ಬೆಂಗಳೂರು, (ನವೆಂಬರ್ 13): ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆಯೇ ಬಿವೈ ವಿಜಯೇಂದ್ರ(BY Vijayendra )ಅವರು ಪಕ್ಷದ ಹಿರಿಯ ನಾಯಕರುಗಳ ಮನೆ-ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅಸಮಾಧಾನಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಅದರಂತೆ ಇಂದು(ನವೆಂಬರ್ 13) ಮೊದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಮನೆ ಭೇಟಿ ನೀಡಿ 20 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆಸಿದರು. ಬಳಿಕ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಇನ್ನು ಈ ವೇಳೆ ಬೊಮ್ಮಾಯಿ, ಎಸ್ಎಂ ಕೃಷ್ಣ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.
ಬೆಂಗಳೂರಿನ ಆರ್ಟಿ ನಗರದಲ್ಲಿ ನಿವಾಸಕ್ಕೆ ಭೇಟಿ ನೀಡಿ ಬೊಮ್ಮಾಯಿ ಜೊತೆ ಸ್ವಲ್ವ ಸಮಯ ಮಾತುಕತೆ ನಡೆಸಿದರು. ಬೊಮ್ಮಾಯಿ ಭೇಟಿ ಬಳಿಕಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬೊಮ್ಮಾಯಿ ಆಶೀರ್ವಾದ ಹಾಗೂ ಮಾರ್ಗದರ್ಶನ ಕೇಳಿದ್ದೇನೆ. ವರಿಷ್ಠರು ಒಳ್ಳೆ ನಿರ್ಧಾರ ಮಾಡಿದ್ದಾರೆ ಎಂದು ಅವರೂ ಸಹ ಸಂತೋಷಪಟ್ಟಿದ್ದು, ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದಿದ್ದಾರೆ. ನಾನಷ್ಟೇ ಅಲ್ಲ, ಎಲ್ಲಾ ಹಿರಿಯರು ನಿನ್ನ ಜತೆ ಇರುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಮಾಡಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡೋಣ ಅಂತ ಹೇಳಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ಭೇಟಿ ಬಳಿಕ ವಿಜಯೇಂದ್ರ ನೇರವಾಗಿ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರು ವಿಜಯೇಂದ್ರ ಅವರಿಗೆ ಸ್ವಾಗತ ಕೋರಿದರು. ನಂತರ ವಿಜಯೇಂದ್ರ ಅವರು ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಇದೇ ವೇಳೆ ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ದೇವೇಗೌಡರ ಜೊತೆ ಮಹತ್ವದ ಚರ್ಚೆ ನಡೆಸಿದರು. ಪ್ರಸಕ್ತ ರಾಜಕಾರಣದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದೇವೇಗೌಡರ ಆಶೀರ್ವಾದ ಪಡೆದ ಬಳಿಕ ರಾಜಕೀಯ ಮುತ್ಸದಿ ಎಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಎಸ್ಎಂ ಕೃಷ್ಣ ಅವರು ವಿಜಯೇಂದ್ರ ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ವಿಜಯೇಂದ್ರ ಭೇಟಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ಎಂ ಕೃಷ್ಣ, ಹಲವು ವರ್ಷಗಳಿಂದ ಬಿಎಸ್ ಯಡೊಯೂರಪ್ಪ ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ. ಈಗ ಬಿವೈ ವಿಜಯೇಂದ್ರರನ್ನು ಜೆ.ಪಿ.ನಡ್ಡಾ, ಅಮಿತ್ ಶಾ ಗುರುತಿಸಿದ್ದಾರೆ. ಲೋಕಸಭೆ, ಸ್ಥಳೀಯ ಚುನಾವಣೆಯಲ್ಲಿ ಛಾಪು ತೋರಿಸಬೇಕಿದೆ. ಬಿ.ವೈ.ವಿಜಯೇಂದ್ರಗೆ ಎಲ್ಲಾ ವಿಧವಾದ ಯಶಸ್ಸು ಸಿಗಲಿ ಎಂದ ಹಾರೈಸಿದರು.
ಈಗಷ್ಟೇ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ, ಮುಂದೆ ಆಗಾಗ ಅವರನ್ನು ಭೇಟಿಯಾಗುತ್ತೇನೆ. ಯುವಕರಿಗೆ ಆದ್ಯತೆ ಜನರೇಷನಲ್ ಚೇಂಜ್, ಅದು ಪ್ರಕೃತಿ ನಿಯಮ. ಅದರ ಜೊತೆ ಸಮನ್ವಯ ಸಾಧಿಸಿಕೊಂಡು ಹೋಗಬೇಕು. ಯುವ ಪ್ರತಿಭೆಗಳು ಹೊರ ಹೊಮ್ಮಬೇಕು. ಅವರ ಜೊತೆಗೆ ಹೆಗಲು ಜೋಡಿಸಿ ಕೆಲಸ ಮಾಡಬೇಕು ಎಂದು ಇನ್ನುಳಿದ ಬಿಜೆಪಿ ಹಿರಿಯ ನಾಯಕರಿಗೆ ಕಿವಿ ಮಾತು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ