ಕಾಂಗ್ರೆಸ್ಗೆ ಮತ ಹಾಕದಿದ್ದರೆ ಗ್ಯಾರಂಟಿಗಳು ರದ್ದು: ಮಾಗಡಿ ಶಾಸಕ ಬಾಲಕೃಷ್ಣ ಎಚ್ಚರಿಕೆಗೆ ವಿಜಯೇಂದ್ರ ತಿರುಗೇಟು
ಮಂಗಳವಾರ ಮಾಗಡಿ ತಾಲೂಕು ಕುದೂರು ಹೋಬಳಿಯ ಶ್ರೀಗಿರಿಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ್ದ ಬಾಲಕೃಷ್ಣ, ಮತದಾರರನ್ನು ಬ್ಲ್ಯಾಕ್ಮೇಲ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗಿದೆ ಎಂದಿದ್ದಾರೆ.
ಬೆಂಗಳೂರು, ಜನವರಿ 31: ‘ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಗ್ಯಾರಂಟಿ ಯೋಜನೆಗಳಿಗೋ ಎಂಬುದನ್ನು ನಿರ್ಧರಿಸಿ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಹೆಚ್ಚು ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು’ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ (HC Balakrishna) ಮತದಾರರನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ಓಟಿಗಾಗಿ ನೋಟು ಎನ್ನುತ್ತಿದ್ದ ಕಾಂಗ್ರೆಸ್ಸಿಗರು ಕಳೆದ ಚುನಾವಣೆಯಲ್ಲಿ ಓಟಿಗಾಗಿ ಬಿಟ್ಟಿ ಗ್ಯಾರಂಟಿ ಎಂದರು. ಇದೀಗ ಓಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಏಟು ಕೊಡುವುದಾಗಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏನು ಹೇಳಿದ್ದರು ಬಾಲಕೃಷ್ಣ?
ಮಂಗಳವಾರ ಮಾಗಡಿ ತಾಲೂಕು ಕುದೂರು ಹೋಬಳಿಯ ಶ್ರೀಗಿರಿಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ್ದ ಬಾಲಕೃಷ್ಣ, ಬಿಜೆಪಿಯವರು ಮಂದಿರದ ಹೆಸರಿನಲ್ಲಿ ಅಕ್ಷತೆ ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಉಚಿತ ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ದೊರೆಯುವಂತೆ ಮಾಡದಿದ್ದರೆ ಗ್ಯಾರಂಟಿಗಳ ಬಗ್ಗೆ ಜನರಿಗೆ ಒಲವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದರು.
ಅಲ್ಲದೆ, ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎಂದೂ ಅವರು ಹೇಳಿದ್ದರು.
ಬಾಲಕೃಷ್ಣ ಹೇಳಿಕೆ ಅಕ್ಷಮ್ಯ ಅಪರಾಧ: ವಿಜಯೇಂದ್ರ
ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯ, ಶ್ರೀರಾಮನ ಜೈಕಾರ, ಕೇಸರಿಯ ವಿಸ್ತಾರ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ, ಅಖಾಡಕ್ಕೆ ಬರುವ ಮುನ್ನವೇ ಸೋಲೊಪ್ಪಿಕೊಳ್ಳುವಂತೆ ಮಾಡಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ತಾಕತ್ ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ: ಸಿಎಂ ಸಿದ್ದರಾಮಯ್ಯಗೆ ಹೆಚ್ಡಿ ಕುಮಾರಸ್ವಾಮಿ ಸವಾಲು
ಪ್ರಬುದ್ಧತೆಗೆ ಹೆಸರಾದ ನಮ್ಮ ಕರ್ನಾಟಕದ ಮತದಾರರನ್ನು ಆಮಿಷಗಳಿಗೆ ಬಲಿಯಾಗುವ ದುರ್ಬಲ ಮನಸ್ಸಿನವರು ಎಂದು ಭಾವಿಸಿರುವ ಕಾಂಗ್ರೆಸ್, ಪಕ್ಷದ ಶಾಸಕರೊಬ್ಬರ ಮೂಲಕ ಮತದಾರರನ್ನು ಬಿಕ್ಷುಕರಂತೆ ಬೆದರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ಕೊಡಿಸಿರುವುದು ಅಕ್ಷಮ್ಯ ಅಪರಾಧ. ಈ ಕೂಡಲೇ ಕಾಂಗ್ರೆಸ್ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವೆ. ‘ಯಾರದೋ ದುಡ್ಡು ಯಲ್ಲಮನ ಜಾತ್ರೆ’ಯ ರೀತಿ ಜನರ ತೆರಿಗೆಯಿಂದ ರಾಜ್ಯದ ಬೊಕ್ಕಸ ಸೇರುವ ಹಣವನ್ನು ಬಿಟ್ಟಿ ಭಾಗ್ಯದ ಹೆಸರಿನ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡರೂ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಈ ನಡುವೆ ಫಲಾನುಭವಿ ಜನರನ್ನು ಹಂಗಿಸಿ ಬೆದರಿಸಿ ಕರ್ನಾಟಕದ ಮಾನ ಕಳೆಯುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ