ತಮಿಳುನಾಡಿಗೆ ಕಾವೇರಿ ನೀರು; ನೀರಾವರಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರೆಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಕುಮಾರಸ್ವಾಮಿ

HD Kumaraswamy reaction on cauvery water release;ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು; ನೀರಾವರಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರೆಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: Ganapathi Sharma

Updated on: Sep 21, 2023 | 3:10 PM

ಬೆಂಗಳೂರು, ಸೆಪ್ಟೆಂಬರ್ 21: ತಮಿಳುನಾಡಿಗೆ ಕೆಆರ್​ಎಸ್​ನಿಂದ (KRS Dam) 5000 ಕ್ಯೂಸೆಕ್​ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿರುವ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರ. ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ. ಕಾವೇರಿ ಜಲ ನಿಯಂತ್ರಣ ಸಮಿತಿ & ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರಕಾರಕ್ಕೆ ಇರಲೇ ಇಲ್ಲ ಎಂದು ಕುಮಾರಸ್ವಾಮಿ ದೂರಿದ್ದಾರೆ.

ರಾಜ್ಯ ಸರಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ. ತಮಿಳುನಾಡಿನ ಜತೆ ಆ ಪಕ್ಷದ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡ ಕಾರಣಕ್ಕೆ ಕಾವೇರಿ ಹಿತವನ್ನು ವ್ಯವಸ್ಥಿತವಾಗಿ ಬಲಿ ಕೊಡಲಾಗಿದೆ. ಆಗಸ್ಟ್ 10ರಂದು ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆ ನಡೆಯಿತು. ಮರುದಿನ ಕಾವೇರಿ ಜಲನಿರ್ವಹಣಾ ಪ್ರಾಧಿಕಾರ ಸಭೆ ಆಯಿತು. ಮುಂದಿನ 15 ದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತು. ತಕ್ಷಣವೇ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ, ಸರಕಾರ ಹಾಗೆ ಮಾಡಲೇ ಇಲ್ಲ. ಸುಪ್ರೀಂಕೋರ್ಟ್ ಕಡೆ ಮುಖ ಮಾಡದೆ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಪ್ರಾಧಿಕಾರದ ಆದೇಶವನ್ನೇ ನೆಪ ಮಾಡಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿತು. ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಎಳೆದುಬಿಟ್ಟಿತು ಎಂದು ಅವರು ಹೇಳಿದ್ದಾರೆ.

ಸರಕಾರ ಎಸಗಿದ ತಪ್ಪು ಇಷ್ಟೇ ಅಲ್ಲ, ನಿಯಂತ್ರಣ ಸಮಿತಿ & ಪ್ರಾಧಿಕಾರದ ಸಭೆಗಳನ್ನು ಬಹಳ ಲಘುವಾಗಿ ಪರಿಗಣಿಸಿತು. ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಕೊಟ್ಟ ಸಲಹೆಗಳನ್ನೂ ಗಾಳಿಗೆ ತೂರಿತು. ನಮ್ಮ ಸಲಹೆಗೆ ಕವಡೆಕಾಸಿನ ಕಿಮ್ಮತ್ತೂ ಕೊಡದೆ ಕನ್ನಡಿಗರ ಹಿತವನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಲಿ ಮಾಡಿತು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕಾವೇರಿ ವಿಷಯ ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂದು ನಾನು ಹೇಳಿದ್ದೆ. ಈಗ ತಮಿಳುನಾಡಿಗೆ ಅನುಕೂಲವಾಗಿದೆ. ನಮಗೆ ಅನ್ಯಾಯವಾಗಿದೆ. ಈ ತಿಕ್ಕಾಟ ಸಾಗುತ್ತಿರುವ ದಿಕ್ಕು ನೋಡಿದರೆ ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ರಾಜ್ಯಸಭೆಯಲ್ಲಿ ಹೆಚ್​ಡಿ ದೇವೇಗೌಡ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು. ಮಾನ್ಯ ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ, ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿದ್ದರು! ಈ ಮೌನ ನನಗೆ ಅಚ್ಚರಿ ಉಂಟು ಮಾಡಿದೆ. ಅವರು ಕಾಂಗ್ರೆಸ್ ಅಧ್ಯಕ್ಷರು ಹೌದು. ಆದರೆ, ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್ 13ರಿಂದ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ. ಅದನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಕೋರ್ಟ್ ಆದೇಶಕ್ಕೂ ಮೊದಲು ಪ್ರಾಧಿಕಾರ ಹೇಳಿತು ಎಂದು ವಿದ್ಯುತ್ ವೇಗದಲ್ಲಿ ನೀರು ಬಿಟ್ಟ ಸರಕಾರವು; ಈಗ ಸುಪ್ರೀಂಕೋರ್ಟ್ ಹೇಳಿದೆ, ಇನ್ನೇನು ಮಾಡುವುದು ಎಂದು ಕೈ ಚೆಲ್ಲಿದೆ. ಮರು ಪರಿಶೀಲನಾ ಅರ್ಜಿಯನ್ನು ಕೋರ್ಟಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಾಧಿಕಾರ ಆದೇಶ ಕೊಟ್ಟಷ್ಟು ನೀರನ್ನು ಬಿಡುವಂತೆ ಕಾನೂನು ತಜ್ಞರು ಸಲಹೆ ಮಾಡಿದ್ದರು. ಅಲ್ಲಿಗೆ ಸುಪ್ರೀಂನಲ್ಲಿ ನ್ಯಾಯ ಸಿಗಲಾರದು ಎಂದು ಅವರು ಮೊದಲೇ ಕೈ ಚಲ್ಲಿದಂತೆ ಕಾಣುತ್ತದೆ. ಕೋರ್ಟ್ ಆದೇಶ ಬರುವ ತನಕ ನೀರು ಬಿಡಲು ಸಾಧ್ಯ ಇಲ್ಲ ಎಂದು ಸರಕಾರವು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರಕ್ಕೆ ನೇರವಾಗಿ ಹೇಳಬೇಕಿತ್ತು. ಹಾಗೆ ಹೇಳಲಿಲ್ಲ. ಪರಿಣಾಮ; ಈವರೆಗೆ ನಾವು ಸಾಕಷ್ಟು ನೀರು ಹರಿಸಬೇಕಾಯಿತು. ಮುಂದೆಯೂ ಹರಿಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ ಎಂದು ಅವರು ದೂರಿದ್ದಾರೆ.

ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು; ಹೆಚ್​ಡಿಕೆ ವ್ಯಂಗ್ಯ

ಸರಕಾರ ವಕೀಲರು ಹೇಳಿದರಂತೆ ಕೇಳಿ ಜನರ ಹಿತ ಕಡೆಗಣಿಸಿದೆ. ಯಾವ ಕಾರಣಕ್ಕೂ ನೀರು ಬಿಡಬಾರದಿತ್ತು. ಕೋರ್ಟ್ ಆದೇಶಕ್ಕೆ ಕಾದು ಕ್ರಮ ಜರುಗಿಸಬೇಕಿತ್ತು. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ವರ್ತಿಸಿದೆ ಸರಕಾರ. ವಕೀಲರ ಮಾತುಗಳನ್ನು ಕೇಳಿಕೊಂಡು ನೀರು ಬಿಡುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ. ಹಾಗಾದರೆ ಸರಕಾರ ಅನ್ನೊದು ಯಾಕೆ? ವಿಷಯ ಎಲ್ಲಿ ಶುರುವಾಯಿತೋ ಮತ್ತೆ ಅಲ್ಲಿಗೆ ಬಂದು ನಿಂತಿರುವುದಕ್ಕೆ ಯಾರು ಹೊಣೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ

ಸರಕಾರ ಅನುಸರಿಸಿದ ವಿಳಂಬ ರಾಜಕಾರಣ ರಾಜ್ಯದ ಹಿತಕ್ಕೆ ಪೆಟ್ಟು ನೀಡಿದೆ. ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಹೋದ ಕೂಡಲೇ ರಾಜ್ಯವೂ ಮೊರೆ ಹೋಗಬೇಕಿತ್ತು. ಮೀನಾಮೇಷ ಎಣಿಸುತ್ತಾ ತಡ ಮಾಡಿತು. ತಡ ಮಾಡಿದ್ದಕ್ಕೆ ತಕ್ಕ ಶಾಸ್ತಿ ಆಗಿದೆ. ವಿನಾಕಾರಣ ಕನ್ನಡಿಗರಿಗೆ ಶಿಕ್ಷೆ ಆಗಿದೆ. ಪ್ರಾಧಿಕಾರದ ಆದೇಶ ಬಂದೊಡನೆ ಮಧ್ಯರಾತ್ರಿಯೇ ಸುಪ್ರೀಂ ಕೋರ್ಟ್ ಗೆ ಹೋಗಿ, ನಮ್ಮ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ರಾತ್ರೋರಾತ್ರಿ ಪಿಟಿಷನ್ ಹಾಕಬೇಕಿತ್ತು. ಅದನ್ನು ಮಾಡದೇ ನೀರು ಬಿಡುತ್ತಾ ಕೂತಿತು ಸರಕಾರ. ನೀರು ಇಲ್ಲ ಎನ್ನುತ್ತಿದ್ದವರೂ ಈವರೆಗೆ ಹೇಗೆ ಬಿಟ್ಟಿರಿ ಎಂದು ಕೋರ್ಟ್ ಪ್ರಶ್ನೆ ಮಾಡುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇರಲಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ: ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕರ್ನಾಟಕ ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು, ರೈತರು

ಕೆಆರ್​ಎಸ್​ನಲ್ಲಿ ಈಗ ಇರುವುದೇ 20 ಟಿಎಂಸಿಗೂ ಕಡಿಮೆ ನೀರು. 3 ದಿನಕ್ಕೆ ಒಂದು ಟಿಎಂಸಿ ಹರಿದು ಹೋಗುತ್ತದೆ. ದಿನಕ್ಕೆ 5,000 ಕ್ಯೂಸೆಕ್ ಹರಿದರೆ 15 ದಿನಕ್ಕೆ 7 ಟಿಎಂಸಿ ಖಾಲಿ! ಆಗ ಉಳಿಯುವುದು 13 ಟಿಎಂಸಿ! ಇದರಲ್ಲಿ ಡೆಡ್ ಸ್ಟೋರೇಜ್ 7 ಟಿಎಂಸಿ ಇರಬೇಕು. ಇನ್ನು ಉಳಿಯೋದು ಎಷ್ಟು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಶಾಕ್, ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ

ಬೆಂಗಳೂರಿಗೆ ಇನ್ನೂ 9 ತಿಂಗಳಿಗೆ ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ಬೇಕು. ಎಲ್ಲಿಂದ ಬರುತ್ತೆ ಆ ನೀರು? ಆದೇಶ ಪಾಲಿಸಲು ಕರ್ನಾಟಕ, ಅನುಭವಿಸಲು ತಮಿಳುನಾಡು ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರಕಾರವೇ ನೇರ ಕಾರಣ ಕಾವೇರಿ ಕನ್ನಡಿಗರ ಹಕ್ಕು ಎಂದು ಕುಮಾರಸ್ವಾಮಿ ಎಕ್ಸ್​ ಪೋಸ್ಟ್​ನಲ್ಲಿ ಪ್ರತಿಪಾದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ