ರಾಜ್ಯ ರಾಜಕಾರಣದಲ್ಲಿ ಶುರುವಾಯ್ತು ಚಡ್ಡಿ ರಾಜಕೀಯ: ಬಿಕೆ ಹರಿಪ್ರಸಾದ್ ಬಗ್ಗೆ ಜೋಶಿ ಹೇಳಿದ್ದಿಷ್ಟು
ರಾಜ್ಯ ರಾಜಕಾರಣದಲ್ಲಿ ಚಡ್ಡಿ ರಾಜಕೀಯ ಶುರುವಾಗಿದೆ. ಪಂಚೆ ಹಾಕಿಕೊಂಡು ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು
ಹುಬ್ಬಳ್ಳಿ, ಡಿಸೆಂಬರ್ 10: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. “ಪಂಚೆ ಹಾಕಿಕೊಂಡು ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ” ಎಂದು ಹೇಳಿದ್ದರು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ, ಒಳಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಚಡ್ಡಿ ಹಾಕಿದ್ದಾರೆ ಎಂದು ಹರಿಪ್ರಸಾದ್ ಹೇಳಿದ್ದರು. ಹರಿಪ್ರಸಾದ್ ಚಡ್ಡಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಂಎಲ್ಸಿ ಬಿಕೆ ಹರಿಪ್ರಸಾದ್ ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಬಿಕೆ ಹರಿಪ್ರಸಾದ್ ಅವರು ಬಿಜೆಪಿಗೆ ಬೈದಿದ್ದಾರೆ. ಎಲ್ಲ ಮಾತಾಡಿ ಕೊನೆಗೆ ಬಿಜೆಪಿಗೆ ಬೈದರು. ಬಿಕೆ ಹರಿಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ನಲ್ಲಿ ಮಸಲತ್ತು ಮಾಡುತ್ತಿದ್ದಾರೆ. ಮಸಲತ್ತು ಮಾಡುತ್ತಿರುವವರ ವಿರುದ್ಧ ಬಿಕೆ ಹರಿಪ್ರಸಾದ್ಗೆ ಮಾತನಾಡುವ ತಾಕತ್ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಬಿಕೆ ಹರಿಪ್ರಸಾದ್ ಅವರನ್ನು ಈಡಿಗ ಸಮುದಾಯ ಗುರುತಿಸಿದೆ. ಅದರ ವಿರುದ್ಧ ಸಿದ್ದರಾಮಯ್ಯ ಸಮಾವೇಶ ಮಾಡುತ್ತಿದ್ದಾರೆ. ಅವರು ಎಷ್ಟು ಪುಟೀತಾರೆ ನೋಡಿ ಮುಂದೆ ಮಾತಾಡೋಣ ಎಂದು ಹೇಳಿದರು.
ಸರ್ಕಾರದಲ್ಲಿ ಜಗಳ, ಪರಸ್ಪರ ಕೆಸರೆಚಾಟ ಹೆಚ್ಚಾಗಿದೆ. ಇದರಿಂದ ಆಡಳಿತದ ಮೇಲೆ ಪರಿಣಾಮ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ನೀಡುವ ಅಕ್ಕಿ ಬಿಟ್ಟು ಒಂದು ಕಾಳು ಅಕ್ಕಿ ಕೂಡ ರಾಜ್ಯ ಸರ್ಕಾರ ಕೊಟ್ಟಿಲ್ಲ. ಅದನ್ನೇ ಅನ್ನಭಾಗ್ಯ ಅಂತಿದ್ದಾರೆ. ಇದು ಸಿಸಿ (ಕಾಂಪಿಟೇಷನ್ ಇನ್ ಕರಪ್ಷನ್) ಸರ್ಕಾರ. ಸರ್ಕಾರ ವಿದ್ಯುತ್ ಕೊಡುತ್ತಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ. ಸರ್ಕಾರ ತನ್ನ ಕಂಟ್ರೋಲ್ ಕಳೆದುಕೊಂಡಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ