ತಮಿಳುನಾಡಿಗೆ ಕಾವೇರಿ: ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕರ್ನಾಟಕ ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು, ರೈತರು

ತಮಿಳುನಾಡಿಗೆ ಕೆಆರ್​ಎಸ್​ನಿಂದ 5000 ಕ್ಯೂಸೆಕ್​ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕ ರೈತರು ಆಕ್ರೋಶ ಹೊರಹಾಕುತ್ತಿದ್ದು, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಕೋರ್ಟ್​ನಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಆರಂಭಿಸಿವೆ.

ತಮಿಳುನಾಡಿಗೆ ಕಾವೇರಿ: ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕರ್ನಾಟಕ ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು, ರೈತರು
ಕಾವೇರಿ ಜಲ ವಿವಾದ
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on:Sep 21, 2023 | 2:39 PM

ಬೆಂಗಳೂರು, ಸೆ.21: ತಮಿಳುನಾಡಿಗೆ ಕೆಆರ್​ಎಸ್​ನಿಂದ (KRS) 5000 ಕ್ಯೂಸೆಕ್​ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದೆ. ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕ ರೈತರು ಆಕ್ರೋಶ ಹೊರಹಾಕುತ್ತಿದ್ದು, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ (BJP-JDS) ಕೋರ್ಟ್​ನಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಆರಂಭಿಸಿವೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಿತ್ರ ಪಕ್ಷ ಡಿಎಂಕೆ ಜೊತೆ ಕಾಂಗ್ರೆಸ್​​ ಸರ್ಕಾರ ಮಾತನಾಡಬೇಕು. ಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ. ಕೇಂದ್ರ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ತಪ್ಪು ಮಾಡಿದೆ. ಕೋರ್ಟ್​ ಮುಂದೆ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಸರಿಯಾಗಿ ಹೋಮ್ ವರ್ಕ್​ ಮಾಡದಿರುವುದು ಸಾಬೀತಾಗಿದೆ. ಇಂದಿನ ಸುಪ್ರೀಂಕೋರ್ಟ್​ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು ಎಂದರು.

ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಸುಪ್ರೀಂ ಕೋರ್ಟ್ ಜಲಾಶಯಗಳ ವೀಕ್ಷಣೆಗೆ ಯಾರ ಸಮಿತಿಯನ್ನು ಬೇಕಾದರೂ ಕಳುಹಿಸಿ ಕೊಡಲಿ. ಇದನ್ನು ಸರ್ಕಾರ ಮೇಲ್ಮನವಿಯಲ್ಲಿ ಮನವಿ ಮಾಡಬೇಕು. ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ, ಅದು‌ ಕೂಡಾ ಒಂದು ಕಾರಣ. ಸರ್ಕಾರ ಮೊದಲಿನಿಂದಲು ಕಾವೇರಿ ವಿಚಾರದಲ್ಲಿ ತಪ್ಪು ಮಾಡಿಕೊಂಡು ಬಂದಿದೆ. ರಾಜ್ಯಕ್ಕೆ ಬಹಳ ಇಕ್ಕಟ್ಟಿನ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ ಎಂದರು.

ರಾಜ್ಯದ ಜನ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಹೋರಾಟ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡೋಣ. ಇಂದಿನ ಆದೇಶದ ಮೂಲಕವೇ ಸರ್ಕಾರದ ವೈಫಲ್ಯ ಎದ್ದು ಕಾಣಿಸುತ್ತಿದೆ. ಈಗಲಾದರೂ ತಮ್ಮ ತಪ್ಪು ಸರಿಪಡಿಸುವ ಕೆಲಸ ಸರ್ಕಾರ ಮಾಡಲಿ ಎಂದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸುಪ್ರೀಂಕೋರ್ಟ್ ಎರಡು ರಾಜ್ಯಗಳ ವಾದ ಕೇಳಿ ಸಿಡಬ್ಲ್ಯುಎಂಎ ಆದೇಶವನ್ನೇ ಎತ್ತಿ ಹಿಡಿದಿದೆ. ಇದು ಬಹಳ ದುರದೃಷ್ಟಕರ. ಮೊದಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಬೇಕಿತ್ತು. ಇಷ್ಟು ನೀರು ಬಿಡಲು ಆಗಲ್ಲ ಅಂತಾ ಅರ್ಜಿ ಹಾಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದನ್ನು ಪದೇ ಪದೇ ಹೇಳಿದ್ದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಿಡಬ್ಲ್ಯುಆರ್​ಸಿಯಲ್ಲಿ ಸಂಪೂರ್ಣವಾದ ಮಾಹಿತಿ ಇರುತ್ತದೆ. ಇದೆಲ್ಲವೂ ಇದ್ದರೂ ಪ್ರಾರಂಭದಿಂದಲೂ ನೀರು ಬಿಡುತ್ತಿದ್ದಾರೆ. ಈ ರೀತಿಯ ಸರ್ಕಾರ ಇದ್ದರೆ ರಾಜ್ಯದ ಹಿತಾಸಕ್ತಿ ಹೇಗೆ ರಕ್ಷಣೆ ಮಾಡಲು ಸಾಧ್ಯ? ಎಂದು ಪ್ರಶ್ನಸಿದರು.

ತಮಿಳುನಾಡಿನವರು ಎರಡು ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ. ಇಲ್ಲಿ ಕುಡಿಯಲು ನೀರೇ ಇಲ್ಲ. ಗ್ರೌಂಡ್ ರಿಯಾಲಿಟಿಯನ್ನು ಅವರು ಪರಿಗಣಿಸಿಯೇ ಇಲ್ಲ. ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿದೆ. ನಮಗೆ ಬೇಕಿರುವ ನೀರಿನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹೊಸ ಸರ್ಕಾರ ಬಂದಿದೆ ಎಂದು ವರ್ಗಾವಣೆ ಮಾಡಿಕೊಂಡು ಕೂತಿದ್ದರೇ ವಿನ: ಕಾವೇರಿ ಕಡೆ ಇವರು ಗಮನ ಕೊಟ್ಟಿರಲಿಲ್ಲ ಎಂದರು.

ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕದ ವಾಸ್ತವ ಸ್ಥಿತಿ ಅರಿವು‌ ಮೂಡಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ನಿಮ್ಮ ರಾಜಕೀಯ ತೆವಲಿಗೆ ಕರ್ನಾಟಕ ರಾಜ್ಯದ ಜನ‌ ಬಸವಳಿದಿದ್ದಾರೆ. ಇಸ್ತ್ರಿ ಪೆಟ್ಟಿಗೆ, ಕುಕ್ಕರ್ ಕೊಟ್ಟು ಅಧಿಕಾರಕ್ಕೆ ಬಂದವರು ನೀವು. ನಿಮ್ಮಲ್ಲಿ ತಾಕತ್ ಇಲ್ಲ ಎಂದರು.

ಡಿ.ಕೆ. ಶಿವಕುಮಾರ್ ಅವರೇ ಬ್ರಾಂಡ್‌ ಬೆಂಗಳೂರು ಅಂತೀರಾ ಬೆಂಗಳೂರು ಜನರಿಗೆ‌ ಕುಡಿಯಲು ನೀರು‌ ಕೊಡಿ ನೋಡೋಣ. ಮುಂದಿನ ದಿನಗಳಲ್ಲಿ ಜನತೆಯ ಆಕ್ರೋಶ ನೋಡುವಿರಿ. ನಿಮ್ಮ ಬೇಜವಾಬ್ದಾರಿಯನ್ನು ಬಿಜೆಪಿ‌ ಖಂಡಿಸುತ್ತದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮೆಚ್ಚಿಸಲು, ಐಎನ್​ಡಿಐಎ ಮೆಚ್ಚಿಸಲು‌ ನೀರು‌ ಬಿಟ್ಟಿದ್ದೀರಿ ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ನೀರು ಹರಿಸಲು ಕೋರ್ಟ್ ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ, ವಿಧಾನಸೌಧ ಮುತ್ತಿಗೆ ಹಾಕಲು ಕರವೇ ನಿರ್ಧಾರ

ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ ಸೂಕ್ತ ವಾದ ಮಂಡಿಸುತ್ತಿಲ್ಲ. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಪರಿಸ್ಥಿತಿ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಆರ್​ ಅಶೋಕ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮಿಳುನಾಡು ಸೂಕ್ತ ವಾದ ಮಂಡಿಸುತ್ತದೆ. ಕರ್ನಾಟಕ ಸರ್ಕಾರ ವಾದ ಮಂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ಕಾಂಗ್ರೆಸ್​ ಸರ್ಕಾರ ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದೆ. ನಿಯೋಗ ಕೊಂಡೊಯ್ಯುವ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್​​ಗೆ ತಮಿಳುನಾಡು ಮನವಿ ಮಾಡಿದ ಮೇಲೆ ನಮ್ಮವರು ಮಾಡಿದ್ದಾರೆ. ಮೊದಲೇ ಮಾಡಲು ಏನಾಗಿತ್ತು? ನೀವು ಸ್ಟಾಲಿನ್ ಅವರನ್ನು ಹಿಂಬಾಲಿಸುತ್ತಿದ್ದೀರಿ. ಕೋರ್ಟ್​ಗೆ ಮಾಹಿತಿ ಸರಿಯಾಗಿ ನೀಡಿಲ್ಲ ಎಂದರು.

ಇವರು ನೀರಾವರಿ ತಜ್ಞರ ಭೇಟಿ ಮಾಡಿದ್ದಾರಾ? ಸ್ಟಾಲಿನ್​ಗೆ ಏನೂ ಬೇಸರ ಆಗಬಾರದು, ಅವರು ನಮ್ಮ ಅಣ್ಣ ಎಂದು ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ನಾವು ಕಾವೇರಿ ಹೋರಾಟ ಮಾಡುತ್ತೇವೆ. ಮುಂದೆ ಏನಾದರೂ ಆದರೆ ಅದಕ್ಕೇ ಸರ್ಕಾರವೇ ಹೊಣೆ. ಸ್ಟಾಲಿನ್ ಜೊತೆ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಒಂದೇ ಒಂದು ಹೇಳಿಕೆ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಚಿವರು ಇಲ್ಲೇ ಗೂಟ ಹೊಡೆದುಕೊಂಡು ಕುಳಿತಿದ್ದಾರೆ. ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಕಾಟಾಚಾರಕ್ಕೆ ಸಂಸದರ ಸಭೆ ಮಾಡಿದ್ದಾರೆ. ವಿಪಕ್ಷಗಳು ಬೈಯುತ್ತಾರೆ ಎಂದು ಸಭೆ ಮಾಡಿದ್ದಾರೆ ಎಂದರು.

ರಾಜಿ ಪ್ರಶ್ನೆಯೇ ಇಲ್ಲ: ನಿಖಿಲ್ ಕುಮಾರಸ್ವಾಮಿ

ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಜೆಡಿಎಸ್​​ನ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದರು.

ಇದನ್ನೂ ಓದಿ: ಕಾವೇರಿ ಜಲವಿವಾದ; ಸಂಕಷ್ಟ ವರ್ಷದಲ್ಲಿ ಇನ್ನೂ ಸಂಕಷ್ಟ ಸೂತ್ರ ರೂಪಿಸಿಲ್ಲ, ಕೇಂದ್ರದ ಮಧ್ಯಸ್ಥಿಕೆ ಕೋರಿದ್ದೇವೆ: ಸಿದ್ದರಾಮಯ್ಯ

ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದರು.

ಇದು ಅತ್ಯಂತ ದುರದೃಷ್ಟಕರ: ಎಂಬಿ ಪಾಟೀಲ್

ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂಬಿ ಪಾಟೀಲ್, ಇದು ಅತ್ಯಂತ ದುರದೃಷ್ಟಕರ. ನಮ್ಮಲ್ಲೇ ಕುಡಿಯಲು ನೀರಿಲ್ಲ. ಕೆಲ ತಿಂಗಳಲ್ಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಬಿಕ್ಕಟ್ಟು ಎದುರಾಗಲಿದೆ. ಪ್ರಾಧಿಕಾರವಾಗಲಿ, ಸುಪ್ರೀಂಕೋರ್ಟ್​ಗೆ ಆಗಲಿ ಇಲ್ಲಿರುವ ವಾಸ್ತವ ಸ್ಥಿತಿ ತಿಳಿಸಬೇಕಿದೆ. ಈಗಲೂ ತಡವಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ತಂಡವನ್ನ ಕಳುಹಿಸಿ ಎಲ್ಲಾ ಸ್ಥಿತಿಗತಿಗಳನ್ನ ಅರಿಯಬೇಕು ಎಂದರು.

ನೀರು ಬಿಡುವಂತಹ ಆದೇಶವನ್ನ ಮರುಪರಿಶೀಲಿಸಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಂಡು ತಜ್ಞರ ತಂಡವನ್ನ ಕಳುಹಿಸಿ ಪರಿಶೀಲಿಸಬೇಕು. ಪರಿಶೀಲನೆಯಾಗುವವರೆಗೂ ನೀರನ್ನ ತಡೆ ಹಿಡಿಯಬೇಕು. ಇದು ನಮಗೆ ಸಂಕಷ್ಟದ ವರ್ಷ. ನೀರು ಇದ್ದರೆ ಹರಿಬಿಡುತ್ತಿದ್ದೆವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಅತ್ಯಂತ ಗಂಭೀರ ಪರಿಸ್ಥಿತಿ ಇದೆ ಎಂದರು.

ರಾಜ್ಯದ ಕೇಂದ್ರ ಸಚಿವರು, ಸಂಸದರು, ಮಾಜಿ ಮುಖ್ಯಮಂತ್ರಿಗಳು ಇವರೆಲ್ಲರೂ ಕೂಡಿ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ರಾಜ್ಯದ ಹಿತಾಸಕ್ತಿಯನ್ನ ಕಾಪಾಡಬೇಕು. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ನಮಗೆ ಗೌರವ ಇದೆ. ಕೇಂದ್ರ ಜಲಶಕ್ತಿ ಮಂತ್ರಾಲಯ ಬಿಕ್ಕಟ್ಟಿಗೆ ಪರಿಹಾರ ಕಂಡು‌ಹಿಡಿಯಬೇಕು. ಕೂಡಲೇ ಸಂಕಷ್ಟ ಸೂತ್ರವನ್ನ ಮಾಡಬೇಕು. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಗಾಯದ ಮೇಲೆ ಬರೆ ಎಳೆದಂತಾದ ಸುಪ್ರೀಂಕೋರ್ಟ್ ಆದೇಶ

ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಸುಪ್ರೀಂಕೋರ್ಟ್​ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾವು ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ಆದರೆ ನಮ್ಮ ರಾಜ್ಯ ಸರ್ಕಾರದ ತಪ್ಪುಗಳನ್ನು ಎತ್ತಿ ಹೇಳಲೇಬೇಕಿದೆ. ತಮಿಳುನಾಡು ಕೇಳುವ ಮೊದಲೇ ಕರ್ನಾಟಕ ನೀರು ಬಿಟ್ಟಿತು. ನಮ್ಮ ನೆರವಿಗೆ ಸಿಡಬ್ಲ್ಯುಆರ್​ಸಿ ಬರಲಿಲ್ಲ. ಸುಪ್ರೀಂ ಕೋರ್ಟ್​ನಲ್ಲೂ ಈಗ ತೀರ್ಪು ಬಂತು. ಕೇಳುವ ಮೊದಲೇ ನೀರು ಬಿಟ್ಟಿದ್ದು ಯಾಕೆ? ಯಾರ ಭಯಕ್ಕೆ ನೀರು ಬಿಟ್ಟಿದ್ದರು? ಎಂದು ಪ್ರಶ್ನಿಸಿದರು.

ನಿಮ್ಮ ಐಎನ್​ಡಿಐಎ ಭಾಗ ಆಗಬೇಕು ಎಂದರೆ ನೀರು ಬಿಡಿ ಎಂದು ಡಿಎಂಕೆ ನಿಮಗೆ (ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ) ಬೆದರಿಕೆ ಹಾಕಿರಬಹುದು. ಅಥವಾ ನಿಮ್ಮ ಹೈಕಮಾಂಡ್ ನಿಮಗೆ ನೀರು ಬಿಡಲು ಸೂಚನೆ ನೀಡಿರಬಹುದು. ಈಗ ನೀರು ಬಿಟ್ಟು ಸಭೆ ಕರೆಯುವ ಹೊಸ ಸಂಪ್ರದಾಯ ಶುರು ಮಾಡಿದ್ದೀರಿ. ನೀರು ಬಿಟ್ಟ ಮೇಲೆ ಸಂಸದರ ಸಭೆ ಮಾಡಿದ್ದೀರಿ. ನೀರು ಬಿಟ್ಟ ಮೇಲೆ ವಾದ ಶುರು ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.

ಸುಪ್ರೀಂಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಧಿಕ್ಕಾರ

ಸುಪ್ರೀಂ ಕೋರ್ಟ್ ಆದರೂ ನ್ಯಾಯ ಕೊಡಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ ನಮಗೆ ಆ ಬಾಗಿಲು ಮುಚ್ಚಿದೆ, ನಾವಿನ್ನೂ ಏನು ಮಾಡೋದಕ್ಕೆ ಸಾಧ್ಯ? ಸುಪ್ರೀಂಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಧಿಕ್ಕಾರ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. ಕರ್ನಾಟಕದ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಕೇಂದ್ರದಿಂದ ನಿಯೋಗ ಕಳಿಸಿ ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳಿ ಅಂತ ಹೇಳಿದ್ದೆವು. ಹೀಗೆ ಹೇಳಿದ್ದರೂ ಇಂತಹ ಆದೇಶ ಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಈ ಹಿಂದೆ ಬಂಗಾರಪ್ಪ ಸುಗ್ರೀವಾಜ್ಞೆ ಜಾರಿಗೆ ತಂದು ಸೆಡ್ಡು ಹೊಡೆದರು. ಕನ್ನಡಿಗರ ಸ್ವಾಭಿಮಾನ ಕಾಪಾಡಲು ಸಿಎಂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ. ಸರ್ಕಾರ ಹೆದರಿಕೊಂಡು ಕೂತರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರ ಸರಿಯಾಗಿ ಮನವರಿಕೆ ಮಾಡುವಲ್ಲಿ ವಿಫಲ ಆಗಿದೆ. ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ಸಂಸದರು ವಿಫಲ ಆಗಿದ್ದಾರೆ ಎಂದರು.

ಕಾವೇರಿ ವಿಚಾರದಲ್ಲಿ ತಮಿಳುನಾಡು ಮುಂದಾಲೋಚನೆ ಮಾಡುತ್ತದೆ. ಅವರು ಕೋರ್ಟ್ ಹೋದ ಮೇಲೆ ನಮ್ಮವರು ಹೋಗಿ ನಿಲ್ಲುತ್ತಾರೆ. ಸುಪ್ರೀಂಕೋರ್ಟ್​ಗೆ ವಸ್ತುಸ್ಥಿತಿ ಅರ್ಥ ಮಾಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದ ರೈತರನ್ನು ಬಲಿಕೊಟ್ಟು ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಸರ್ಜನೆ ‌ಮಾಡಬೇಕು. ನಮಗೆ ಕುಡಿಯೋಕೆ ನೀರಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ನೀರು ಬಿಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ‌ಪರಿಸ್ಥಿತಿಯನ್ನು ಕಾಂಗ್ರೆಸ್ ತಂದಿಟ್ಟಿದೆ. ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡಿಲ್ಲ. ಕಾವೇರಿ ಜಲಾನಯನ ಪ್ರದೇಶದ ರೈತರನ್ನು ಬಲಿ ಕೊಡುತ್ತಿದ್ದಾರೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರಣ ಎಂದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Thu, 21 September 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್