Reservation: ಚುನಾವಣೆ ಹೊತ್ತಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗ, ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಜಾಣ ನಡೆ ಇಟ್ಟ ಬಿಜೆಪಿ ಸರ್ಕಾರ

| Updated By: ರಮೇಶ್ ಬಿ. ಜವಳಗೇರಾ

Updated on: Dec 29, 2022 | 9:07 PM

ಚುನಾವಣೆ ಹೊತ್ತಲ್ಲಿ ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಬಿಜೆಪಿ ಸರ್ಕಾರ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಜಾಣ ನಡೆ ಇಟ್ಟಿದೆ.

Reservation: ಚುನಾವಣೆ ಹೊತ್ತಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗ, ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಜಾಣ ನಡೆ ಇಟ್ಟ ಬಿಜೆಪಿ ಸರ್ಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಪಂಚಮಸಾಲಿ ಹಾಗೂ ಒಕ್ಕಲಿಗರ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಬೊಮ್ಮಾಯಿ ಸರ್ಕಾರ 2ಸಿ ಹಾಗೂ 2ಡಿ ಎಂದು ಎರಡು ಕೆಟಗೆರಿ ರಚಿಸಿದೆ. ಆದ್ರೆ, ಯಾರಿಗೆ ಎಷ್ಟು ಮೀಸಲಾತಿ ಪ್ರಮಾಣ ಎನ್ನುವುದು ತಿಳಿಸದೇ ಘೋಷಣೆ ಮಾಡಿದ್ದು, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಅಲ್ಲದೇ ಬಿಸೋ ದೊಣ್ಣೆಯಿಂದ ಪಾರಾಗುವ ತಂತ್ರ ರೂಪಿಸಿದೆ.

ಇದನ್ನೂ ಓದಿ: Panchamasali Reservation: ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕೆಟಗರಿ ರಚನೆ: ಮೀಸಲಾತಿ ಪರಿಹರಿಸಲು ಬೊಮ್ಮಾಯಿ ಸರ್ಕಾರದ ಹೊಸ ಸೂತ್ರ

ಹೌದು…3Aನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ಹಾಗೂ 3Bನಲ್ಲಿದ್ದ ಲಿಂಗಾಯತರಿಗೆ 2D ಕೆಟಗರಿ ಸೇರಿಸಲು ಸರ್ಕಾರ ತೀರ್ಮಾನಿಸಿದ್ದು, 2Aನಲ್ಲಿರುವ 102 ಪಂಗಡಗಳ ಮೀಸಲಾತಿಗೆ ಯಾವುದೇ ಧಕ್ಕೆ ಆಗಲ್ಲ ಎಂದು ಸರ್ಕಾರ ಸ್ಪಷ್ಟವಾಗಿಯೇ ಹೇಳಿದೆ. ಹಾಗಾದ್ರೆ, ಒಕ್ಕಗಲಿ ಹಾಗೂ ಲಿಂಗಾಯರಿಗೆ ಮೀಸಲಾತಿ ಪ್ರಮಾಣ ಎಷ್ಟು ಎನ್ನುವುದೇ ಇದೀಗ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಚುನಾವಣೆ ಹೊತ್ತಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗ

ಇನ್ನೇನು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಐದು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಎರಡು ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳುವುದು ಸೂಕ್ತವಲ್ಲ ಎಂದು ಅರಿತ ಬಿಜೆಪಿ ಸರ್ಕಾರ, 2ಸಿ ಹಾಗೂ 2ಡಿ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದೆ. ಮೀಸಲಾತಿ ನೀಡದೇ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ಎದುರು ಹಾಕಿಕೊಂಡರೆ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಜಾಣ ನಡೆ ಇಟ್ಟಿದೆ.

ಸಂಪುಟ ನಿರ್ಧಾರದ ಬೆನ್ನಲ್ಲೆ ಹಲವು ಗೊಂದಲ

ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಹೋರಾಟ ನಡೆದಿದ್ದವು. ಅದ್ರಲ್ಲೂ ಲಿಂಗಾಯತ ಪಂಚಮಸಾಲಿ ಸಮುದಾಯ 2A ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಡೆಡ್​ಲೈನ್ ಕೊಟ್ಟು ಹೋರಾಟ ಮಾಡಿದ್ದರು. ಕೊನೆಗೆ ಸರ್ಕಾರವೇ, ಡಿಸೆಂಬರ್ 29ಕ್ಕೆ ಅಂದ್ರೆ ಇವತ್ತು ಮೀಸಲಾತಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿತ್ತು. ಈ ಮಧ್ಯೆ ವಕ್ಕಲಿಗರೂ ಮೀಸಲಾತಿ ಬಗ್ಗೆ ಬೇಡಿಕೆ ಸಲ್ಲಿಸಿದರು. ಇಂದು ಇದೇ ವಿಚಾರವಾಗಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಎರಡು ಪ್ರತ್ಯೇಕ ವರ್ಗಗಳನ್ನ ರಚಿಸಿ ಮೀಸಲಾತಿ ನೀಡಲು ಮುಂದಾಗಿದೆ. ಸಂಪುಟ ನಿರ್ಧಾರದ ಬೆನ್ನಲ್ಲೆ ಹಲವು ಗೊಂದಲವೂ ಎದ್ದಿದೆ.

2ಸಿ ಮತ್ತು 2ಡಿ ರಚನೆಗೆ ಸರ್ಕಾರ ತೀರ್ಮಾನ

3A ಹಾಗೂ 3B ರದ್ದು ಮಾಡಿ 2ಸಿ ಹಾಗೂ 2ಡಿ ಕೆಟಗರಿ ರಚನೆ ಮಾಡುವ ಮೂಲಕ ಚುನಾವಣೆ ಹೊತ್ತಲ್ಲಿ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದೆ. 3ಎನಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು ಮತ್ತು 3ಬಿ ನಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಹಾಗೂ ಉಪಜಾತಿಗಳನ್ನು ಶಿಫ್ಟ್‌ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಇಡಬ್ಲ್ಯುಎಸ್‌ನಡಿ ರಾಜ್ಯಗಳಿಗಿರುವ ಅಧಿಕಾರ ಚಲಾಯಿಸಿ ಮೀಸಲಾತಿಗೆ ಪ್ಲ್ಯಾನ್‌ ಮಾಡಿದೆ.

3ಎನಲ್ಲಿ ಇತರೆ ಜಾತಿಗಳ ಜತೆ ಒಕ್ಕಲಿಗರಿಗೆ ಶೇ.4ರಷ್ಟು ಇತ್ತು. 3ಬಿನಲ್ಲಿ ಇತರೆ ಜಾತಿಗಳ ಜತೆ ಲಿಂಗಾಯತರಿಗೆ ಶೇ.5ರಷ್ಟಿತ್ತು. ಈಗ 3ಎನಲ್ಲಿದ್ದ ಒಕ್ಕಲಿಗರಿಗೆ 2ಸಿ ಯಲ್ಲಿ ಶೇ.6 ಮೀಸಲಾತಿ ಹಾಗೂ 3ಬಿಯಲ್ಲಿದ್ದ ಲಿಂಗಾಯತರಿಗೆ 2ಡಿ ನೀಡಿ ಶೇ.7ರಷ್ಟು ಮೀಸಲಾತಿ ನೀಡುವ ಪ್ಲ್ಯಾನ್ ಮಾಡಿದೆ.

2ಎ ಕೇಳಿದ್ದ ಲಿಂಗಾಯತ ಸಮುದಾಯಕ್ಕೆ 2ಡಿ ಕೆಟಗರಿ

ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ಅಂದ್ರೆ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಆದರೆ, ಸರ್ಕಾರ ಇಡೀ ಲಿಂಗಾಯತ ಸಮುದಾಯವನ್ನೇ 2D ಕೆಟಗರಿ ಸೇರಿಸಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪಂಚಮಸಾಲಿ ಸಮುದಾಯಕ್ಕೇ ಪ್ರತ್ಯೇಕ ಕೆಟಗರಿ ಸೃಷ್ಟಿಸಿಲ್ಲ. ಬದಲಾಗಿ 2ಡಿ ಕೆಟಗರಿಯಲ್ಲೇ ಪಂಚಮಸಾಲಿ ಸಮುದಾಯವನ್ನು ಸೇರಿಸಲಾಗಿದೆ. ವೀರಶೈವ ಲಿಂಗಾಯತರು ಇದುವರೆಗೆ 3ಬಿ ಕೆಟಗರಿಯಲ್ಲಿದ್ದರು. ಈಗ 2ಡಿ ಕೆಟಗರಿಯಲ್ಲಿ ಒಟ್ಟಾರೆ ಲಿಂಗಾಯತರಿಗೆ ಮೀಸಲಾತಿ ಫಿಕ್ಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಇನ್ನು ಎರಡು ಹೊಸ ಕೆಟಗರಿ ರಚನೆ ಮಾಡುವುದೊಂದಿಗೆ ಈಗಾಗಲೇ 3ಎ ಮತ್ತು 3ಬಿನಲ್ಲಿದ್ದ ಉಳಿದ ಸಮುದಾಯಗಳು ಯಥಾಸ್ಥಿತಿಯಲ್ಲೇ ಇರಲಿವೆ. ಸದ್ಯ ಸಿಗುತ್ತಿರುವ ಮೀಸಲಾತಿ ಹಾಗೇ ಇರಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಮೀಸಲಾತಿ ಪ್ರಮಾಣ ಹೆಚ್ಚು ಕಡಿಮೆ ಆಗುತ್ತಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸರ್ಕಾರವಂತೂ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಮೂಲಕ ಮೀಸಲಾತಿ ಸಂಕಷ್ಟದಿಂದ ಪಾರಾಗಿದೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಚುನಾವಣೆ ಹೊತ್ತಲ್ಲಿ ಎರಡು ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಆದ್ರೆ, ಸರ್ಕಾರದ ಈ ನಡೆಯನ್ನು ಎರಡು ಸಮುದಾಯಗಳು ಒಪ್ಪಿಕೊಳ್ಳುತ್ತಾವೋ ಅಥವಾ ವಿರೋಧಿಸುತ್ತವೋ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:50 pm, Thu, 29 December 22