ಈ ಬಾರಿ ಲೋಕಸಭೆಗೆ ಕುಮಾರಸ್ವಾಮಿ ಸ್ಪರ್ಧಿಸುವ ಸುಳಿವು ನೀಡಿದ ದೇವೇಗೌಡ, ಯಾವ ಕ್ಷೇತ್ರದಿಂದ?

| Updated By: ರಮೇಶ್ ಬಿ. ಜವಳಗೇರಾ

Updated on: Feb 09, 2024 | 6:10 PM

ಈ ಬಾರಿ ಲೋಕಸಭಾ ಚುನಾವಣೆ ಸಂಬಂಧ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಯಾರಿಗೆ ಯಾವ ಕ್ಷೇತ್ರ ಎನ್ನುವ ಸೀಟು ಹಂಚಿಕೆ ಬಗ್ಗೆ ಮಾತುಕತೆಗಳು ನಡೆದಿವೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದೇ ವಿಚಾರವಾಗಿ ಇದೀಗ ಜಿಟಿ ದೇವೇಗೌಡ ಎಚ್​ಡಿಕೆ ಸ್ಪರ್ಧಿಸುವ ಬಗ್ಗೆ ಸ್ಫೋಟಕ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜೆಡಿಎಸ್, ಬಿಜೆಪಿ ಬಳಿ ಯಾವೆಲ್ಲಾ ಕ್ಷೇತ್ರಗಳಿಗೆ ಬೇಡಿಕೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇನ್ನು ಸುಮಲತಾ ನಡೆಬಗ್ಗೆಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಾರಿ ಲೋಕಸಭೆಗೆ ಕುಮಾರಸ್ವಾಮಿ ಸ್ಪರ್ಧಿಸುವ ಸುಳಿವು ನೀಡಿದ ದೇವೇಗೌಡ, ಯಾವ ಕ್ಷೇತ್ರದಿಂದ?
ಎಚ್​ಡಿ ಕುಮಾರಸ್ವಾಮಿ
Follow us on

ಹುಬ್ಬಳ್ಳಿ, (ಫೆಬ್ರವರಿ 09): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Loksabha Elections 2024) ರಾಜಕೀಯ ಗರಿಗೆದರಿದ್ದು, ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ (BJP And JDS Alliance) ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನು ಮಕಾಡೆ ಮಲಗಿಸುವ ತಂತ್ರರೂಪಿಸುತ್ತಿವೆ. ಆದ್ರೆ, ಜೆಡಿಎಸ್​ಗೆ ಯಾವೆಲ್ಲಾ ಕ್ಷೇತ್ರ ಎನ್ನುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಇದರ ಮಧ್ಯೆ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ(HD Kumaraswamy) ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜಿಟಿ ದೇವೇಗೌಡ(GT Devegowda) ಸುಳಿವು ನೀಡಿದ್ದಾರೆ. ಇದರೊಂದಿಗೆ ಕುಮಾರಸ್ವಾಮಿ ಈ ಬಾರಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕೇಂದ್ರದ ಮಂತ್ರಿಯಾಗುತ್ತಾರೆ ಎಂಬ ಚರ್ಚೆಗಳಿಗೆ ರೆಕ್ಕೆಪುಕ್ಕಗಳು ಬಂದಂತಾಗಿವೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ, ದೇವೇಗೌಡರ ಕುಟುಂಬದಿಂದ ಇಬ್ಬರು ಅಭ್ಯರ್ಥಿಗಳು ಆಗಬಹುದು. ಕುಮಾರಸ್ವಾಮಿ,  ಪ್ರಜ್ವಲ್ ರೇವಣ್ಣ ಇಬ್ಬರು ಅಭ್ಯರ್ಥಿಗಳಾಗಬಹದು. ಇನ್ನು ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ ಎಂದು ಹೇಳಿದರು. ಈ ಮೂಲಕ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಸ್ಪರ್ಧಿಸಿದರೆ, ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾದಂತಾಗಿದೆ. ಇನ್ನು  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎನ್ನುವ ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ.

ಇದನ್ನೂ ಓದಿ: ಮೋದಿ ಭೇಟಿಯಾದ ಸುಮಲತಾ ಅಂಬರೀಶ್, ಪ್ರಧಾನಿ ಮಾತಿಗೆ ಸಂಸದೆ ಫುಲ್ ಖುಷ್

ಬಿಜೆಪಿ ಸಿದ್ಧಾಂತ ಜೆಡಿಎಸ್​ನೊಳಗೆ ಬಿಟ್ಟುಕೊಳ್ಳಲ್ಲ

ಇನ್ನು ಮಂಡ್ಯದಲ್ಲಿ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಕುಮಾರಸ್ವಾಮಿಗೆ ಅವತ್ತು ಭಕ್ತ ಬಂದು ಕೇಸರಿ ಶಾಲು ಹಾಕಿದ್ದ. ಕೇಸರಿ ಏನೂ ಬಿಜೆಪಿಯ ಸಿಂಬಲ್ ಅಲ್ಲ. ಕುಮಾರಸ್ವಾಮಿ ಬಿಜೆಪಿಯ ಸಿಂಬಲ್ ಇರುವುದು ಹಾಕಿಲ್ಲ. ಅದು ಆಂಜನೇಯನ ಧ್ವಜ.. ನಮ್ಮ ಪಕ್ಷದ ತತ್ವ ಸಿದ್ದಾಂತ ಬೇರೆ. ಬಿಜೆಪಿ ತತ್ವ ಸಿದ್ದಾಂತ ಬೇರೆ. ಮೋದಿ ಕಾರಣಕ್ಕೆ ನಾವು ಹೊಂದಾಣಿಕೆ ಆಗಿರುವುದು. ಬಿಜೆಪಿಯ ಯಾವ ತತ್ವ ಸಿದ್ದಾಂತವನ್ನು ನಾವು ಜೆಡಿಎಸ್ ಪಕ್ಷದ ಒಳಗಡೆ ಬಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆರು ಕ್ಷೇತ್ರ ಕೇಳಿದ್ದೇವೆ ಎಂದ ಜಿಟಿ ದೇವೇಗೌಡ

ಬಿಜೆಪಿ, ಜೆಡಿಎಸ್​ ಜೊತೆಗೂಡಿ 28 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. 28 ಲೋಕಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಕೇಳಲು ಹೇಳಿದ್ದೇವೆ. ತುಮಕೂರು, ಹಾಸನ, ಮಂಡ್ಯ, ಮೈಸೂರು-ಕೊಡಗು, ಕೋಲಾರ ಸೇರಿ ಆರು ಕ್ಷೇತ್ರ ಕೇಳಿದ್ದೇವೆ ಎಂದು ಬಹಿರಂಗಪಡಿಸಿದ ಜಿಟಿ ದೇವೇಗೌಡ, ಲೋಕಸಭೆಯಷ್ಟೇ ಅಲ್ಲ, ವಿಧಾನಸಭೆ ಚುನಾವಣೆಗೂ ಮೈತ್ರಿ ಆಗಬೇಕು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Lok Sabha Elections: ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ನಾಯಕತ್ವ ಪಟ್ಟು

ಸುಮಲತಾ ಕಾಂಗ್ರೆಸ್​ಗೆ ಹೋಗಬಹುದು ಎಂದ ಜಿಟಿಡಿ

ಮಂಡ್ಯ ಲೋಕಸಭಾ ಕ್ಷೇತ್ರ ತಮಗೆ ಸಿಗಲಿದೆ ಎಂದು ಖಚಿತಪಡಿಸಿರುವ ಜಿಟಿ ದೇವೇಗೌಡ, ಸುಮಲತಾ ಅಂಬರೀಶ್ ಅವರು ಜಾಂಗ್ರೆಸ್​​ಗೆ ಹೋಗಬಹುದು ಎಂದು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ನಾರಾಯಣಗೌಡ(ಬಿಜೆಪಿ ನಾಯಕ) ಇದೀಗ ಸಿದ್ದರಾಮಯ್ಯ ಮನೆಯಲ್ಲಿ ಕೂತಿದ್ದಾರೆ. ಹಾಗಾಗಿ ಸುಮಲತಾ ಕಾಂಗ್ರೆಸ್ ಗೆ ಹೋಗಬಹುದು. ಅಕಸ್ಮಾತ್ ಸುಮಲತಾ ಬಿಜೆಪಿ ಅಭ್ಯರ್ಥಿ ಆದ್ರೆ ಸ್ವಾಗತ ಎಂದು ಮೇಲಿನ ಮಾತಿಗೆ ಹೇಳಿದರು.

ಬಿಜೆಪಿ ನಮ್ಮ ಮೈತ್ರಿ ವಿರೋಧ ಮಾಡಿಲ್ಲ. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ ದಬ್ಬಾಳಿಕೆ ಜಾಸ್ತಿಯಾಗಿದೆ. ಐದು ಗ್ಯಾರಂಟಿ ವಿಫಲವಾಗಿದೆ. ಮೋದಿ ಹಣ ಮಾತ್ರ ಸಲೀಸಾಗಿ ಹೋಗುತ್ತಿದೆ. ಲೋಕಸಭೆ ಅಷ್ಟೆ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು. ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಇದೇ ಸಿದ್ದರಾಮಯ್ಯ ಶಾಸಕರಿಗೆ ಏನ ಕೊಟ್ಟಿದಾರೆ. 224 ಶಾಸಕರಿಗೆ ಕೇವಲ 50 ಲಕ್ಷ ರೂ. ಕೊಟ್ಟಿದಾರೆ. ನಾವು ಯಾರೂ ಸರ್ಕಾರ ತಗೆಯಲ್ಲ. ಅವರ ಭಾರದಿಂದಲೇ ಅದು ಕುಸಿಯಬೇಕು. ಕುಮಾರಸ್ವಾಮಿ ಸರ್ಕಾರ ಯಾರು ತಗೆದರೋ ಹಾಗೆ ಆಗಬಹುದು. ಸರ್ಕಾರ ಬೀಳತ್ತೆ ಎಂದು ಹೇಳೋಕೆ ಆಗಲ್ಲ. ಐದು ವರ್ಷ ಉಳಿಯತ್ತೆ ಅಂತಾನೂ ಹೇಳೋಕೆ ಆಗಲ್ಲ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Fri, 9 February 24