ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ: ಹೆಚ್ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್
ಕುಮಾರಸ್ವಾಮಿ ಅವರು ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. 2ನೇ ಪತ್ನಿ, ಪುತ್ರಿಯ ಮಾಹಿತಿ ನೀಡಿಲ್ಲವೆಂದು ಎಸ್.ಆನಂದ ಎಂಬುವವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಖಾಸಗಿಯಾಗಿ ದೂರು ಸಲ್ಲಿಸಿದ್ದರು.
ಬೆಂಗಳೂರು, ನವೆಂಬರ್ 13: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದಡಿ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಸೋಮವಾರ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ನ್ಯಾಯಾಲಯ ರದ್ದುಪಡಿಸಿದೆ.
ಕುಮಾರಸ್ವಾಮಿ ಅವರು ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. 2ನೇ ಪತ್ನಿ, ಪುತ್ರಿಯ ಮಾಹಿತಿ ನೀಡಿಲ್ಲವೆಂದು ಎಸ್.ಆನಂದ ಎಂಬುವವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಖಾಸಗಿಯಾಗಿ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದೂರನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮೊದಲ ಪತ್ನಿಯ ಜೀವಿತಾವಧಿಯಲ್ಲಿ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಅಲ್ಲದೆ, ಚುನಾವಣಾ ಪ್ರಮಾಣ ಪತ್ರದಲ್ಲಿ ಮಕ್ಕಳ ಬಗ್ಗೆ ಉಲ್ಲೇಖಿಸಬೇಕೆಂಬ ನಿಯಮವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125ಎ ಉಲ್ಲಂಘನೆಯಾಗಿಲ್ಲ ಎಂದು ನ್ಯಾ.ಜೆ.ಪ್ರೀತ್ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ರಾಜ್ಯ ರಾಜಕಾರಣದಲ್ಲಿ ಸದ್ಯ ಸಕ್ರಿಯವಾಗಿರುವ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಟೆಂಪರರಿ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಡೂಪ್ಲಿಕೇಟ್ ಸಿಎಂ ಎಂದು ಕರೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿರುವುದು ಡುಪ್ಲಿಕೇಟ್ ಸಿಎಂ, ಹೈಕಮಾಂಡ್ಗೆ ಹಣಕೊಟ್ಟರೇ ಮಾತ್ರ ಮಂತ್ರಿ ಸ್ಥಾನ: ಕುಮಾರಸ್ವಾಮಿ
‘ಡೂಪ್ಲಿಕೇಟ್ ಸಿಎಂ ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ! ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ. ಹೆಚ್.ಡಿ.ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.
ಕರ್ನಾಟಕದಲ್ಲಿ ಜಾರಿಮಾಡಿರುವ ಸುಳ್ಳುಪೊಳ್ಳಿನ ಯೋಜನೆಗಳನ್ನು ಇಡೀ ದೇಶಕ್ಕೆ ವಿಸ್ತರಿಸಿ ಮಂಕುಬೂದಿ ಎರಚಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದೂ ಅವರು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ