ಕಲಬುರಗಿ: ನಗರದ ಎನ್.ವಿ ಮೈದಾನದಲ್ಲಿ ನಿನ್ನೆ(ಡಿ.10) ನಡೆದ ಕಲ್ಯಾಣ ಕರ್ನಾಟಕ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರವುದೇ ನೀವು ನನಗೆ ನೀಡುವ ಗೌರವ ಎನ್ನುವ ಮೂಲಕ ವೇದಿಕೆಯ ಮೇಲಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ ಪಾಟೀಲ್ ಸೇರಿದಂತೆ ಅನೇಕ ನಾಯಕರಿಗೆ ಒಗ್ಗಟ್ಟಿನ ಮಂತ್ರವನ್ನು ಹೇಳಿದ್ದಾರೆ. ಮೋದಿ, ಶಾ ಅವರು ಈಗಾಗಲೇ ರಾಜ್ಯದಲ್ಲಿ ಜನರನ್ನ, ನಾಯಕರನ್ನು ಸೆಳೆಯುವ ಕೆಲಸ ಆರಂಭಿಸಿದ್ದಾರೆ. ಈ ಕೆಲಸವನ್ನು ನಮ್ಮ ನಾಯಕರು ಮಾಡಬೇಕು. ಒಂದಾಗಿ ನಡೆಯಬೇಕು ಎನ್ನುವಂತಹ ಸಲಹೆ ನೀಡಿದ್ದಾರೆ. ನಾವು ಕೆಲಸ ಮಾಡದೇ ಇದ್ದರೆ ನಮ್ಮ ಜನರಿಗೆ ಮೋಸ ಮಾಡಿದಂತಾಗುತ್ತದೆ. ಯಾವ ಜನ ನಮ್ಮನ್ನು ನಂಬಿಕೊಂಡು ಅನೇಕ ಬಾರಿ ನಮಗೆ ಸರ್ಕಾರ ಕೊಟ್ಟಿದ್ದಾರೆ. ಆ ಸರ್ಕಾರ ಉಳಿಬೇಕು ಎಂದರೆ ನಾವು ಒಂದಾಗಿ ದುಡಿಯಬೇಕು. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ನಾವೇ ಜಗಳವಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಉಳದಿವೆ. ಈಗಾಗಲೇ ಗುಜರಾತ್ನಲ್ಲಿ ಗೆದ್ದಿರುವ ಕಮಲ ಪಡೆ, ರಾಜ್ಯದಲ್ಲಿ ಕೂಡಾ ಗೆಲವು ಸಾಧಿಸಲು ಅನೇಕ ರೀತಿಯ ತಂತ್ರವನ್ನು ಆರಂಭಿಸಿದೆ. ಮೋದಿ ಮತ್ತು ಅಮಿತ್ ಶಾ ಅವರ ಮುಂದಿನ ಟಾರ್ಗೆಟ್ ಕರ್ನಾಟಕವೇ ಆಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಕನಸನ್ನು ಕೈ ನಾಯಕರು ಕಾಣುತ್ತಿದ್ದಾರೆ. ಆದರೆ ಕೈ ಪಡೆಯಲ್ಲಿರುವ ಬಣ ರಾಜಕೀಯವೇ ಕಾಂಗ್ರೆಸ್ನ್ನು ಅಧಿಕಾರದಿಂದ ದೂರವಿಡುವಂತೆ ಮಾಡುತ್ತದೆ. ಬಣ ರಾಜಕೀಯ ಹೋದರೆ ಕೈಗೆ ಗೆಲುವು ಸಿಗಬಹುದು ಎನ್ನುದನ್ನು ಅನೇಕರು ಹೇಳಿದ್ದಾರೆ. ಆದರೂ ಕೂಡಾ ರಾಜ್ಯದ ಕೈ ಪಡೆಯಲ್ಲಿ ಬಣ ರಾಜಕೀಯ ಕಡಿಮೆಯಾಗಿಲ್ಲ. ಹೀಗೆ ಆದರೆ ರಾಜ್ಯದಲ್ಲಿ ಅಧಿಕಾರ ಬರುವುದು ಕಷ್ಟ ಎನ್ನುವುದನ್ನ ಕಾಂಗ್ರೆಸ್ ಹೈಕಮಾಂಡ್ ಅರಿತಂತಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ವೇದಿಕೆಯ ಮೇಲೆಯೇ ಬಹಿರಂಗವಾಗಿಯೇ ಕೈ ಮುಕಂಡರಿಗೆ ಒಗ್ಗಟ್ಟಿನ ಮಂತ್ರವನ್ನು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಹತ್ತು ಕಾರ್ಯಕ್ರಮ ಕೊಟ್ಟಿದ್ದೇವು. ಅಲ್ಲಿ ನಮ್ಮ ಸರ್ಕಾರ ಬಹುಮತದಿಂದ ಬಂದಿದೆ. ಇದೇ ರೀತಿ ಕರ್ನಾಟಕದಲ್ಲಿ ಕೂಡ ಆಗಲಿ, ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಖರ್ಗೆ ಹೇಳಿದ್ದಾರೆ. ನಾನು ಅವನು ಬೇಡ, ಇವನು ಬೇಡ ಎಂದು ಹೇಳಿಲ್ಲ. ನನಗೆ ಬೇಕಾಗಿರುವುದು ಕಾಂಗ್ರೆಸ್ ಪಾರ್ಟಿ, ಕಾಂಗ್ರೆಸ್ ಸರ್ಕಾರ. ಇಲ್ಲಿ ಯಾರೇ ಆಗಲಿ ಆ ಕೆಲಸವನ್ನು ನಮ್ಮವರು ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಮರಳಿ ಕಾಂಗ್ರೆಸ್ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!
ಬಣ ರಾಜಕೀಯ ಹೀಗೆ ಮುಂದುವರಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಎನ್ನುವುದನ್ನ ಅರಿತಿರುವ ಮಲ್ಲಿಕಾರ್ಜುನ ಖರ್ಗೆ, ಬಹಿರಂಗವಾಗಿಯೇ ತಾನು ಯಾರ ಪರವು ಇಲ್ಲ, ಯಾರ ವಿರುದ್ದವು ಇಲ್ಲ ಎಂದು ಹೇಳುವುದರ ಜೊತೆಗೆ ರಾಜ್ಯದಲ್ಲಿ ಸರ್ಕಾರವನ್ನು ತರುವ ಟಾಸ್ಕ್ನ್ನು ಕೈ ಮುಖಂಡರಿಗೆ ನೀಡಿದ್ದಾರೆ. ಆದರೆ ಖರ್ಗೆ ಅವರ ಮಾತುಗಳನ್ನು ರಾಜ್ಯದ ನಾಯಕರು ಎಷ್ಟರ ಮಟ್ಟಿಗೆ ಗಂಭೀರವಾಗಿ ತಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ