ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದೆ. ಯಡಿಯೂರಪ್ಪ (BS Yediyurappa) ಎರಡು ವರ್ಷ ಸಿಎಂ ಆಗಿ ಕೆಳಗಿಳಿದಿದ್ದಾಯ್ತು. ಆದ್ರೆ, ಇದೀಗ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(C.M. Ibrahim) ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಇಂದು(ನ.20) ಮಾತನಾಡಿದ ಇಬ್ರಾಹಿಂ, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರು H.D.ದೇವೇಗೌಡರ ಕಾಲಿಗೆ ಬಿದ್ದಿದ್ದರು. ಸಿಎಂ ಮಾಡಿದ 14 ತಿಂಗಳಲ್ಲೇ ಶಾಸಕರನ್ನ ಮುಂಬೈಗೆ ಕಳಿಸಿದ್ರು. ಮುಂಬೈಗೆ ಕಳಿಸಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದರು.
ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ದೇವೆಗೌಡರ ಕಾಲಿಗೆ ಬಿದ್ದು ನಿಮ್ಮ ಮಗನೆ ಮುಖ್ಯಮಂತ್ರಿ ಆಗಲಿ ಎಂದಿದ್ದರು. ಮುಖ್ಯಮಂತ್ರಿ ಮಾಡಿದ 14ತಿಂಗಳಲ್ಲಿ ಶಾಸಕರನ್ನ ಮುಂಬೈಗೆ ಕಳಿಸಿ ಯಡಿಯುರಪ್ಪನ ತಂದಿದ್ದು ಸಿದ್ದರಾಮಯ್ಯ ಎಂದರು.
ಕುಪ್ಪೇಂದ್ರ ರೆಡ್ಡಿಯವರನ್ನ ರಾಜ್ಯಸಭೆಗೆ ಕಳಿಸುವಾಗ ನಮ್ಮ ಎರಡು ಜನ ಶಾಸಕರಿಗೆ 10 ಕೋಟಿ ರೂ. ಕೊಟ್ಟು ವೋಟು ಹಾಕಿಸಿಕೊಂಡಿಲ್ವಾ. ನೀವು ಹಿಂದಗಡೆ ಬಾಗಿಲಿನಿಂದ ಹೋಗಿ ವೇಶ್ಯಾವಾಟಿಕೆ ಮಾಡುತ್ತೀರಿ. ನಾವು ಏನಿದ್ದರೂ ಎದುರಾಬದುರ ರಾಜಕೀಯ ಮಾಡುವವರು ಎಂದು ಕಿಡಿಕಾರಿದರು.
ಕದ್ದು ಮುಚ್ಚಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ಸಿದ್ದರಾಮಯ್ಯಗೆ ಚುನಾವಣೆಗೆ ನಿಲ್ಲಲು ಈವರೆಗೂ ಕ್ಷೇತ್ರ ಸಿಗುತ್ತಿಲ್ಲ. ಸಿದ್ದರಾಮಯ್ಯನವರು ಈಗಲೂ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಚಿಮ್ಮನಕಟ್ಟಿಯವರು ಯಾರ ಬರ್ತಾರೆ ಬರಲಿ ಅಂತಾ ಕುಳಿತಿದ್ದಾರೆ. ಅಂದು ಚಿಮ್ಮನಕಟ್ಟಿ ಒಪ್ಪಿಸಿ ನಾನೇ ಅವನ ಮನೆ ಹಾಳು ಮಾಡಿದೆ. ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿಯನ್ನು ನಾನೇ ಮನವೊಲಿಸಿದ್ದೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ