ಬೆಂಗಳೂರು, ಡಿಸೆಂಬರ್ 29: ಕಾಂಗ್ರೆಸ್ನವರು (Congress) ಮಾತು ಎತ್ತಿದರೆ ಚುನಾವಣೆ ಗೆಲ್ಲಲು ಜಾತಿಗೊಂದು ಡಿಸಿಎಂ ಗುಂಗಿನಲ್ಲೇ ಇದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಮೂರು ಶಾಸಕರಿಗೆ ಹುದ್ದೆಯ ಅದ್ಭುತವಾದ ತೀರ್ಮಾನ ಮಾಡಿದ್ದಾರೆ. ದಾಖಲೆಯ ಬಜೆಟ್ ಮಂಡಿಸಿದ ಸಿಎಂಗೆ ಆರ್ಥಿಕ ಸಲಹೆಗಾರರ ನೇಮಕ ಮಾಡಿದ್ದಾರೆ. ವಿಶ್ವದ ದೊಡ್ಡ ಆರ್ಥಿಕ ತಜ್ಞರು ಅವರು. ಸರ್ಕಾರದ ಈ ರೀತಿಯ ತೀರ್ಮಾನಗಳು ಏನು ಸೂಚಿಸುತ್ತವೆ? ಅದೇನು ಗಂಜಿ ಕೇಂದ್ರಗಳಾ ಎಂದು ಟೀಕಿಸಿದ್ದಾರೆ.
25 ವರ್ಷ ಮಂತ್ರಿಯಾಗಿಯೇ ಇದ್ದ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ವಿಜಯ ಭಾಸ್ಕರ್ ವರದಿ ಎಲ್ಲಿ ಹಾಕಿದ್ದೀರಿ ಎಂಬುದನ್ನು ಸ್ಪಲ್ಪ ಜನರ ಮುಂದಿಡಿ. ಪಾಪ ಈಗ ತೆಗೆದುಕೊಂಡು ಹೋಗಿ ಅವರನ್ನು ಅಲ್ಲಿ ಕೂರಿಸಿ ಯಾವ ವರದಿ ತಯಾರು ಮಾಡ್ತೀರಿ? ವಿಧಾನಸೌಧದಲ್ಲಿ ಮಾಡಬಾರದ್ದು ಮಾಡಿ ಲೂಟಿ ಹೊಡೆದು ಈಗ ದೇಶಪಾಂಡೆ ಕೈಯಲ್ಲಿ ಏನು ವರದಿ ತಯಾರು ಮಾಡಿಸ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಆರ್ ಪಾಟೀಲ್ ಅವರನ್ನು ರಾಜಕೀಯ ಸಲಹೆಗಾರರಾಗಿ ಮಾಡಿದ್ದಾರೆ. ಸಿದ್ದರಾಮಯ್ಯಗಿಂತ ಹೆಚ್ಚಿನ ರಾಜಕೀಯ ಅನುಭವ ಪಾಟೀಲ್ಗೆ ಇದ್ಯಾ? ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಿಂದ ಎತ್ತಂಗಡಿ ಮಾಡಿಸುವ ರಾಜಕೀಯ ಸ್ಟ್ರಾಟಜಿಯನ್ನು ಬಿಆರ್ ಪಾಟೀಲ್ ಬಂದು ಹೇಳಿಕೊಟ್ಟಿದ್ರಾ? ಅಹಿಂದ ರಾಜಕಾರಣದ ಐಕಾನ್ ಸಿದ್ದರಾಮಯ್ಯ. ಸಿದ್ದರಾಮಯ್ಯಗಿಂತ ರಾಜಕೀಯ ಅನುಭವದವರು ಬೇರೆ ಇದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಣ್ಣ ಅವರೇ ಬಿ.ಆರ್. ಪಾಟೀಲ್ ಅವರನ್ನು ಈಗ ಸಲಹೆಗಾರರನ್ನು ಮಾಡಿಕೊಂಡಿದ್ದಕ್ಕೆ ನಿಮಗೆ ಹ್ಯಾಟ್ಸಾಫ್. ಎಲ್ಲಾ ಗುಡಿಸಿ ತೊಳೆದು ಈಗ ಆಡಳಿತ ಸುಧಾರಣೆ ಮಾಡುತ್ತಾರಂತೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ತೀರ್ಮಾನಗಳಿಗೆ ನಾವೇನೂ ಅಸೂಯೆ ಪಡುವ ಅಗತ್ಯವಿಲ್ಲ. ಜನರಿಗೆ ‘ನುಡಿದಂತೆ ನಡೆದಿದ್ದೇವೆ’ ಎಂದು ನೆನಪು ಮಾಡಲು ಪಡುತ್ತಿರುವ ಸಾಹಸ ನೋಡಿದಾಗ ಅನುಕಂಪ ಮೂಡುತ್ತದೆ. ಪ್ರತಿನಿತ್ಯ ಇಷ್ಟೊಂದು ಸಲ ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳಿಕೊಳ್ಳುವ ಅಗತ್ಯವಿರಲಿಲ್ಲ. ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿದ್ದನ್ನು ಪ್ರಚಾರ ಮಾಡಲು ಹೋಗಿರಲಿಲ್ಲ. ನಾನು ಪ್ರಚಾರಕ್ಕೆ ಸರ್ಕಾರದ ಹಣ ದುಂದುವೆಚ್ಚ ಮಾಡಿರಲಿಲ್ಲ. ಈ ಸರ್ಕಾರ 5 ಗ್ಯಾರಂಟಿ ಭಜನೆ ಬಿಟ್ಟರೆ ಇನ್ನೇನು ಮಾಡಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ನಾಡಿನ ಜನತೆಯ ಪರ ನಿಲ್ಲುತ್ತೇನೆ. ನಾನೇನೂ ಪಲಾಯನವಾದ ಮಾಡಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ತೋರಿಸಿದ್ದ ಮುತುವರ್ಜಿ ನಾಡಿನ ಅಭಿವೃದ್ಧಿಗೆ ತೋರಿಸಿದೆಯಾ? ಸಚಿವರು ಬರಗಾಲದ ಹೇಳಿಕೆಗೆ ಸೀಮಿತವಾಗಿದ್ದಾರೆ ಹೊರತು ಕಾರ್ಯಕ್ರಮ ಕಾಣುತ್ತಿಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ದೂರು ಹೇಳುವುದು ಅಷ್ಟೇ ನೋಡಿದ್ದೇನೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಇದನ್ನೂ ಓದಿ: ಬೆಳ್ಳಂ ಬೆಳಿಗ್ಗೆ ಜೋಶಿ ಮನೆಗೆ ಈಶ್ವರಪ್ಪ ಭೇಟಿ, ಹಾಸ್ಯ ಚಟಾಕಿ ಹಾರಿಸಿದ ಕೇಂದ್ರ ಸಚಿವ
2 ಇಲಾಖೆಗಳ ನಡುವೆ ಜಟಾಪಟಿ ಬೇರೆ ಶುರು ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಟನಲ್ ರೋಡ್ ಮಾಡೋಕೆ ಇವರಿಗೆ ಸಮಯ ಇದ್ಯಾ? ಪ್ರತಿ ನಿತ್ಯ ಗೃಹ ಲಕ್ಷ್ಮೀ ಸರ್ವರ್ ಕೆಟ್ಟೋಯ್ತು ಅಂತಾರೆ. ಕಂದಾಯ ಇಲಾಖೆ ಸರ್ವರ್ ಹೇಗಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ