AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದಿಂದ ತೆರಿಗೆ ಅನ್ಯಾಯ: ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡುತ್ತೇನೆ: ಸಿಎಂ ಸವಾಲ್

ಅನುದಾನ, ತೆರಿಗೆ ಪಾಲು ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಇಡೀ ಕಾಂಗ್ರೆಸ್ ಸರ್ಕಾರವೇ ದೆಹಲಿಗೆ ಹೋಗಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದೆ. ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದ್ದು, ಇದರ ಮಧ್ಯೆ ಇದೀಗ ಸಿಎಂ ಸಿದ್ದರಾಮಯ್ಯ, ತಮ್ಮ ಆರೋಪ ಸುಳ್ಳಾದರೆ ರಾಜಕೀಯ ಬಿಡುವ ಸವಾಲನ್ನು ಬಿಜೆಪಿ ನಾಯಕರಿಗೆ ಹಾಕಿದ್ದಾರೆ.

ಕೇಂದ್ರದಿಂದ ತೆರಿಗೆ ಅನ್ಯಾಯ: ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡುತ್ತೇನೆ: ಸಿಎಂ ಸವಾಲ್
ಸಿದ್ದರಾಮಯ್ಯ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Feb 09, 2024 | 4:31 PM

Share

ದಾವಣಗೆರೆ, (ಫೆಬ್ರವರಿ 09): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ(BJP) ನಾಯಕರಿಗೆ ರಾಜಕೀಯ ಬಿಡುವ ಸವಾಲ್ ಹಾಕಿದ್ದಾರೆ. ದಾವಣಗೆರೆ(Davanagere) ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಮರ್ಯಾದೆ ತೆಗೆದಿದ್ದಾರೆ ಎಂದು ಬಿಎಸ್​ವೈ ಹೇಳಿದ್ದಾರೆ. ಹೇಳಿದ್ದಕ್ಕೆಲ್ಲ ಯಡಿಯೂರಪ್ಪ ತಲೆ ಅಲ್ಲಾಡಿಸಿದಂತೆ ನಾನು ತಲೆ ಅಲ್ಲಾಡಿಸ್ಬೇಕಾ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ ಸತ್ಯ. ಒಂದು ವೇಳೆ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹ ಬಿಡುಗಡೆ ಆಗಿಲ್ಲ. ಅಮಿತ್ ಶಾ ಜತೆ ಬಿಜೆಪಿ ನಾಯಕರು ಚರ್ಚಿಸಿ ಬಿಡುಗಡೆ ಮಾಡಿಸಿಲ್ಲ. ಯಡಿಯೂರಪ್ಪ, ಆಶೋಕ್, ಬೊಮ್ಮಾಯಿ, ವಿಜಯೇಂದ್ರ ಹೋಗಿ ಕೇಳಲಿ. ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 100 ರೂಪಾಯಿ ತೆರಿಗೆ ಕೊಟ್ರೆ ನಮಗೆ ಬರುವುದು 12 ರೂ. ಮಾತ್ರ. ನಾವು ಸರಿಯಾಗಿ ಬರ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಗುಳೆ ಹೋಗದ ರೀತಿ ನೋಡಿಕೊಳ್ಳಲು ಡಿಸಿ‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು: ಧ್ವನಿ ಎತ್ತಿದ ಬಿಜೆಪಿ ಶಾಸಕ ಹರೀಶ್ ಪೂಂಜಾ

ರಾಜ್ಯದಿಂದ ನೂರು ರೂಪಾಯಿ ತೆರಿಗೆ ನೀಡಿದ್ರೆ ನಮಗೆ ಬರೊದು 12ರೂಪಾಯಿ ಮಾತ್ರ. ತೆರಿಗೆ ಕೊಡುವುದರಲ್ಲಿ ನಾವು 2 ನೇ ಸ್ಥಾನದಲ್ಲಿದ್ದೇವೆ. ಅದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಬರವನ್ನು ನಾವು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಮೇವು , ಉದ್ಯೋಗ ಕೊಡುತ್ತಿದ್ದೇವೆ. ಇದಕ್ಕಾಗಿಯೇ 850 ಕೋಟಿ ರೂಪಾಯಿ ನಿಧಿ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ತೆರಿಗೆ ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲಿನ ತೆರಿಗೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ. ಅಲ್ದೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಗೆ ತೆರಳಿ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಮಾಡಿತ್ತು. ಈ ಮೂಲಕ ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದೆ.

ಆದ್ರೆ, ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಕಾಂಗ್ರೆಸ್​ ಸರ್ಕಾರದ ಆರೋಪವನ್ನು ಅಲ್ಲಗೆಳೆದಿದೆ. ರಾಜ್ಯದ ತೆರಿಗೆ ಹಣ ಒಂದು ಪೈಸೆ ಸಹ ಬಾಕಿ ಇಟ್ಟುಕೊಂಡಿಲ್ಲ. ಎಲ್ಲವನ್ನೂ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್​ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ., ತೆರಿಗೆ ಹಣದ ಬಗ್ಗೆ ನಾನು ಮಾಡಿದ ಆರೋಪ ಸುಳ್ಳಾದರೆ ರಾಜಕೀಯ ಬಿಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಸವಾಲ್ ಎಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಂಕಿ-ಅಂಶ ದಾಖಲೆ ಬಿಡುಗಡೆ ಮಾಡುತ್ತಾರಾ? ಬಿಜೆಪಿ ನಾಯಕರು ಸಿದ್ದರಾಂಯ್ಯನವರ ಸವಾಲ್​ ಸ್ವೀಕರಿಸುತ್ತಾರಾ? ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ