ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ರಾಜಕೀಯ ಮಾಡ್ತಿದ್ದಾರೆ: ಡಿಕೆ ಬ್ರದರ್ಸ್​ಗೆ ಕುಟುಕಿದ ಹೆಚ್​ಡಿ ಕುಮಾರಸ್ವಾಮಿ

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ರಾಜಕೀಯ ಮಾಡ್ತಿದ್ದಾರೆ: ಡಿಕೆ ಬ್ರದರ್ಸ್​ಗೆ ಕುಟುಕಿದ ಹೆಚ್​ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ

ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡ್ತೇವೆ ಎಂದಿದ್ದಾರೆ ಅವರು. ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಂಕಾರದ ಮಾತಲ್ಲ. ಅವರ ನಡವಳಿಕೆಗಳನ್ನ‌ ಅರ್ಥ ಮಾಡಕೊಂಡಿದ್ದೇನೆ ಎಂದರು.

TV9kannada Web Team

| Edited By: ganapathi bhat

Jan 28, 2022 | 4:55 PM

ರಾಮನಗರ: ಈ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕರೂ ಆದ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಕುಟುಕಿದರು. ಚನ್ನಪಟ್ಟದಲ್ಲಿ ಇಂದು ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಅವರು ಕುಮಾರಸ್ವಾಮಿಯನ್ನು ರಾಮನಗರದಿಂದ ಖಾಲಿ ಮಾಡಿಸಬೇಕಂತೆ. ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ರಾಮನಗರ ಜಿಲ್ಲೆಗೂ ನನಗೂ ಇರುವ ಸಂಬಂಧ ಸಾವಿರಾರು ಬಾರಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ಅವರು ಹಣದ ಮೂಲಕ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನು ಬಗ್ಗುಬಡಿಯಲು ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಈ ಜಿಲ್ಲೆಯ ಜನರಿಗೂ ದೇವೇಗೌಡರ ಕುಟುಂಬಕ್ಕೆ ಪೂರ್ವ ಜನ್ಮದ ಸಂಬಂಧ ಇದೆ. ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡ್ತೇವೆ ಎಂದಿದ್ದಾರೆ ಅವರು. ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಂಕಾರದ ಮಾತಲ್ಲ. ಅವರ ನಡವಳಿಕೆಗಳನ್ನ‌ ಅರ್ಥ ಮಾಡಕೊಂಡಿದ್ದೇನೆ ಎಂದರು.

ಪುಟ್ಟರಾಜು & ಸಿದ್ದರಾಮಯ್ಯ ಭೇಟಿ ಬಗ್ಗೆ ಗೊತ್ತಿಲ್ಲ

ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗುತ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್ ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದು ಮಾಜಿ ಸಿಎಂ ತಿಳಿಸಿದರು.

ಇಬ್ರಾಹಿಂ ನಮ್ಮವರು

ಸಿ.ಎಂ.ಇಬ್ರಾಹಿಂ ಅವರು ನಮಗೆ ಹಳಬರು, ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ನಾನು ಜೆಡಿಎಸ್ ಸೇರ್ತೇನೆಂದು ಸ್ವತಃ ಅವರೇ ಹೇಳಿದ್ದಾರೆ. ಅವರಿಗೆ ನಾನು ಸ್ವಾಗತ ಮಾಡುತ್ತೇನೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ

ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ. ಆ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ. ಅವರು ಈಗಾಗಲೇ ದೊಡ್ಡ ದೊಡ್ಡ ಜಾಹಿರಾತುಗಳ ಮೂಲಕ ಅವರ ಪ್ರಚಾರ ಪಡೆಯುತ್ತಿದ್ದಾರೆ. ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ ಯಾರೂ ನೋಡುತ್ತಿಲ್ಲ. ಈ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ ಎಂದ ಮಾಜಿ ಮುಖ್ಯಮಂತ್ರಿಗಳು; 2023 ಕ್ಕೆ ಯಾರ ಜೊತೆಗೂ ಮೈತ್ರಿ ಇಲ್ಲ. 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇದೆ. ಕೋವಿಡ್ ವಾತವರಣ ಮುಗಿದ ನಂತರ ಮುಂದಿನ ಒಂದು ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾದುತ್ತೇವೆ. ಜೆಡಿಎಸ್ ಮುಗಿದೇ ಹೋಯ್ತು ಅನ್ನುವರಿಗೆ ಜನ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಕೆಲಸ ಮಾಡ್ತಿದೆ ಕೇಂದ್ರ ಸರಕಾರ: ಹೆಚ್​ಡಿ ಕುಮಾರಸ್ವಾಮಿ ಕಿಡಿ

ಇದನ್ನೂ ಓದಿ: ಸಿಎಂ ಇಬ್ರಾಹಿಂ ಜೆಡಿಎಸ್​​ಗೆ ಬರುವುದಾದರೆ ಅವರಿಗೆ ಸ್ವಾಗತವಿದೆ: ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada