಮನಿದ್ದೇನೆ. ನಾನೇನು ಹಿಂದೆ ಸರಿಯಲ್ಲ. ದಾಖಲೆ ಇಟ್ಟೇ ಮಾತನಾಡುತ್ತೇನೆ ಎಂದು ತಿಳಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Sun, 10 December 23