
ಚಿಕ್ಕಮಗಳೂರು, ಜನವರಿ 31: ಮಂಡ್ಯ (Mandya) ತಾಲೂಕಿನ ಕೆರಗೋಡು ಗ್ರಾಮದ ಹನುಮ ಧ್ವಜ (Hanuman Flag) ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದ್ದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮೂಡಿಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆ ಧ್ವಜಸ್ಥಂಬ ನಿರ್ಮಿಸಿದ್ದೇ ರಾಮಧ್ವಜ ಹಾರಿಸಬೇಕೆಂದು. ಅವರ ಭಾವನೆ ವಿರುದ್ಧ ಸರ್ಕಾರ ನಡೆದುಕೊಳ್ಳುತ್ತಿದೆ. ಜನವರಿ 26ರಂದು ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಗೌರವ ಕೊಟ್ಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅಗೌರ ತೋರಿರುವುದು ರಾಜ್ಯ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರಕ್ಕೆ ರಾಷ್ಟ್ರಧ್ವಜವನ್ನ ಹೇಗೆ ಹಾರಿಸಬೇಕು ಎಂಬುವುದು ಗೊತ್ತಿಲ್ಲ. ಧ್ವಜ ಯಾವ ಅಳತೆ ಇರಬೇಕು, ಯಾವುದನ್ನೂ ಲೆಕ್ಕಿಸದೆ ಸರ್ಕಾರ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ಕಾಂಗ್ರೆಸ್ ಮೊದಲು ದೇಶ-ರಾಜ್ಯದ ಜನರ ಕ್ಷಮೆ ಕೇಳಬೇಕು. ಗ್ರಾಮ ಪಂಚಾಯಿತಿ ಸದಸ್ಯರ ತೀರ್ಮಾನದಂತೆ ಧ್ವಜ ಹಾರಿಸಲಾಗಿದೆ. ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿಗಳು ದ್ವಂದ್ವದಲ್ಲಿದ್ದಾರೆ. ಹೀಗಾಗಿ ಯಾವುದೇ ತೀರ್ಮಾನ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ರಾಮ ಭಕ್ತನು ದುಷ್ಟ ರಾಜ್ಯ ಸರ್ಕಾರದ ನಡವಳಿಕೆಯನ್ನು ಗಮನಿಸುತ್ತಿದ್ದಾನೆ. ರಾಜ್ಯ-ದೇಶದಲ್ಲಿ ಹನುಮ ಧ್ವಜಕ್ಕೆ ಕಾಂಗ್ರೆಸ್ ವಿರೋಧಿಸುವುದು ನಾಚಿಕೆಗೇಡು ಎಂದರು.
ಇದನ್ನೂ ಓದಿ: ಜಿಲ್ಲಾಡಳಿತದ ನಡೆ ತಪ್ಪಾಗಿದೆ ಎಂದ ಸುಮಲತಾ; ಮುಚ್ಚಳಿಕೆ ವಿರುದ್ಧವಾಗಿ ನಡೆದುಕೊಂಡಿದ್ದೇಕೆ ಎಂದ ಸಿದ್ದರಾಮಯ್ಯ
ಬಿವೈ ವಿಜಯೇಂದ್ರ ಅವರು ತಡರಾತ್ರಿ ಧರ್ಮಸ್ಥಳದ ಸನ್ನಿಧಿಯಲ್ಲಿ ವಾಸ್ತವ್ಯ ಮಾಡಿದ್ದರು. ಇಂದು (ಜ.31) ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬಿವೈ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುಖಂಡ ಬ್ರೀಜೆಶ್ ಚೌಟ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಾಥ್ ನೀಡಿದರು. ಬೆಳಿಗ್ಗೆ ದರ್ಶನ ಬಳಿಕ ಮೂಡಿಗೆರೆ ಕಾರ್ಯಕ್ರಮದಲ್ಲಿ ವಿಜಯೇಂದ್ರ ಭಾಗಿಯಾದರು.
ರಾಷ್ಟ್ರಧ್ವಜ ಹಾರಬೇಕಿದ್ದ ಜಾಗದಲ್ಲಿ ಹನುಮಧ್ವಜ ಹಾರಿಸಿರುವುದು, ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಈ ಯಾವುವೂ ಆಕಸ್ಮಿಕ ಅಲ್ಲ. ಈ ಘಟನೆಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ. ರಾಜ್ಯ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಜನರನ್ನು ಎತ್ತಿಕಟ್ಟುವ ಉದ್ದೇಶದಿಂದಲೇ ಇಂತಹದ್ದೊಂದು ಸ್ಥಿತಿ ನಿರ್ಮಾಣ ಮಾಡಲಾಗಿದೆ. ಬಿಜೆಪಿ ನಾಯಕರು ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸುವ ಸಂಚು ರೂಪಿಸಿರುವುದು ಲೋಕಸಭಾ ಚುನಾವಣೆಗೆ ನಡೆಸಿರುವ ತಯಾರಿಯಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸರು ತೆರವುಗೊಳಿಸಿದ್ದರು. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಮಂಗಳವಾರ (ಜ.29) ರಂದು ಕೆರೆಗೋಡಿನಿಂದ ಮಂಡ್ಯದ ವರೆಗು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ದೂರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ