ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ 11 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ, ಏನಿದರ ಮರ್ಮ?
Lok Sabha Elections: ಕಾಂಗ್ರೆಸ್ ಪಕ್ಷವು ಸಚಿವರನ್ನು ಲೋಕಸಭೆ ಅಖಾಡಕ್ಕೆ ಇಳಿಸುವ ಯೋಜನೆ ಮಾಡಿದ್ದೇ ಬಿಜೆಪಿಯ ತಂತ್ರಗಾರಿಕೆಯನ್ನ ನೋಡಿ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ಸಚಿವರನ್ನೇ ಸ್ಪರ್ಧೆಗೆ ಇಳಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿಯ ಕೇಂದ್ರ ಸಚಿವರು ಸ್ಪರ್ಧೆ ಮಾಡಿದ್ದರು.
ಬೆಂಗಳೂರು, ಡಿಸೆಂಬರ್ 30: ಲೋಕಸಭೆ ಚುನಾವಣೆಗೆ (Lok Sabha Elections) ಕೆಲವೇ ತಿಂಗಳು ಬಾಕಿ ಇದೆ. ಕಾಂಗ್ರೆಸ್ (Congress) ಈಗಿನಿಂದಲೇ ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದೆ. ಬಿಜೆಪಿ ಹಾಕಿದ ಮಂತ್ರವನ್ನೇ ತಿರುಮಂತ್ರ ಮಾಡಿ ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಸಜ್ಜಾಗಿದೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಕರ್ನಾಟಕದಲ್ಲಿ ಬಿಜೆಪಿಗೆ ಹೊಡೆತ ಕೊಡಬೇಕು ಎಂಬ ತಂತ್ರ ಹಾಕಿಕೊಂಡಿರುವ ಕಾಂಗ್ರೆಸ್, ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದರ ಭಾಗವಾಗಿ ರಾಜ್ಯದ ಬರೋಬ್ಬರಿ 11 ಸಚಿವರನ್ನು ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ತಂತ್ರವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್!
ಕಾಂಗ್ರೆಸ್ ಪಕ್ಷವು ಸಚಿವರನ್ನು ಲೋಕಸಭೆ ಅಖಾಡಕ್ಕೆ ಇಳಿಸುವ ಯೋಜನೆ ಮಾಡಿದ್ದೇ ಬಿಜೆಪಿಯ ತಂತ್ರಗಾರಿಕೆಯನ್ನ ನೋಡಿ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ಸಚಿವರನ್ನೇ ಸ್ಪರ್ಧೆಗೆ ಇಳಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿಯ ಕೇಂದ್ರ ಸಚಿವರು ಸ್ಪರ್ಧೆ ಮಾಡಿದ್ದರು. ಪರಿಣಾಮವಾಗಿ ಬಿಜೆಪಿ ಮೂರು ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಿ, ಅಧಿಕಾರಕ್ಕೆ ಏರಲು ನೆರವಾಗಿತ್ತು. ಇದೀಗ ಬಿಜೆಪಿಯ ಇದೇ ತಂತ್ರವನ್ನು ಕಾಂಗ್ರೆಸ್ ರಾಜ್ಯದಲ್ಲಿ ಬಳಸಲು ಮುಂದಾಗಿದೆ. ಹೀಗಾಗೇ ಕಠಿಣ ಎಂದು ಭಾವಿಸಲಾಗಿರುವ ಕ್ಷೇತ್ರಗಳಲ್ಲಿ ಪ್ರಭಾವಿ ಸಚಿವರನ್ನೇ ಇಳಿಸಲು ಮುಂದಾಗಿದೆ.
ಯಾವ ಕ್ಷೇತ್ರದಿಂದ ಯಾರು ಕಣಕ್ಕೆ?
ಅದರಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ತುಮಕೂರು ಲೋಕಸಭಾ ಕ್ಷೇತ್ರದಿಂದ ಕೆ.ಎನ್.ರಾಜಣ್ಣ. ಹಾಗೂ ಚಾಮರಾಜನಗರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಹೆಚ್.ಸಿ.ಮಹದೇವಪ್ಪ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಇನ್ನು ತೀವ್ರ ಜಿದ್ದಿನಿಂದ ಕೂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಗಮಂಗಲ ಶಾಸಕ ಕಂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸ್ಪರ್ಧೆ ಮಾಡೋ ಸಾಧ್ಯತೆ ಇದೆ ಎನ್ನಲಾಗಿದ್ರೆ, ಬಳ್ಳಾರಿಯಿಂದ ಸಚಿವ ಬಿ.ನಾಗೇಂದ್ರ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾರ್ಮಿಕಿ ಸಚಿವ ಸಂತೋಷ್ ಲಾಡ್ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೋಲಾರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಅನ್ನೋ ಚರ್ಚೆ ನಡೀತಿದ್ದು. ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಇಬ್ಬರಲ್ಲಿ ಯಾರು ಯಾವ ಕಡೆ ಸ್ಪರ್ಧಿಸಬೇಕು ಅನ್ನೋ ಚರ್ಚೆ ನಡೀತಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರನ್ನು ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಸುವ ಹಿಂದೆ ಕಾಂಗ್ರೆಸ್ ಹೈಕಮಾಂಡ್ನ ಮಂತ್ತೊಂದು ತಂತ್ರ ಅಡದಿದೆ ಎನ್ನಲಾಗಿದೆ.
ಹೈಕಮಾಂಡ್ ಲೆಕ್ಕಾಚಾರವೇನು?
ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಚಿವರ ವರ್ಚಸ್ಸು ಬಳಸಿಕೊಳ್ಳುವುದು ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗುತ್ತಿದೆ. ಸಚಿವರು ಗೆದ್ದು ಲೋಕಸಭೆ ಪ್ರವೇಶ ಮಾಡಿದರೆ ಇಲ್ಲಿ ಸಚಿವ ಸ್ಥಾನ ಖಾಲಿ ಆಗುತ್ತದೆ. ಆಗ ಖಾಲಿ ಇರುವ ಸಚಿವ ಸ್ಥಾನವನ್ನು ಇನ್ನಿತರ ಆಕಾಂಕ್ಷಿಗಳಿಗೆ ಹಂಚಬಹುದು ಎಂಬ ಲೆಕ್ಕಾಚಾರವನ್ನೂ ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಂಡಿದೆ. ಈ ಮಧ್ಯೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ 10 ಸಚಿವರನ್ನು ಪಟ್ಟಿ ಮಾಡುವಂತೆ ಸೂಚನೆ ನೀಡಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಚಿವರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ.
ಕೆ.ಎನ್.ರಾಜಣ್ಣ, ಬಿ.ನಾಗೇಂದ್ರ ಸ್ಪರ್ಧೆಗೆ ಈಗಾಗಲೇ ಉತ್ಸುಕತೆ ತೋರಿಸಿದ್ದಾರೆ. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ ಹೈಕಮಾಂಡ್ ಹೇಳಿದರೆ ಒಪ್ಪಿಕೊಳ್ಳುತ್ತಾರೆ. ಸತೀಶ್ ಜಾರಕಿಹೊಳಿ 2021 ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಹೀಗಾಗಿ ಈ ಬಾರಿ ಸತೀಶ್ ಜಾರಕಿಹೊಳಿ ಪುತ್ರನಿಗೆ ಲೋಕಸಭೆ ಟಿಕೆಟ್ ಕೇಳೋ ಸಾಧ್ಯತೆ ಇದೆ. ಸಚಿವ ಮಹದೇವಪ್ಪ, ಮುನಿಯಪ್ಪ ಸಹ ತಮ್ಮ ಪುತ್ರನಿಗೆ ಟಿಕೆಟ್ ಕೇಳ್ತಿದ್ದಾರೆ. ರಾಮಲಿಂಗಾರೆಡ್ಡಿ ಸಹ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಟಿಕೆಟ್ ಕೇಳೋ ಸಾಧ್ಯತೆ ಇದೆ.
ಇದನ್ನೂ ಓದಿ: ನಿಗಮ ಮಂಡಳಿ: ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ; ಸಂಕ್ರಾಂತಿಯೊಳಗೆ ನೇಮಕ- ಡಿಕೆ ಶಿವಕುಮಾರ್
ಈ ಮಧ್ಯೆ, ಕಾಂಗ್ರೆಸ್ನ ಆಂತರಿಕ ಸಮೀಕ್ಷೆ ಮಾಡಿಸಿದ್ದು, ಲೋಕಸಭೆ ವಿಚಾರವಾಗಿ ಇನ್ನೂ ಪಾಸಿಟಿವ್ ರಿಸಲ್ಟ್ ಬಂದಿಲ್ಲ. ಸಮೀಕ್ಷೆಯಲ್ಲಿ ನಿರೀಕ್ಷಿತ ಗುರಿ ಮಟ್ಟದ ಕಾರಣಕ್ಕಾಗಿ, ಸಚಿವರು ಸ್ಪರ್ಧೆ ಮಾಡಿದ್ರೆ ಕನಿಷ್ಠ 10-13 ಕ್ಷೇತ್ರಗಳಲ್ಲಿ ಪೈಪೋಟಿ ನೀಡಬಹುದು ಎಂಬ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ