ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ: ಪರೋಕ್ಷವಾಗಿ ಯತ್ನಾಳ್ ವಿರುದ್ಧ ಗುಡುಗಿದ ವಿಜಯೇಂದ್ರ

ರಾಜಕೀಯ ‌ಕ್ಷೇತ್ರದಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್, ಯಡಿಯೂರಪ್ಪ ಇವರೆಲ್ಲಾ ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದವರು. ಆದರೆ ಯಾರೂ ಕೂಡ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಲಿಲ್ಲ. ಇದು ವೀರಶೈವ ಲಿಂಗಾಯತ ಸಮಾಜದ ವಿಶೇಷತೆ ಎಂದು ವಿಜಯೇಂದ್ರ ಹೇಳಿದರು.

ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ: ಪರೋಕ್ಷವಾಗಿ ಯತ್ನಾಳ್ ವಿರುದ್ಧ ಗುಡುಗಿದ ವಿಜಯೇಂದ್ರ
ಬಸನಗೌಡ ಪಾಟೀಲ್ ಯತ್ನಾಳ್ & ಬಿವೈ ವಿಜಯೇಂದ್ರ
Follow us
| Updated By: ಗಣಪತಿ ಶರ್ಮ

Updated on: Dec 30, 2023 | 2:52 PM

ವಿಜಯಪುರ, ಡಿಸೆಂಬರ್ 30: ಕೆಲವರು ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ವಿಜಯಪುರ ಭೇಟಿ ವೇಳೆ ಶನಿವಾರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ಬಣಜಿಗ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವರು ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಿದರು. ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ನಾನು ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಕೆಲವರು ಬಹಳ ಪ್ರಯತ್ನಿಸಿದರು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು, ಕಟ್ಟುವ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಬಸನಗೌಡ ಯತ್ನಾಳ್ ವಿರುದ್ಧ ಗುಡುಗಿದರು.

ರಾಜಕೀಯ ‌ಕ್ಷೇತ್ರದಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್, ಯಡಿಯೂರಪ್ಪ ಇವರೆಲ್ಲಾ ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದವರು. ಆದರೆ ಯಾರೂ ಕೂಡ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಲಿಲ್ಲ. ಇದು ವೀರಶೈವ ಲಿಂಗಾಯತ ಸಮಾಜದ ವಿಶೇಷತೆ ಎಂದು ವಿಜಯೇಂದ್ರ ಹೇಳಿದರು.

ಬಣಜಿಗ ಸಮಾಜ ಸರ್ವ ಜನಾಂಗದ ಹಿತ ಬಯಸುತ್ತದೆ. ಐತಿಹಾಸಿಕ‌ ಹಿನ್ನೆಲೆ ಬಸವಣ್ಣನ ಕಾಯಕ ತತ್ವಕ್ಕೆ ನೆರಳಾಗಿ ಸಮಾಜ ನಿಂತಿದೆ. ಬಸವಾದಿಶರಣರ ರಾಯಭಾರಿಯಂತೆ ನಡೆದುಕೊಳ್ಳುವ ಸಮಾಜ ಇದು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಿ ಬರ್ತೇನೆ ಅಂತಾ ಅಂದುಕೊಂಡಿರಲಿಲ್ಲ. ಮನೆ ಮಗನಂತೆ ರಾಜ್ಯದ ತಾಯಂದಿಯರು ಆಶೀರ್ವಾದ ಮಾಡಿದರು. ಶಿಕಾರಿಪುರ ಶಾಸಕನಾಗಿ, ರಾಜ್ಯಾಧ್ಯಕ್ಷನಾಗಿ ಇಲ್ಲಿ ಬರಲು ನೀವೆಲ್ಲಾ ಕಾರಣ ಎಂದು ಬಣಜಿಗ ಸಂಘಟನಾ ಸಮಾವೇಶದಲ್ಲಿ ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ: ಯತ್ನಾಳ್​ಗೆ ಪ್ರಲ್ಹಾದ್ ಜೋಶಿ ಪಾಠ

ಈ ಮಧ್ಯೆ, ವಿಜಯೇಂದ್ರ ಸ್ವಾಗತಕ್ಕೆ ವಿಜಯಪುರ ನಗರದಲ್ಲಿ ಹಾಕಲಾಗಿದ್ದ ಬ್ಯಾನರ್, ಪೋಸ್ಟರ್​​ಗಳಲ್ಲಿ ಯತ್ನಾಲ್ ಫೋಟೋಗೆ ಕೋಕ್ ನೀಡಲಾಗಿದೆ. ಬಣಜಿಗ ಸಮಾಜದ ಸಂಘಟನಾ ಸಮಾವೇಶದ ಬಳಿಕ ವಿಜಯಪುರ ನಗರಕ್ಕೆ ವಿಜಯೇಂದ್ರ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೈಕ್ ರಾಲಿಯ ಮೂಲಕ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ. ಬಬಲೇಶ್ವರ ರಸ್ತೆಯಿಂದ ಬಿಜೆಪಿ ಕಚೇರಿ ವರೆಗೂ ಬೈಕ್ ರ್ಯಾಲಿ ನಡೆಯಲಿದೆ. ಬೈಕ್ ರ್ಯಾಲಿ ಸಾಗುವ ಮಾರ್ಗದುದ್ದಕ್ಕೂ ಬ್ಯಾನರ್ಗಳು ಪೋಸ್ಟರ್ಗಳು ರಾರಾಜಿಸುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ