ಕರ್ನಾಟಕ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು ದಿಲ್ಲಿಯಲ್ಲಿ ಓಡಾಟ, ಹೈಕಮಾಂಡ್ ನಾಯಕರ ಜತೆ ಮಾತುಕತೆ
ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಕೋರ್ ಕಮಿಟಿಯಿಂದ ಅಭ್ಯರ್ಥಿಗಳ ಪಟ್ಟಿ ಹೋಗುವುದಕ್ಕೂ ಮೊದಲೇ ಕೆಲ ಕ್ಷೇತ್ರಗಳಿಗೆ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ. ಹೈಕಮಾಂಡ್ ಪಟ್ಟಿಯಲ್ಲಿರುವ ಕೆಲ ನಾಯಕರು ದೆಹಲಿಗೆ ಹೋಗಿದ್ದು, ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು, (ಜನವರಿ 30): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ , ಈಗಾಗಲೇ ರಾಜ್ಯ ನಾಯಕರಿಗೆ ಸೂಚಿಸಿದೆ. ಮತ್ತೊಂದೆಡೆ ಬಿಜೆಪಿಯಲ್ಲೂ ಸಹ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಬಾರಿ ಹೈಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಹೈಕಮಾಂಡ್ನಿಂದಲೇ ಕೆಲವರಿಗೆ ಚುನಾವಣೆಗೆ ತಯಾರಾಗುವಂತೆ ಸೂಚನೆಗಳು ಹೋಗಿವೆ ಎಂದು ತಿಳಿದುಬಂದಿದೆ. ಅದರಲ್ಲೂ ಪ್ರಮುಖವಾಗಿ ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಎನ್ನಲಾಗಿದ್ದು, ಈ ಸಂಬಂಧ ಉಭಯ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಬಳ್ಳಾರಿಯಿಂದ ಶ್ರೀರಾಮುಲು ಕಣಕ್ಕೆ?
ಹೌದು…ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿರುವ ಶ್ರೀರಾಮುಲು ಅವರಿಗೆ ಲೋಕಸಭಾ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಂತೆ ಶ್ರೀರಾಮುಲುಗೆ ಹೈಕಮಾಂಡ್ನಿಂದಲೇ ಸೂಚನೆಗಳು ಬಂದಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಶ್ರೀರಾಮುಲು ದೆಹಲಿಗೆ ಹಾರಿದ್ದು, ಹೈಕಮಾಂಡ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೊದಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಸ್ಪರ್ಧೆ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇದೇ ವೇಳೆ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಡಾ ಕೆ ಸುಧಾಕರ್?
ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಡಾ ಕೆ ಸುಧಾಕರ್ಗೆ ಸೂಚನೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಸುಧಾಕರ್ ಅವರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದು, ಮೊದಲಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ತದನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರದೀಪ್ ಈಶ್ವರ್ ವಿರುದ್ಧ ಸೋಲುಕಂಡಿದ್ದಾರೆ. ಹೀಗಾಗಿ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಅಖಾಡಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಹಾಲಿ ಬಿಜೆಪಿ ಸಂಸದ ಬಚ್ಚೇಗೌಡ ಇದ್ದಾರೆ. ಆದ್ರೆ, ಅವರು ಹೆಚ್ಚು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಪುತ್ರ ಶರತ್ಗೆ ಬೆಂಬಲಿಸಿದ್ದರು ಎನ್ನುವ ಆರೋಪಗಳು ಕೇಳಿಬಂದಿದೆ. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕಟ್ ಆಗುವುದು ಪಕ್ಕಾ ಆಗಿದೆ. ಹೀಗಾಗಿ ತಯಾರಾಗುವಂತೆ ಸುಧಾಕರ್ಗೆ ಸೂಚನೆಗ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ