ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆ; ಶುಕ್ರವಾರ ಬೆಳಗ್ಗೆ 9.30ಕ್ಕೆ ಮಾಹಿತಿ ನೀಡಲಿದ್ದಾರೆ ದೇವೇಗೌಡರು
Karnataka BJP, JDS alliance talks; ಹೆಚ್ಡಿ ದೇವೇಗೌಡ ಅವರು ಶುಕ್ರವಾರ ಬೆಳಗ್ಗೆ 9.30ಕ್ಕೆ ದೆಹಲಿಯ ಸಫ್ದರ್‌ಜಂಗ್ ಲೇನ್‌ನಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ನವದೆಹಲಿ, ಸೆಪ್ಟೆಂಬರ್ 21: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ (BJP, JDS alliance) ಮಾಡಿಕೊಳ್ಳುವ ವಿಚಾರವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರ ರಾತ್ರಿ ಬಿರುಸಿನ ಬೆಳವಣಿಗೆಗಳು ನಡೆದವು. ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda), ನಾಯಕರಾದ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ರೇವಣ್ಣ, ಕುಪೇಂದ್ರ ರೆಡ್ಡಿ ಅವರು ಸೀಟು ಹಂಚಿಕೆ ವಿಚಾರವಾಗಿ ರಹಸ್ಯ ಚರ್ಚೆ ನಡೆಸಿದರು. ಬಿಜೆಪಿ ನಾಯಕರ ಜತೆಗಿನ ಮಾತುಕತೆಗೂ ಮುನ್ನ ಜೆಡಿಎಸ್ ನಾಯಕರು ರಹಸ್ಯ ಸಭೆ ನಡೆಸಿದರು. ಹೆಚ್ಡಿ ದೇವೇಗೌಡ ಅವರು ಶುಕ್ರವಾರ ಬೆಳಗ್ಗೆ 9.30ಕ್ಕೆ ದೆಹಲಿಯ ಸಫ್ದರ್‌ಜಂಗ್ ಲೇನ್‌ನಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಿದ್ದಾರೆ. ಮೈತ್ರಿ ಕುರಿತ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ಈ ಮಧ್ಯೆ, ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಗಳ ಜತೆ ಮಾತನಾಡಿದ ಹೆಚ್ಡಿ ರೇವಣ್ಣ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ನಿರ್ಧಾರಕ್ಕೆ ನಾನು ಬದ್ಧ. ಮೈತ್ರಿ ಸಂಬಂಧ ಕುಮಾರಸ್ವಾಮಿ ಮಾತನಾಡುತ್ತಾರೆ. ಹಾಸನದಲ್ಲಿ ಮೈತ್ರಿ ಅನಿವಾರ್ಯವೋ ಬೇಡವೋ ನನಗೆ ಗೊತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ರೈಲ್ವೆ ಬ್ರಿಡ್ಜ್ ಸಂಬಂಧ ದೇವೇಗೌಡರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ದೇವೇಗೌಡರ ಭೇಟಿಯಾದ ಗೋವಾ ಸಿಎಂ
ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ದೇವೇಗೌಡರ ನಿವಾಸಕ್ಕೆ ಆಗಮಿಸಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಜತೆ ಮೈತ್ರಿ ಮಾತುಕತೆಗೂ ಮುನ್ನ ಈ ಭೇಟಿ ನಡೆದಿದೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ಸಭೆ ನಡೆಯಿತು. ಬಿಜೆಪಿ ವತಿಯಿಂದ ಗೋವಾ ಸಿಎಂ ಪ್ರಮೋದ್ ಸಾವಂತ್ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಹೆಚ್ಡಿ ರೇವಣ್ಣ, ನಿಖಿಲ್ ಕುಮಾರ್ ಸ್ವಾಮಿ, ಸಾರಾ ಮಹೇಶ ಭಾಗಿಯಾದರು.
ದೇವೇಗೌಡ ಭೇಟಿಗೆ ಆಗಮಿಸಿದ ಡಾ. ಕೆ ಸುಧಾಕರ್
ಮಾಜಿ ಸಚಿವ ಡಾ. ಕೆ ಸುಧಾಕರ್ ಅವರು ದೆಹಲಿಯ ಸಫ್ದರ್‌ಜಂಗ್ ಲೇನ್‌ನಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಜತೆ ಮಾತುಕತೆಗೆ ಯತ್ನಿಸಿದ್ದಾರೆ. ಮಾಧ್ಯಮಗಳನ್ನು ಕಂಡು ಕಾರು ನಿಲ್ಲಿಸದೆ ಅವರು ತೆರಳಿದ್ದಾರೆ. ಬಿಜೆಪಿ ನಾಯಕರ ಜೊತೆಗೆ ಮೈತ್ರಿ ಮಾತುಕತೆಗೂ ಮುನ್ನ ಅವರು ದೇವೇಗೌಡರ ಭೇಟಿಗೆ ಯತ್ನಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿಗೆ ಪೆಟ್ಟು ಕೊಡಲು ಕಾಂಗ್ರೆಸ್ ಸನ್ನದ್ಧ, ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್
ಒಟ್ಟಿನಲ್ಲಿ ಕರ್ನಾಟಕ ರಾಜಕಾರಣದ ಬಗ್ಗೆ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಉಂಟಾಗಿರುವ ಕುತೂಹಲಗಳಿಗೆ ಶುಕ್ರವಾರ ಬೆಳಗ್ಗೆ ದೇವೇಗೌಡರು ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ ಉತ್ತರ ದೊರೆಯುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Thu, 21 September 23