ಬೆಂಗಳೂರು: ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ನಡೆಸಿದ ಟ್ವೀಟ್ ವಾರ್ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಐಟಿ ಸೆಲ್ ಮುಖ್ಯಸ್ಥರ ವಿರುದ್ಧ ಬಿಜೆಪಿ ದೂರು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ, ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕುರಿತು ಅವಹೇಳನಕಾರಿ ಟ್ವೀಟ್ ಹಿನ್ನಲೆ, ಬಿಜೆಪಿ ಕಾರ್ಯಕರ್ತ ಯೋಗೆಂದ್ರ ಹೊದಘಟ್ಟ ಎಂಬವರಿಂದ ಬೆಂಗಳೂರು ಪಶ್ಚಿಮ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಲಾಗಿದೆ. ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಯೋಗೆಂದ್ರ ಹೊದಘಟ್ಟ ದೂರು ನೀಡಿದ್ದಾರೆ.
ಮೋದಿ ಬಗ್ಗೆ ಕಾಂಗ್ರೆಸ್ನಿಂದ ಅವಹೇಳನಕಾರಿ ಟ್ವೀಟ್: ವಿಷಾದ ವ್ಯಕ್ತಪಡಿಸಿ ಟ್ವೀಟ್ ತೆಗೆದುಹಾಕಲು ಡಿಕೆ ಶಿವಕುಮಾರ್ ಸೂಚನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಕೆಪಿಸಿಸಿ ಸಾಮಾಜಿಕ ಜಾಲತಾಣದಿಂದ ಸೋಮವಾರ ಮಾಡಲಾಗಿರುವ ಅವಹೇಳನಕಾರಿ ಟ್ವೀಟ್ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆ (ಅಕ್ಟೋಬರ್ 18) ವಿಷಾದ ವ್ಯಕ್ತಪಡಿಸಿದ್ದರು. ತಕ್ಷಣ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್ ಇಂತಹ ಪ್ರಮಾದವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.
ಕರ್ನಾಟಕ ಕಾಂಗ್ರೆಸ್ ಇಂದು (ಅಕ್ಟೋಬರ್ 17) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಹೆಬ್ಬೆಟ್ ಗಿರಾಕಿ ಮೋದಿ’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿತ್ತು. ಮೌನೇಂದ್ರ ಮೋದಿ ಎಂದು ಟ್ವೀಟ್ ಮಾಡಿತ್ತು. ಪೆಟ್ರೋಲ್ ಬೆಲೆ ಏರಿಕೆ, ಜನರನ್ನು ದೋಚಿ ಉದ್ಯಮಿಗಳ ಹೊಟ್ಟೆ ತುಂಬಿಸುವ ಮೋದಿ, ವಾಸ್ತವಗಳ ಮಾತನಾಡದ ಮೌನೇಂದ್ರ ಮೋದಿ ಇತ್ಯಾದಿ ವಿಚಾರಗಳ ವಿರುದ್ಧ ಬರೆಯುವಾಗ ಹೆಬ್ಬೆಟ್ ಗಿರಾಕಿ ಮೋದಿ ಎಂಬ ಹ್ಯಾಷ್ ಟ್ಯಾಗ್ ಬಳಸಿತ್ತು.
ಇದನ್ನೂ ಓದಿ: ಮೋದಿ ಬಗ್ಗೆ ಕಾಂಗ್ರೆಸ್ನಿಂದ ಅವಹೇಳನಕಾರಿ ಟ್ವೀಟ್: ವಿಷಾದ ವ್ಯಕ್ತಪಡಿಸಿ ಟ್ವೀಟ್ ತೆಗೆದುಹಾಕಲು ಡಿಕೆ ಶಿವಕುಮಾರ್ ಸೂಚನೆ
ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ಓಲೈಸುವುದು ಖಯಾಲಿಯಾಗಿಬಿಟ್ಟಿದೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್
Published On - 10:39 pm, Tue, 19 October 21